ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಕಾಂಗ್ರೆಸ್ ನಿರ್ನಾಮ: ಕುರುಬರ ಸಂಘ ಎಚ್ಚರಿಕೆ
ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಸಂದರ್ಭ ಬಂದಲ್ಲಿ, ಕುರುಬರ ಸಂಘವೇ ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಿ ಆಗುವ ಪರಿಣಾಮಗಳ ಬಗ್ಗೆ ಮನವರಿಕೆ ಮಾಡುವುದಾಗಿ ಕುರುಬ ನಾಯಕರು ಹೇಳಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅಧಿಕಾರಾವಧಿ ಎರಡೂವರೆ ವರ್ಷ ಆಗುತ್ತಿದ್ದಂತೆ ರಾಜಕೀಯವಾಗಿ ಎದ್ದಿರುವ ಮುಖ್ಯಮಂತ್ರಿ ಬದಲಾವಣೆ ಚರ್ಚೆಯ ನಡುವೆ, ರಾಜ್ಯದ ಮೂರನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಕುರುಬ ಸಮುದಾಯ ಸಿದ್ದರಾಮಯ್ಯ ಪರವಾಗಿ ಒಕ್ಕೊರಲ ಬೆಂಬಲ ವ್ಯಕ್ತಪಡಿಸಿದೆ.
ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಸಂದರ್ಭ ಬಂದಲ್ಲಿ, ಕುರುಬರ ಸಂಘವೇ ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಆಗುವ ಪರಿಣಾಮಗಳ ಬಗ್ಗೆ ಮನವರಿಕೆ ಮಾಡುವುದಾಗಿಯೂ ಹೇಳಿದೆ.
ರಾಜಕೀಯ ಸನ್ನಿವೇಶಗಳು ಬಿಗಡಾಯಿಸಿ, ಒಂದು ವೇಳೆ ಸಿದ್ದರಾಮಯ್ಯ ಪದ ತ್ಯಾಗವಾದರೆ ರಾಜ್ಯದಲ್ಲಿ ರಾಜಕೀಯ ಬೆಂಕಿ ಬೀಳಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂಬ ಎಚ್ಚರಿಕೆಯನ್ನೂ ಸಮೂದಾಯ ನೀಡಿದೆ. ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ರಾಜ್ಯ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ವಿ. ಸೋಮಶೇಖರ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ. ಅವರು ನೀಡಿದ ವಿಶೇಷ ಸಂದರ್ಶನದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಸುದ್ದಿಗಳು, ಚರ್ಚೆಗಳ ಬಗ್ಗೆ ಪ್ರತಿಕ್ರಿಯಸಿದ್ದಾರೆ. ಜತೆಗೆ ಕಾಂಗ್ರೆಸ್ ಹೈಕಮಾಂಡ್‌ಗೆ ನೇರವಾದ ಎಚ್ಚರಿಕೆಯನ್ನೂ ನೀಡಿದೆ.
ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ದಲಿತ ವರ್ಗಗಳ) ನಾಯಕರಾಗಿರುವ ಸಿದ್ದರಾಮಯ್ಯ ಹಿಂದುಳಿದ ವರ್ಗವಾದ ಕುರುಬ ಜನಾಂಗಕ್ಕೆ ಸೇರಿದ್ದು, ಅಂತಹ ನಾಯಕನನ್ನು ಬದಲಿಸಿದರೆ ರಾಜ್ಯದಲ್ಲಿ ರಾಜಕೀಯ ಬೆಂಕಿ ಬೀಳಲಿದ್ದು, ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
"ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಿಲ್ಲ ಎಂದುಕೊಂಡಿದ್ದೇವೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಅವರು ಯಾವ ತಪ್ಪು ಮಾಡಿದ್ದಾರೆ? ಎಂದು ಪ್ರಶ್ನಿಸಿರುವ ಸೋಮಶೇಖರ್, ಒಂದು ವೇಳೆ ಕಾಂಗ್ರೆಸ್ ಅಂತಹ ನಿರ್ಧಾರ ಕೈಗೊಂಡರೆ ಕಾಂಗ್ರೆಸ್ ಪಕ್ಷ ಭಾರೀ ಅನಾಹುತವನ್ನು ಎದುರುನೋಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
"ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಳಿಸಿದರೆ ಕಾಂಗ್ರೆಸ್ ಸರ್ವನಾಶ ಆಗಲಿದೆ. ಕಾಂಗ್ರೆಸ್ ಪಕ್ಷ ಈ ರಾಜ್ಯದಲ್ಲಿ ತಳವೂರಲು ಸಿದ್ದರಾಮಯ್ಯ ಅನಿವಾರ್ಯರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ . ಹಿಂದುಳಿದ ಹಾಗು ದಲಿತರ ಮತಗಳು ಸಿದ್ದರಾಮಯ್ಯ ಅವರ ಮುಖನೋಡಿಕೊಂಡು ಕಾಂಗ್ರೆಸ್ ಗೆ ಬಂದಿವೆ ಎಂದು ಅವರು ನೇರವಾಗಿ ಹೇಳಿದ್ದಾರೆ.
ಅಹಿಂದ ಸ್ವಾಮೀಜಿಗಳ ಬೆಂಬಲ ಇದೆ
"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇವಲ ಕುರುಬರ ಸ್ವಾಮೀಜಿ ಮಾತ್ರ ಅಲ್ಲ ಹಿಂದುಳಿದ ಹಾಗು ದಲಿತ ಸಮುದಾಯದ ಸ್ವಾಮೀಜಿಗಳ ಬೆಂಬಲ ಇದೆ. ಈಗಾಗಲೇ ಸ್ವಾಮೀಜಿಗಳು ಅಹಿಂದ ವರ್ಗಗಳು ಸಿದ್ದರಾಮಯ್ಯ ಬೆನ್ನಿಗೆ ನಿಲ್ಲುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಪದಚ್ಯುತಿಗೊಳಿಸಿದರೆ ಸ್ವಾಮೀಜಿಗಳ ಜತೆಗೂಡಿ ನಾವೆಲ್ಲಾ ಬೀದಿಗಿಳಿಯುತ್ತೇವೆ. ಇಡೀ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ," ಕಾಂಗ್ರೆಸ್‌ಗೆ ಅವರು ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಕ್ರಾಂತಿ ಆಗಲಿದೆ ಎಂದು ಎಚ್ಚರಿಕೆ
ರಾಜಕೀಯ ಪಲ್ಲಟಗಳು ನಡೆದು ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ತ್ಯಜಿಸಿದರೆ, ರಾಜ್ಯದಲ್ಲ ಕ್ರಾಂತಿ ಸಂಭವಿಸಲಿದೆ. ಸಿದ್ದರಾಮಯ್ಯ ಅವರೂ ಕೂಡ, ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಯಾವುದೇ ತಿರ್ಮಾನವನ್ನು ಸಹಾ ತೆಗೆದುಕೊಳ್ಳುವ ಸಾಧ್ಯತೆ ಇದೆ," ಎಂದು ಸೋಮಶೇಖರ್ ಅವರು ಭವಿಷ್ಯ ನುಡಿದಿದ್ದಾರೆ.
ಚೀಟಿ ನೀಡಿ ಬದಲಾಯಿಸಲಾಗದು!
"ಈ ಹಿಂದೆ ಕಾಂಗ್ರೆಸ್ ಸಿಎಂಗಳನ್ನು ಚೀಟಿ ನೀಡಿ ಬದಲಾಯಿಸುವ ರೀತಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಲು ಆಗಲ್ಲ. ಸಿದ್ದರಾಮಯ್ಯ ಶಕ್ತಿ ಎನೆಂದು ಕಾಂಗ್ರೆಸ್ ಉನ್ನತ ನಾಯಕ ರಾಹುಲ್ ಗಾಂಧಿಗೆ ಗೊತ್ತಿದೆ. ಈ ಹಿಂದೆ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರು ಜನ್ಮದಿನಾಚರಣೆ ಸಮಾವೇಶ ಮಾಡಿದಾಗ ರಾಹುಲ್ ಗಾಂಧಿ ಸಹಾ ವೇದಿಕೆಗೆ ಕಾರಿನಲ್ಲಿ ಬರಲು ಆಗಿರಲಿಲ್ಲ. ಲಕ್ಷಾಂತರ ಜನ ಸೇರಿ, ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನವಾಗಿತು. ಸಿದ್ದರಾಮಯ್ಯ ಅವರ ಶಕ್ತಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲ ಅಲ್ಲ ರಾಷ್ಟ್ರ. ಮಟ್ಟದಲ್ಲೂ ಇದೆ. ಸಿದ್ದರಾಮಯ್ಯಗೆ ಸಿದ್ದರಾಮಯ್ಯ ಅವರೇ ಸಾಟಿ," ಎಂದವರು ಹೇಳಿದ್ದಾರೆ.
ರಾಜ್ಯ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ವಿ. ಸೋಮಶೇಖರ್ ಅವರ ಜತೆಗಿನ ವಿಶೇಷ ಸಂದರ್ಶನದ ಪೂರ್ಣಪಾಠವನ್ನು ಈ ವಿಡಿಯೋ ಲಿಂಕ್‌ನಲ್ಲಿ ನೋಡಬಹುದು.