ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆ; ಸಿಎಂ ಘೋಷಣೆ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಮಹಿಳಾ ನೌಕರರ ಸಮ್ಮೇಳನದಲ್ಲಿ ಮಹಿಳಾ ನೌಕರರ ಸಂಘದ ಮನವಿಗೆ ಸ್ಪಂದಿಸಿ ಸೆಪ್ಟೆಂಬರ್ 13 ಮಹಿಳಾ ದಿನ ಎಂದು ಮಹತ್ವದ ಘೋಷಣೆ ಮಾಡಿದರು.
ಸರ್ಕಾರಿ ಮಹಿಳಾ ನೌಕರರ ಸಂಘದವರು ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು.
ರಾಜ್ಯದಲ್ಲಿ ಸೆಪ್ಟೆಂಬರ್ 13 ಅನ್ನು ಮಹಿಳಾ ನೌಕರರ ದಿನವನ್ನಾಗಿ ಆಚರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಮಹಿಳಾ ನೌಕರರ ಸಮ್ಮೇಳನದಲ್ಲಿ ಮಹಿಳಾ ನೌಕರರ ಸಂಘದ ಮನವಿಗೆ ಸ್ಪಂದಿಸಿ ಈ ಘೋಷಣೆ ಮಾಡಿದರು.
ಬಳಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 13 ರಂದು ಮಹಿಳಾ ದಿನ ಎಂದು ಘೋಷಣೆ ಮಾಡಿ ಎಂದು ನೌಕರರ ಸಂಘದ ಪ್ರಮುಖರು ಮನವಿ ಮಾಡಿದರು. ಮಹಿಳಾ ದಿನ ಅಷ್ಟೇ, ಆದರೆ ರಜೆ ನೀಡುವುದಿಲ್ಲ. ನೀವು ಕೇಳಿದರೆ ಬೇಡ ಅನ್ನೋಕ್ಕಾಗುತ್ತಾ? ಎಂದು ಪ್ರಶ್ನಿಸಿದರು. ಮಹಿಳೆಯರು ಪುರುಷರಲ್ಲಿ ಬೇಧ ಭಾವ ಇಲ್ಲ. ಕಾನೂನು ಪ್ರಕಾರ ಎಲ್ಲರೂ ಸಮಾನರು. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಕೆಲಸ ಮಾಡ್ತಿದ್ದಾರೆ. ಲಿಂಗ ತಾರತಮ್ಯ ಹೋಗಲಾಡಿಲು ಪ್ರಯತ್ನ ನಡೆಸುತ್ತಿದ್ದೇವೆ ಎಂದರು.
ಮಹಿಳೆಯರು ತಮ್ಮ ಕುಟುಂಬಗಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಮೂಢನಂಬಿಕೆಗಳನ್ನು ಮತ್ತು ಅಂಧಶ್ರದ್ಧೆಯನ್ನು ದೂರ ಮಾಡುವ ಕೆಲಸವನ್ನು ತಾಯಂದಿರು ಮಕ್ಕಳಿಗೆ ಕಲಿಸಬೇಕು. ದುರದೃಷ್ಟವಶಾತ್, ಅನೇಕ ವಿಜ್ಞಾನಿಗಳು, ವೈದ್ಯರು ಮತ್ತು ಎಂಜಿನಿಯರ್‌ಗಳು ಸಹ ಮೂಢನಂಬಿಕೆಗಳನ್ನು ನಂಬುತ್ತಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಅಲ್ಲದೆ, ಜಾತಿಯನ್ನು ಮುಂದಿಟ್ಟುಕೊಂಡು ಮಕ್ಕಳಿಗೆ ಜಾತೀಯತೆಯನ್ನು ತುಂಬುವ ಕೆಲಸ ಮಾಡಬಾರದು. ಮಹಿಳೆಯರ ಸಬಲೀಕರಣ ಆಗಬೇಕು ಎಂಬುದು ತಮ್ಮ ಸರ್ಕಾರದ ಗುರಿ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ದುಡಿಯುವ ಮಹಿಳಾ ನೌಕರರಿಗಾಗಿ ತಿಂಗಳಿಗೊಂದು ವೇತನ ಸಹಿತ ಋತುಚಕ್ರ ರಜೆ ನೀಡುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿರುವ ಸರ್ಕಾರದ ಕ್ರಮಕ್ಕೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿಶೇಷ ಸನ್ಮಾನ ಮಾಡಿ, ಕೃತಜ್ಞತೆ ಸಲ್ಲಿಸಿದರು.
ಸಿ.ಎಂಗೆ ಸನ್ಮಾನ
ಋತುಚಕ್ರದ ಸಮಯದಲ್ಲಿ ಉದ್ಯೋಗಸ್ಥ ಮಹಿಳೆಯರು ಅನುಭವಿಸುವ ನೋವು, ವೇದನೆಯನ್ನು ಮನಗಂಡು, ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಹಾಗೂ ಖಾಸಗಿ ವಲಯಗಳ ಮಹಿಳಾ ನೌಕರರಿಗಾಗಿ ತಿಂಗಳಿಗೊಂದು ವೇತನ ಸಹಿತ ಋತುಚಕ್ರ ರಜೆ ನೀಡುವ ಐತಿಹಾಸಿಕ ತೀರ್ಮಾನವನ್ನು ನಮ್ಮ ಸರ್ಕಾರ ಕೈಗೊಂಡಿದೆ. ಇದು ನಾಡಿನ ಲಕ್ಷಾಂತರ ಅಕ್ಕ - ತಂಗಿಯರ ವೃತ್ತಿಬದುಕಿನಲ್ಲಿ ಹೊಸ ಬದಲಾವಣೆಗೆ ಕಾರಣವಾಗಲಿದ್ದು, ಈ ನಿರ್ಧಾರದ ಬಗ್ಗೆ ನನಗೆ ಅತ್ಯಂತ ಸಂತೃಪ್ತಭಾವವಿದೆ ಎಂದು ಮುಖ್ಯಮಂತ್ರಿಗಳು ತಮ್ಮ ಸಂತೋಷ ವ್ಯಕ್ತಪಡಿಸಿದರು.