ರಾಷ್ಟ್ರ ಪ್ರಶಸ್ತಿ ಪುರಸ್ಕೃತ ʼತಿಥಿʼ ಸಿನಿಮಾದ ಗಡ್ಡಪ್ಪ ಇನ್ನಿಲ್ಲ
ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದವರಾದ ಇವರು, ರಾಮ್ ರೆಡ್ಡಿ ನಿರ್ದೇಶನದ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ 'ತಿಥಿ' ಸಿನಿಮಾದಲ್ಲಿ ತಮ್ಮ ಸಹಜ ಮತ್ತು ವಿಶಿಷ್ಟ ನಟನೆಯಿಂದ ವಿಶ್ವಮಟ್ಟದಲ್ಲಿ ಗಮನ ಸೆಳೆದಿದ್ದರು.
ಖ್ಯಾತ ಕನ್ನಡ ಚಿತ್ರ 'ತಿಥಿ'ಯ ಪ್ರಮುಖ ಪಾತ್ರಧಾರಿ ಗಡ್ಡಪ್ಪ ಎಂದೇ ಜನಪ್ರಿಯರಾಗಿದ್ದ ಚನ್ನೇಗೌಡ ಅವರು ವಯೋಸಹಜ ಅನಾರೋಗ್ಯದಿಂದಾಗಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದವರಾದ ಇವರು, ರಾಮ್ ರೆಡ್ಡಿ ನಿರ್ದೇಶನದ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ 'ತಿಥಿ' ಸಿನಿಮಾದಲ್ಲಿ ತಮ್ಮ ಸಹಜ ಮತ್ತು ವಿಶಿಷ್ಟ ನಟನೆಯಿಂದ ವಿಶ್ವಮಟ್ಟದಲ್ಲಿ ಗಮನ ಸೆಳೆದಿದ್ದರು.
ಗಡ್ಡಪ್ಪ ಅವರು ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಒಂದು ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟಾಗಿದ್ದರಿಂದ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ಕೊನೆಯುಸಿರೆಳೆದಿದ್ದಾರೆ.
'ತಿಥಿ' ಚಿತ್ರದ ಜೊತೆಗೆ 'ತರ್ಲೆ ವಿಲೇಜ್', 'ಜಾನಿ ಮೇರಾ ನಾಮ್', 'ಹಳ್ಳಿ ಪಂಚಾಯಿತಿ' ಸೇರಿದಂತೆ ಸುಮಾರು ಎಂಟು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ನೆರವೇರಲಿದೆ ಎಂದು ಮೃತರ ಪುತ್ರಿ ಶೋಭಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
2015ರಲ್ಲಿ ‘ತಿಥಿ’ ಸಿನಿಮಾ ಬಿಡುಗಡೆಯಾಗಿತ್ತು. ನಿರ್ದೇಶಕ ರಾಮ್ ರೆಡ್ಡಿ ಅವರ ಮೊದಲ ಚಿತ್ರ ಇದಾಗಿತ್ತು. ಕರ್ನಾಟಕದ ಮಂಡ್ಯ ಜಿಲ್ಲೆಯ ನೋಡೆಕೊಪ್ಪಲು ಗ್ರಾಮದಲ್ಲಿ ನಡೆಯುವ ಕಥೆಯಾಗಿದ್ದು, ಹಳ್ಳಿಯ ಜೀವನ, ಕುಟುಂಬ ಸಂಬಂಧಗಳು ಮತ್ತು ಜಮೀನು ಸಮಸ್ಯೆಗಳನ್ನು ನೈಜ ರೀತಿಯಲ್ಲಿ ಚಿತ್ರಿಸಿದೆ, ಪ್ರೇಕ್ಷಕರಸಿನಿಮಾದ ಪ್ರಮುಖ ಪಾತ್ರವಾಗಿದ್ದ ಗಡ್ಡಪ್ಪ ಪಾತ್ರದಲ್ಲಿ ಚನ್ನೇಗೌಡ ಅವರು ನಟಿಸಿದ್ದರು. ಗಡ್ಡಪ್ಪ ಪಾತ್ರ ಹಳ್ಳಿಯಲ್ಲಿ ಸಂಚರಿಸುವ, ಉದಾಸೀನ ಮತ್ತು ಸ್ವತಂತ್ರ ವ್ಯಕ್ತಿಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದರು. ಅದರಲ್ಲೂ 80ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶ ಮಾಡಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದರು.