ಬಿಜೆಪಿಯವರಿಗೆ ರಾಜಕೀಯ ಬೇಕು, ಧರ್ಮಸ್ಥಳವಲ್ಲ: ಡಿ.ಕೆ. ಶಿವಕುಮಾರ್ ವಾಗ್ದಾಳಿ

ಬಿಜೆಪಿಯವರಿಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ.ಕೇವಲ ರಾಜಕಾರಣ ಮಾಡುತ್ತಿದ್ದಾರೆ. ಅವರು ಹಿಂದುತ್ವವನ್ನು ಅವರ ಮನೆ ಆಸ್ತಿ ಎಂದು ಭಾವಿಸಿದ್ದಾರೆ. ಇದು ಯಾರೊಬ್ಬರ ಆಸ್ತಿಯಲ್ಲ.;

Update: 2025-08-16 09:51 GMT

ಡಿಸಿಎಂ ಡಿ.ಕೆ. ಶಿವಕುಮಾರ್‌

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಮುಸುಕುಧಾರಿ ದೂರುದಾರ ನ್ಯಾಯಾಲಯದಲ್ಲಿ ದೂರು ನೀಡಿದಾಗ ಮಾತನಾಡದ ಬಿಜೆಪಿಗರು, ಈಗ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, "ಬಿಜೆಪಿಯವರಿಗೆ ಧರ್ಮಸ್ಥಳದ ಮೇಲೆ ನಿಜವಾದ ಪ್ರೀತಿ ಇಲ್ಲ, ಅವರಿಗೆ ರಾಜಕೀಯಕ್ಕಾಗಿ ಮಾತ್ರ ಧರ್ಮಸ್ಥಳ ಬೇಕಾಗಿದೆ. ಅವರು ಆರಂಭದಲ್ಲಿ ಈ ಬಗ್ಗೆ ಏನೂ ಮಾತನಾಡಿರಲಿಲ್ಲ, ಈಗ ರಾಜಕಾರಣ ಮಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು. "ಅವರು ಹಿಂದುತ್ವವನ್ನು ತಮ್ಮ ಮನೆ ಆಸ್ತಿ ಎಂದು ಭಾವಿಸಿದ್ದಾರೆ. ಆದರೆ ಇದು ಯಾರೊಬ್ಬರ ಆಸ್ತಿಯಲ್ಲ. ಅವರವರ ಭಕ್ತಿ, ನಂಬಿಕೆ, ಭಾವನೆಗಳಿಗೆ ಸಂಬಂಧಿಸಿದ್ದು. ಬಿಜೆಪಿಯವರದ್ದು ರಾಜಕಾರಣ ಬಿಟ್ಟರೆ ಬೇರೇನೂ ಇಲ್ಲ" ಎಂದು ತೀಕ್ಷ್ಣವಾಗಿ ನುಡಿದರು.

"ನ್ಯಾಯಾಲಯದ ದೂರಿಗೇ ತನಿಖೆ ಮಾಡದಿದ್ದರೆ ಏನು ಹೇಳುತ್ತಿದ್ದರು?"

"ಮುಸುಕುಧಾರಿ ದೂರುದಾರ ದೂರು ಕೊಟ್ಟ ದಿನ ಬಿಜೆಪಿಯವರು ಯಾಕೆ ಮಾತನಾಡಲಿಲ್ಲ? ಆತನ ದೂರು ಸರಿಯಿಲ್ಲ ಎಂಬುದಾಗಿ ಯಾಕೆ ಹೇಳಲಿಲ್ಲ? ಎಸ್ಐಟಿ ರಚಿಸಿದ ಮೊದಲ ದಿನ ಯಾಕೆ ಮಾತನಾಡಲಿಲ್ಲ? ನಮಗೆ ರಾಜಕೀಯಕ್ಕೆ ಧರ್ಮಸ್ಥಳ ಬೇಡ. ಧರ್ಮಸ್ಥಳದ ಗೌರವ ಕಾಪಾಡುವುದು ನಮ್ಮ ಚಿಂತನೆ" ಎಂದು ಶಿವಕುಮಾರ್ ಹೇಳಿದರು.

"ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಬೇಕು. ನ್ಯಾಯಾಲಯದ ಮುಂದೆ ದೂರು ನೀಡಿದ ನಂತರವೂ ಸರ್ಕಾರ ತನಿಖೆ ಮಾಡದಿದ್ದರೇ ಬಿಜೆಪಿಯವರು ಏನು ಹೇಳುತ್ತಿದ್ದರು? ಅವರೇ ಟೀಕೆ ಮಾಡುತ್ತಿರಲಿಲ್ಲವೇ? ಈಗ ಈ ರೀತಿ ರಾಜಕಾರಣ ಮಾಡುತ್ತಿದ್ದು, ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ತಿರುಗೇಟು ನೀಡಿದರು.

ತನಿಖೆಗೆ ಹಸ್ತಕ್ಷೇಪವಿಲ್ಲ: ಮಂಪರು ಪರೀಕ್ಷೆಗೆ ಒತ್ತಾಯಿಸಿದರೂ ತಪ್ಪಲ್ಲ

ಮುಸುಕುಧಾರಿ ದೂರುದಾರನಿಗೆ ಮಂಪರು ಪರೀಕ್ಷೆ (Lie Detector Test) ಮಾಡುವ ವಿಚಾರವಾಗಿ ಏನಾದರೂ ಆಗ್ರಹ ಮಾಡಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಮಂಪರು ಪರೀಕ್ಷೆ ಅಥವಾ ಬೇರೆ ಯಾವುದೇ ತನಿಖೆಗೆ ಬೇಕಾದರೂ ಆಗ್ರಹಿಸಲಿ, ಅದು ತಪ್ಪಲ್ಲ. ಎಸ್ಐಟಿ ತನಿಖೆ ಸ್ವಾಗತಿಸಿದವರು ಇಂದು ಈ ರೀತಿ ಮಾತನಾಡುತ್ತಿದ್ದಾರೆ. ಎಷ್ಟು ಗುಂಡಿ ತೆಗೆಯಬೇಕು, ಬೇಡ ಎಂಬುದನ್ನು ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ. ಅವರ ತನಿಖೆಯಲ್ಲಿ ನಾವೇಕೆ ಹಸ್ತಕ್ಷೇಪ ಮಾಡಬೇಕು?" ಎಂದು ಪ್ರಶ್ನಿಸಿದರು.

"ನಮಗೆ ರಾಜಕೀಯ ಬೇಡ, ಕಾನೂನು ಪ್ರಕಾರ ಕ್ರಮ"

"ನನಗೆ ವೈಯಕ್ತಿಕವಾಗಿ ಇರುವ ಅನುಭವದ ವಿಚಾರ ಹೇಳಿದ್ದೇನೆ. ಆದರೆ ಸರ್ಕಾರಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಇಷ್ಟವಿಲ್ಲ. ಬಿಜೆಪಿ ಶಾಸಕರು ಸದನದಲ್ಲಿ ಮಾತನಾಡಿರಬಹುದು. ಅದಕ್ಕೂ ಮುನ್ನ ಕಾಂಗ್ರೆಸ್ ಶಾಸಕರು ಶಾಸಕಾಂಗ ಸಭೆಯಲ್ಲೇ ಧರ್ಮಸ್ಥಳದ ಪರ ಧ್ವನಿ ಎತ್ತಿದ್ದಾರೆ. ಆ ಭಾಗದ ಕಾಂಗ್ರೆಸ್ ನಾಯಕರು ಆರಂಭದಲ್ಲೇ ಬಂದು ನಮ್ಮನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅಧಿಕಾರದಲ್ಲಿರುವ ಸರ್ಕಾರ ಈ ವಿಚಾರವನ್ನು ಚರ್ಚಿಸಬಾರದು ಎಂದು ಮಾತನಾಡಿರಲಿಲ್ಲ. ಮುಖ್ಯಮಂತ್ರಿಗಳು ಕೂಡ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಕಾನೂನು ಪ್ರಕಾರ ತನಿಖೆ ಆಗುತ್ತದೆ" ಎಂದು ಶಿವಕುಮಾರ್ ಭರವಸೆ ನೀಡಿದರು.

"ತಪ್ಪು ಸಂದೇಶ ನೀಡಿ, ಅಪಪ್ರಚಾರ ಮಾಡಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಕುಮ್ಮಕ್ಕು ನೀಡುತ್ತಿರುವವನು ಮುಖ್ಯಮಂತ್ರಿಗಳನ್ನೇ ಕೊಲೆಗಾರ ಎಂದಿದ್ದಾನೆ. ಆತನ ಬಗ್ಗೆ ನೀವು ವರದಿ ಮಾಡಿದ್ದೀರಾ? ಇದೆಲ್ಲದರ ಮಾಹಿತಿ ನಮ್ಮ ಬಳಿ ಇದೆ" ಎಂದು ಬಿಜೆಪಿ ನಡೆಗೆ ಪ್ರತಿಯಾಗಿ ತಿರುಗೇಟು ನೀಡಿದರು.

Tags:    

Similar News