ನವೆಂಬರ್‌ ಕ್ರಾಂತಿ| ಸತೀಶ್‌-ಸುರ್ಜೇವಾಲಾ ಭೇಟಿ; ಹೈಕಮಾಂಡ್‌ಗೆ ಸಂದೇಶ ರವಾನಿಸಿದರಾ ಸಿಎಂ ?

ನ.15 ರಂದು ಕಪಿಲ್‌ ಸಿಬಲ್‌ ನಿವಾಸದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುತ್ತಿದ್ದು, ಅವಕಾಶ ದೊರೆತರೆ ಹೈಕಮಾಂಡ್‌ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Update: 2025-11-12 08:11 GMT

ರಾಜ್ಯ ಕಾಂಗ್ರೆಸ್‌ನಲ್ಲಿ ʼನವೆಂಬರ್‌ ಕ್ರಾಂತಿʼಯ ಹೇಳಿಕೆಗಳು ತೀವ್ರ ಸಂಚಲನ ಮೂಡಿಸಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಬಣದಲ್ಲಿ ಚಟುವಟಿಕೆಗಳು ತೀವ್ರಗೊಂಡಿವೆ.

ಸಿಎಂ ಬದಲಾವಣೆ ಸನ್ನಿಹಿತವಾಗುತ್ತಿದೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ತಮ್ಮ ಪರಮಾಪ್ತ ಸಚಿವ ಸತೀಶ್‌ ಜಾರಕಿಹೊಳಿ ಮೂಲಕ ಸಂದೇಶ ಕಳುಹಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರ ಬದಲಾವಣೆಗೆ ಹೈಕಮಾಂಡ್‌ ಮುಂದಾದರೆ ಮುಂದೆ ಎದುರಾಗುವ ಪರಿಣಾಮಗಳಿಗೆ ನೇರ ಹೊಣೆಯಾಗಬೇಕಾಗುತ್ತದೆ ಎಂಬ ಎಚ್ಚರಿಕೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಉತ್ತರಾಧಿಕಾರಿ ಎಂದೇ ಬಿಂಬಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಬುಧವಾರ ನವದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಹೈಕಮಾಂಡ್‌ ಬಳಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಡಿ.ಕೆ. ಶಿವಕುಮಾರ್‌ ಪರ ಲಾಬಿ ನಡೆಸುತ್ತಿರುವುದು ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿ, ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿತ್ತು. ಈಗ ಅವರ ಮೂಲಕವೇ ಹೈಕಮಾಂಡ್‌ಗೆ ಎಚ್ಚರಿಕೆ ಸಂದೇಶ ನೀಡಿರುವುದು ಚರ್ಚೆಗೆ ಕಾರಣವಾಗಿದೆ. 

ನ.15 ರಂದು ಕಪಿಲ್‌ ಸಿಬಲ್‌ ನಿವಾಸದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುತ್ತಿದ್ದು, ಅವಕಾಶ ದೊರೆತರೆ ಹೈಕಮಾಂಡ್‌ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೂ ಮುಂಚೆಯೇ ಪರಮಾಪ್ತನಿಂದ ತಮ್ಮ ನಿಲುವು, ಅಧಿಕಾರ ಬದಲಾವಣೆಯಿಂದ ಆಗುವ ಗೊಂದಲ ಹಾಗೂ ರಾಜ್ಯ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗುವ ಬಿಕ್ಕಟ್ಟುಗಳ ಕುರಿತು ಸೂಚ್ಯವಾಗಿ ಹೇಳಿಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. 

ಸುರ್ಜೇವಾಲಾ ಭೇಟಿಯ ವೇಳೆ ನಡೆದ ಚರ್ಚೆಯೇನು?

ಸತೀಶ್‌ ಜಾರಕಿಹೊಳಿ ಹಾಗೂ ಸುರ್ಜೇವಾಲಾ ನಡುವಿನ ಮಹತ್ವದ ಮಾತುಕತೆಯಲ್ಲಿ ಹಲವು ಚರ್ಚೆಗಳು ನಡೆದಿವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಂಪುಟ ಪುನಾರಚನೆ ಮತ್ತು ರಾಜ್ಯ ರಾಜಕೀಯದ ಮುಂದಿನ ನಡೆಗಳ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಸಿದ್ಧ ಎಂದು ಹೇಳಿದ್ದ ಸತೀಶ್ ಜಾರಕಿಹೊಳಿ, ಮತ್ತೆ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕುರಿತ ಆತುರದ ನಿರ್ಧಾರದಿಂದ ರಾಜ್ಯದ ಆಡಳಿತ ಸ್ಥಿರತೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎಂದು ಹೇಳಲಾಗಿದೆ.

ಹೈಕಮಾಂಡ್ ತೀರ್ಮಾನ ಕೈಗೊಳ್ಳುವ ಮುನ್ನ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಬೇಕು ಎಂಬ ಮನವಿಯನ್ನೂ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸತೀಶ್‌ ಜಾರಕಿಹೊಳಿ ಅವರ ಎಲ್ಲ ಅಹವಾಲುಗಳನ್ನು ಆಲಿಸಿದ ಸುರ್ಜೇವಾಲಾ ಅವರು ಯಾವುದೇ ಸ್ಪಷ್ಟ ಉತ್ತರ ನೀಡದೇ ಪಕ್ಷದ ಹಿತದೃಷ್ಟಿಯಿಂದ ಎಲ್ಲ ವಿಚಾರಗಳನ್ನೂ ಗಮನಿಸಲಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಸತೀಶ್ ಜಾರಕಿಹೊಳಿ ಅವರ ದೆಹಲಿ ಭೇಟಿಯು ಸಿದ್ದರಾಮಯ್ಯ ನೇತೃತ್ವದ ಮೇಲೆ ಹೈಕಮಾಂಡ್ ನಿಲುವು ಪರೀಕ್ಷಿಸುವ ಕ್ರಮವಾಗಿರಬಹುದು. ರಾಜ್ಯದೊಳಗಿನ ಅಧಿಕಾರದ ಸಮತೋಲನ ಹೇಗಿರಬೇಕು ಎಂಬ ಚರ್ಚೆಗೆ ಹೊಸ ಆಯಾಮ ನೀಡಿದೆ ಎಂದು ವಿಶ್ಲೇಷಿಸಲಾಗಿದೆ.

Tags:    

Similar News