ಬೆಂಗಳೂರಿಗೆ ಸುರಂಗ: Part-4| 'ಪಂಚ ಕೆರೆ'ಗಳ ಜಲಮೂಲಕ್ಕೇ ಧಕ್ಕೆ! ಎದುರಾಗಲಿದೆ ʼಜಲ ಬರʼ

16.7 ಕಿ.ಮೀ ಉದ್ದದ ಸುರಂಗ ಮಾರ್ಗದಲ್ಲಿ ಹೆಬ್ಬಾಳ, ನಾಗವಾರ, ಸ್ಯಾಂಕಿ ಕೆರೆ, ಅರಮನೆ ಮೈದಾನದ ಹೊಂಡ, ಲಾಲ್‌ಬಾಗ್‌ ಹಾಗೂ ಬೆಳ್ಳಂದೂರು ಕೆರೆಗಳಿವೆ. ಕೆರೆಗಳಿಗೆ ಹಾನಿಯಾಗಿ ಭೂಗರ್ಭದಲ್ಲಿ ನೀರು ಹರಿವು ಸ್ಥಗಿತವಾಗುವ ಸಾಧ್ಯತೆಯಿದೆ!

Update: 2025-11-13 03:30 GMT
Click the Play button to listen to article

ಬೆಂಗಳೂರಿನ ಉತ್ತರ ಮತ್ತು ದಕ್ಷಿಣ ಸಂಪರ್ಕಿಸುವ ಬಹುನಿರೀಕ್ಷಿತ ಹೆಬ್ಬಾಳ-ಸಿಲ್ಕ್‌ಬೋರ್ಡ್ ಸುರಂಗ ಮಾರ್ಗ ಯೋಜನೆಯಿಂದ ನಗರದ ಜೀವನಾಡಿಗಳಾಗಿರುವ ಕೆರೆಗಳಿಗೆ ಅಪಾಯ ಎದುರಾಗುವ ಆತಂಕ ಬಂದೊದಗಿದೆ. 

16.7 ಕಿ.ಮೀ ಉದ್ದದ ಸುರಂಗ ಮಾರ್ಗದಲ್ಲಿ ಹೆಬ್ಬಾಳ, ನಾಗವಾರ, ಸ್ಯಾಂಕಿ ಕೆರೆ, ಅರಮನೆ ಮೈದಾನದ ಹೊಂಡ, ಲಾಲ್‌ಬಾಗ್‌ ಹಾಗೂ ಬೆಳ್ಳಂದೂರು ಕೆರೆಗಳು ಬರಲಿವೆ. ಈ ಕೆರೆಗಳಲ್ಲಿ ಸದಾ ನೀರು ತುಂಬಿರುವುದರಿಂದ ನಗರದ ಸಾವಿರಾರು ಕೊಳವೆಬಾವಿಗಳು ಜೀವಂತವಾಗಿವೆ. ಒಂದು ವೇಳೆ ಕೆರೆಗಳಿಗೆ ಹಾನಿಯಾಗಿ ಭೂಗರ್ಭದಲ್ಲಿ ನೀರು ಹರಿವು ವಿಮುಖವಾದರೆ ಈ ಕೊಳವೆಬಾವಿಗಳು ಬತ್ತಿ ಹೋಗಲಿವೆ. ಬೆಂಗಳೂರಿನ ಜನರು ನೀರಿನ ಹಾಹಾಕಾರ ಎದುರಿಸಬೇಕಾಗುತ್ತದೆ.  ಅಲ್ಲದೇ ಕೆರೆಗಳ ಹಾನಿಯಿಂದ ಜೀವವೈವಿಧ್ಯತೆಗೂ ಧಕ್ಕೆ ಉಂಟಾಗಲಿದೆ. ಕೆರೆಗಳ ಸಮೀಪವೇ ಸುರಂಗ ಮಾರ್ಗದ ರ‍್ಯಾಂಪ್ ಹಾದು ಹೋಗುವುದರಿಂದ ಅಪಾಯದ ಸಾಧ್ಯತೆ ಇದೆ.

ಸ್ಯಾಂಕಿ ಕೆರೆಯ ಬಳಿ ನಿರ್ಗಮನ ದ್ವಾರ

ಉದ್ದೇಶಿತ ಸುರಂಗ ರಸ್ತೆ ಯೋಜನೆಯಡಿ ಅರಮನೆ ಮೈದಾನದ ಸಮೀಪ ಶಾಫ್ಟ್‌ ನಿರ್ಮಾಣವಾಗಲಿದೆ. ಇಲ್ಲಿ ಪ್ರವೇಶ ಹಾಗೂ ನಿರ್ಗಮನ ಪಥಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ನಿರ್ಗಮನ ಪಥವು ಸ್ಯಾಂಕಿ ಟ್ಯಾಂಕ್ ಸಮೀಪ ತೆರೆದುಕೊಳ್ಳುವಂತೆ ಯೋಜನೆ ಮರು ವಿನ್ಯಾಸಗೊಳಿಸಲಾಗಿದೆ. ಮೊದಲು ಮೇಖ್ರಿ ವೃತ್ತದಿಂದ ಸಿ.ವಿ. ರಾಮನ್ ರಸ್ತೆ ಕಡೆಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ನಿರ್ಗಮನ ರ‍್ಯಾಂಪ್ ರದ್ದುಗೊಳಿಸಿ, ಗಾಲ್ಫ್ ಮೈದಾನದ ಕೆಳಭಾಗದಿಂದ ಸ್ಯಾಂಕಿ ಕೆರೆಯವರೆಗೆ ಹೊಸದಾಗಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಬದಲಾದ ಅಲೈನ್‌ಮೆಂಟ್‌ನಿಂದ ಸ್ಯಾಂಕಿ ಕೆರೆಗೆ ಕುತ್ತು ಬರಲಿದೆ ಎಂಬುದು ಪರಿಸರವಾದಿಗಳ ಆತಂಕವಾಗಿದೆ.

2023ರಲ್ಲಿ ಸ್ಯಾಂಕಿ ಕೆರೆಯ ದಡದಲ್ಲಿ ಬಿಬಿಎಂಪಿ ವತಿಯಿಂದ ಮೇಲ್ಸೇತುವೆ ನಿರ್ಮಿಸಲು ಮುಂದಾಗಿದ್ದಾಗ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ನಂತರ ಯೋಜನೆ ಕೈಬಿಡಲಾಗಿತ್ತು. ಆದರೆ ಈಗ, ಸುರಂಗ ಮಾರ್ಗದ ಯೋಜನೆಯ ಉಸ್ತುವಾರಿ ಹೊತ್ತಿರುವ ಬಿ-ಸ್ಮೈಲ್‌ ಸಂಸ್ಥೆ(Bengaluru Smart Infrastructure Limited) ಸ್ಯಾಂಕಿ ಕೆರೆ ರಸ್ತೆಯ ಕೆಳಭಾಗದಲ್ಲಿ ಸುರಂಗ ರಸ್ತೆ ನಿರ್ಮಿಸಲು ಮುಂದಾಗಿದೆ. ಇದರಿಂದ ಕೆರೆಗೆ ಕಂಟಕ ಎದುರಾಗಲಿದೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ಅಲೈನ್‌ಮೆಂಟ್‌ ಬದಲಾವಣೆ

ಹೆಬ್ಬಾಳ–ಎಸ್ಟೀಮ್ ಮಾಲ್ ಜಂಕ್ಷನ್‌ನಲ್ಲಿ ಸುರಂಗ ಮಾರ್ಗದ ಪ್ರವೇಶ ಮತ್ತು ನಿರ್ಗಮನ ಪಥದ ಅಲೈನ್‌ಮೆಂಟ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಟ್ಯೂಬ್–1 ರ ಉದ್ದ 56 ಮೀಟರ್ ಹೆಚ್ಚಳವಾಗಿದ್ದು, ಟ್ಯೂಬ್–2 ರ ಉದ್ದ 53 ಮೀಟರ್ ವಿಸ್ತರಿಸಲಾಗಿದೆ. ಮರು ವಿನ್ಯಾಸದಿಂದ ಪ್ರವೇಶ ರ‍್ಯಾಂಪ್–1ರ ಉದ್ದ 11 ಮೀಟರ್ ಮತ್ತು ನಿರ್ಗಮನ ರ‍್ಯಾಂಪ್–7 ರ ಉದ್ದ 167 ಮೀಟರ್ ಹೆಚ್ಚಾಗಿದೆ.

ಈ ಬದಲಾವಣೆಯಿಂದ ಹೆಬ್ಬಾಳ ಕೆರೆ ಅಂಗಳ ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗೆ ಅಪಾಯ ಎದುರಾಗಲಿದೆ. ಇದರಿಂದ ಹಿಮ್ಮುಖ ಹರಿವು ಮತ್ತು ಪ್ರವಾಹ, ಮಣ್ಣಿನ ಸವೆತ ಮತ್ತು ಕೆರೆಗಳ ಮಾಲಿನ್ಯ ಮುಂತಾದ ಋಣಾತ್ಮಕ ಪರಿಣಾಮಗಳು ಸಂಭವಿಸಬಹುದು ಎನ್ನಲಾಗಿದೆ.

ಪರಿಸರವಾದಿಗಳ ಆಕ್ಷೇಪವೇನು?

ಸ್ಯಾಂಕಿ ಕೆರೆಯ ಕೆಳಭಾಗದಲ್ಲಿ ಸುರಂಗ ಮಾರ್ಗ ನಿರ್ಮಿಸಿದರೆ ಜೀವವೈವಿಧ್ಯ ಮತ್ತು ಪ್ರವಾಹ ನಿಯಂತ್ರಣ ವ್ಯವಸ್ಥೆ ಹಾನಿಗೊಳಗಾಗಲಿದೆ. ಸಮಗ್ರ ಅಧ್ಯಯನವಿಲ್ಲದೆ ಸುರಂಗ ಮಾರ್ಗ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಇದರ ವಿರುದ್ಧ ಜನಾಂದೋಲನ ರೂಪಿಸಲಾಗುವುದು. ಇದಲ್ಲದೇ ಲಾಲ್‌ ಬಾಗ್‌ ಕೆರೆ, ಬೆಳ್ಳಂದೂರು ಕೆರೆಗೂ ಅಪಾಯ ಎದುರಾಗಲಿದೆ ಎಂದು ಸಿಟಿಜನ್‌ ಫಾರ್‌ ಸಿಟಿಜನ್‌ ಸಂಸ್ಥಾಪಕ ರಾಜಕುಮಾರ್‌ ದುಗಾರ್ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಬೆಂಗಳೂರು ಈ ಹಿಂದೆ ಕೆರೆಗಳ ನಗರಿಯಾಗಿತ್ತು. ಆಧುನೀಕತೆಗೆ ಮೈಯೊಡ್ಡಿದಂತೆ ಇಂದು ಕೆರೆಗಳ ಸಂಖ್ಯೆ ಕಡಿಮೆಯಾಗಿದೆ. ಕೆರೆಗಳನ್ನು ಮುಚ್ಚಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಬೆಂಗಳೂರಿಗೆ ಕೆರೆಗಳೇ ಜಲಮೂಲವಾಗಿವೆ. ಈಗ ಬೃಹತ್ ಯೋಜನೆಗಳ ಹೆಸರಲ್ಲಿ ಅವುಗಳನ್ನೂ ಆಪೋಷನ ಮಾಡಿದರೆ ಬೆಂಗಳೂರು ಜಲಕಂಟಕ ಎದುರಿಸಬೇಕಾಗುತ್ತದೆ. ಸರ್ಕಾರಗಳು ಇದರ ಬಗ್ಗೆ ಗಂಭೀರ ಯೋಚನೆ ಮಾಡಿ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಪರಿಸರವಾದಿ ಚಿದಾನಂದ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕೆಟಿಸಿಡಿಎ ಅನುಮತಿಯೇ ಇಲ್ಲ

ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಸುರಂಗ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ಬಿ- ಸ್ಮೈಲ್‌ ಸಂಸ್ಥೆಗಳು ಯಾವುದೇ ಅನುಮತಿ ಪಡೆದಿಲ್ಲ ಎಂದು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಅಧಿಕಾರಿಗಳು ದೂರಿದ್ದಾರೆ.

ಕೆರೆ ಪ್ರದೇಶ ಅಥವಾ ಬಫರ್ ವಲಯದಲ್ಲಿ ಯಾವುದೇ ಯೋಜನೆ ಕೈಗೆತ್ತಿಕೊಳ್ಳಬೇಕಾದರೆ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಯೋಜನೆಗೆ ಸಂಬಂಧಿಸಿ ಈವರೆಗೂ ಅನುಮತಿ ಕೋರಿ ಅರ್ಜಿ ಸಲ್ಲಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪರಿಸರ ಹಾನಿಯ ಭೀತಿ

ಸುರಂಗ ಮಾರ್ಗ ನಿರ್ಮಾಣದಿಂದ ಭೂಗರ್ಭದಲ್ಲಿ ನೀರಿನ ಹರಿವು ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಕೆರೆಗಳ ಅಡಿಪಾಯದ ಮಣ್ಣು ತೆರವುಗೊಂಡರೆ ಮಳೆಗಾಲದ ಸಮಯದಲ್ಲಿ ನೀರಿನ ಹೊರಹರಿವು ತಡೆಯಲಾಗದೇ ಪ್ರವಾಹದ ಅಪಾಯ ಎದುರಾಗಲಿದೆ. ಕೆರೆಯ ಸುತ್ತಲಿನ ಹಸಿರು ಪರಿಸರದಲ್ಲಿರುವ ಮರಗಳ ಬೇರುಗಳು ನೀರಿನ ಕೊರತೆಯಿಂದ ಒಣಗಲಿವೆ. ಪಕ್ಷಿಗಳು, ಕಪ್ಪೆಗಳು, ಕೀಟಗಳು, ಮೀನುಗಳು ಸ್ಥಳಾಂತರವಾಗುವ ಭೀತಿ ಎದುರಾಗಲಿದೆ ಎಂದು ಪರಿಸರಾಸಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತೆ ಹೋರಾಟದ ಎಚ್ಚರಿಕೆ

ಸ್ಯಾಂಕಿ ಕೆರೆ ಹಾಗೂ ಹೆಬ್ಬಾಳ ಕೆರೆ ಸಂರಕ್ಷಣಾ ವೇದಿಕೆಗಳು ಹೋರಾಟ ರೂಪಿಸಲು ಸಜ್ಜಾಗಿವೆ. ಈಗಾಗಲೇ ಸ್ಯಾಂಕಿ ಕೆರೆಯ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದ ಬಿಬಿಎಂಪಿ ವಿರುದ್ಧ ಹೋರಾಟ ರೂಪಿಸಿದ ಪರಿಣಾಮ ಯೋಜನೆ ಕೈ ಬಿಡಲಾಗಿದೆ. ಈಗ ಸುರಂಗ ರಸ್ತೆ ಯೋಜನೆ ವಿರೋಧಿಸಿ ಸ್ಥಳೀಯರು ಹಾಗೂ ಪರಿಸರವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆನ್‌ಲೈನ್‌ ಪಿಟಿಷನ್‌ ಹಾಗೂ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಆರಂಭಿಸಿದ್ದಾರೆ.

ಸುರಂಗ ಮಾರ್ಗದ ಕಾಮಗಾರಿ ತಾಂತ್ರಿಕವಾಗಿ ದುಬಾರಿ ಮತ್ತು ಪರಿಸರದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಮೇಲ್ಭಾಗದಲ್ಲಿ ಹಾದು ಹೋಗುವ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು. ಪರ್ಯಾಯ ಮಾರ್ಗಗಳಾದ ಎಲಿವೇಟೆಡ್ ರೋಡ್ ಅಥವಾ ಮೆಟ್ರೋ ಸಂಪರ್ಕ ವಿಸ್ತರಣೆಗೆ ಮುಂದಾಗಬೇಕು ಎಂದು ನಗರತಜ್ಞ ರಾಜಕುಮಾರ್‌ ದುಗಾರ್‌ ಸಲಹೆ ನೀಡಿದ್ದಾರೆ.

Tags:    

Similar News