ಬೆಳಗಾವಿ ಅಧಿವೇಶನ: ಬಣ ರಾಜಕೀಯ ಶಮನಕ್ಕೆ ಸಿಎಂ ಕಸರತ್ತು, 9ರಂದು ಶಾಸಕಾಂಗ ಪಕ್ಷದ ಸಭೆ

ರಾಜ್ಯದಲ್ಲಿ ಅಧಿವೇಶನದ ಕಾವು ಏರುತ್ತಿರುವಾಗಲೇ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಹಠಾತ್ ದೆಹಲಿ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Update: 2025-12-04 11:05 GMT
Click the Play button to listen to article

ಸುವರ್ಣಸೌಧದಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಆಂತರಿಕ ಚಟುವಟಿಕೆಗಳು ಗರಿಗೆದರಿದ್ದು. ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಎದುರಿಸುವ ತಂತ್ರಗಾರಿಕೆಗಿಂತ ಸ್ವಪಕ್ಷೀಯರ ಬಣ ರಾಜಕೀಯವನ್ನು ಶಮನ ಮಾಡುವುದೇ ಮುಖ್ಯಮಂತ್ರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ 9ರಂದು ಬೆಳಗಾವಿಯಲ್ಲಿ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ಕರೆಯಲಾಗಿದೆ.

ಡಿಸೆಂಬರ್ 9ರಂದು ಸಂಜೆ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಈ ಸಭೆಯು ಕೇವಲ ಅಧಿವೇಶನದ ಕಾರ್ಯತಂತ್ರಗಳಿಗೆ ಸೀಮಿತವಾಗಿಲ್ಲ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ಮರುಕಳಿಸಿರುವ ಬಣ ರಾಜಕೀಯ, ಕುರ್ಚಿ ಆಕಾಂಕ್ಷಿಗಳ ಬಹಿರಂಗ ಹೇಳಿಕೆಗಳು ಮತ್ತು ಅದರಿಂದ ಪಕ್ಷಕ್ಕೆ ಉಂಟಾಗುತ್ತಿರುವ ಮುಜುಗರದ ಕುರಿತು ಗಂಭೀರ ಚರ್ಚೆ ನಡೆಯುವ ಸಾಧ್ಯತೆಯಿದೆ.

ಕೆಲ ಶಾಸಕರು ಬಹಿರಂಗವಾಗಿಯೇ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡುತ್ತಿರುವುದು ಪಕ್ಷದಲ್ಲಿನ ಸಮನ್ವಯದ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ಇದರಿಂದಾಗಿ ಕೆಲ ಶಾಸಕರು ಬಣ ರಾಜಕೀಯದಿಂದ ವಿಮುಖರಾಗುವ ಸೂಚನೆಯನ್ನೂ ನೀಡಿದ್ದಾರೆ. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ಮತ್ತು ಶಾಸಕರ ನಡುವೆ ಸಮನ್ವಯ ಸಾಧಿಸುವ ಪ್ರಯತ್ನ ನಡೆಸಲಿದ್ದಾರೆ. ಸದನದಲ್ಲಿ ವಿರೋಧ ಪಕ್ಷಗಳ ದಾಳಿಯನ್ನು ಎದುರಿಸಲು ಒಗ್ಗಟ್ಟು ಪ್ರದರ್ಶಿಸುವಂತೆ ಶಾಸಕರಿಗೆ ಸಿಎಂ ಖಡಕ್ ಸಂದೇಶ ರವಾನಿಸುವ ನಿರೀಕ್ಷೆಯಿದೆ.

ದೆಹಲಿ ಹಾದಿ ಹಿಡಿದ ಬಿ.ಕೆ. ಹರಿಪ್ರಸಾದ್

ರಾಜ್ಯದಲ್ಲಿ ಅಧಿವೇಶನದ ಕಾವು ಏರುತ್ತಿರುವಾಗಲೇ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಹಠಾತ್ ದೆಹಲಿ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದನ್ನು ಮುಗಿಸಿ ಬೆಂಗಳೂರಿಗೆ ಮರಳಿದ ಹರಿಪ್ರಸಾದ್, ನಿನ್ನೆ ರಾತ್ರಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಇಬ್ಬರು ಪ್ರಭಾವಿ ಸಚಿವರಲ್ಲದೆ, ಮುಖ್ಯಮಂತ್ರಿಗಳೊಂದಿಗೂ ಚರ್ಚೆ ನಡೆಸಿದ ಬಳಿಕವೇ ಅವರು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.

ಅಹಿಂದ ನಾಯಕರ ನಡೆ ಮತ್ತು ಹೈಕಮಾಂಡ್ ಅಂಗಳ

ಇತ್ತೀಚಿನ ದಿನಗಳಲ್ಲಿ ಬಿ.ಕೆ. ಹರಿಪ್ರಸಾದ್ ಅವರು 'ಅಹಿಂದ' ಸಮುದಾಯಗಳನ್ನು ಪ್ರತಿನಿಧಿಸುವ ಸಚಿವರು ಮತ್ತು ನಾಯಕರ ಸಭೆಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಪಕ್ಷದೊಳಗಿನ ಅಸಮಾಧಾನಗೊಂಡವರ ಗುಂಪಿಗೆ ಅವರು ಧ್ವನಿಯಾಗುತ್ತಿದ್ದಾರೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.

ಪ್ರಸ್ತುತ ಅವರ ದೆಹಲಿ ಭೇಟಿಯು ಹೈಕಮಾಂಡ್ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ವಿದ್ಯಮಾನಗಳು, ದಲಿತ ಮತ್ತು ಹಿಂದುಳಿದ ವರ್ಗಗಳ ನಾಯಕರ ಅಸಮಾಧಾನ ಹಾಗೂ ಅಧಿವೇಶನ ಸಂದರ್ಭದಲ್ಲಿ ಅನುಸರಿಸಬೇಕಾದ ನಡೆಗಳ ಬಗ್ಗೆ ಅವರು ವರಿಷ್ಠರಿಗೆ ವರದಿ ನೀಡುವ ಸಾಧ್ಯತೆಯಿದೆ.  

Tags:    

Similar News