Cabinet Meeting |ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡಲು ಸಂಪುಟ ಒಪ್ಪಿಗೆ
x

Cabinet Meeting |ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡಲು ಸಂಪುಟ ಒಪ್ಪಿಗೆ

ಸರ್ಕಾರಿ ಹಾಗೂ ಖಾಸಗಿ ಕಂಪೆನಿಗಳು ಸೇರಿದಂತೆ ರಾಜ್ಯದೊಳಗೆ ಕಾರ್ಯನಿರ್ವಹಿಸುತ್ತಿರುವ ಇತರ ಕಂಪೆನಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮುಟ್ಟಿನ ರಜೆ ನೀತಿಯಿಂದ ಅನುಕೂಲವಾಗಲಿದೆ.


ಸರ್ಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನ ಕಡ್ಡಾಯವಾಗಿ ವೇತನ ಸಹಿತ ಮುಟ್ಟಿನ ರಜೆ ನೀಡಲು ರಾಜ್ಯ ಸಚಿವ ಸಂಪುಟ ನಿರ್ಣಯಿಸಿದೆ.

ಬೆಂಗಳೂರಿನಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರಿ ಕಚೇರಿಗಳು, ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಗಳು, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಬಿಟಿ ಕಂಪೆನಿಗಳು ಮತ್ತು ರಾಜ್ಯದೊಳಗೆ ಕಾರ್ಯನಿರ್ವಹಿಸುತ್ತಿರುವ ಇತರ ಕಂಪೆನಿಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದು ದಿನದ ವೇತನ ರಜೆ ಮಂಜೂರು ಮಾಡುವ ಕಾರ್ಮಿಕ ಇಲಾಖೆಯ ʼ2025 ರ ಮುಟ್ಟಿನ ರಜೆ ನೀತಿʼಗೆ ಸಂಪುಟ ಅನುಮೋದನೆ ನೀಡಿದೆ.

ಕೇರಳ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ITI) ಮಹಿಳಾ ತರಬೇತಿದಾರರಿಗೆ ಎರಡು ದಿನಗಳ ಮುಟ್ಟಿನ ರಜೆ ನೀಡಲಾಗುತ್ತಿದೆ. ಬಿಹಾರ ಮತ್ತು ಒಡಿಶಾದಲ್ಲಿ ವಾರ್ಷಿಕ 12 ದಿನಗಳ ಮುಟ್ಟಿನ ರಜೆ ನೀತಿಯಿದೆ. ಆದರೆ, ಕರ್ನಾಟಕದಲ್ಲಿ ವೇತನ ಸಹಿತ ಮುಟ್ಟಿನ ರಜೆ ನೀಡಲಾಗುವುದು. ಇಂತಹ ಸಮಗ್ರ ನೀತಿ ಪರಿಚಯಿಸಿದ ಮೊದಲ ರಾಜ್ಯ ಕರ್ನಾಟಕ. ಇದು ಪ್ರಗತಿಪರ ಮಸೂದೆಯಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

2024 ರಲ್ಲಿ ರಾಜ್ಯ ಸರ್ಕಾರವು ವರ್ಷಕ್ಕೆ ಆರು ಮುಟ್ಟಿನ ರಜೆ ನೀಡುವ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ, ಈಗ ಮುಟ್ಟಿನ ರಜೆ ನೀತಿಯಡಿ 12 ರಜೆಗಳನ್ನು ನೀಡಲು ತೀರ್ಮಾನಿಸಲಾಗಿದೆ. ಪ್ರತಿಯೊಬ್ಬ ಮಹಿಳೆ ಅನುಭವಿಸುವ ದೈಹಿಕ ನೋವು ಮತ್ತು ಮಾನಸಿಕ ಒತ್ತಡವನ್ನು ಅರಿತು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಐದು ಲಕ್ಷ ಕಾರ್ಮಿಕರನ್ನು ಹೊಂದಿರುವ ನೂರಾರು ಗಾರ್ಮೆಂಟ್ಸ್‌ಗಳಿವೆ. ಅವುಗಳಲ್ಲಿ ಸುಮಾರು 90 ಪ್ರತಿಶತ ಮಹಿಳೆಯರು, ಐಟಿ ಮತ್ತು ಇತರ ವಲಯಗಳಲ್ಲಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಜನರಿಗೆ ಅನುಕೂಲವಾಗಲಿದೆ.


Read More
Next Story