ಧರ್ಮಸ್ಥಳ ಪ್ರಕರಣ : ಅಂತಿಮ ವರದಿ ಬರುವವರೆಗೂ ಪ್ರತಿಕ್ರಿಯಿಸಲ್ಲ ಎಂದ ಗೃಹ ಸಚಿವ ಪರಮೇಶ್ವರ್

ಧರ್ಮಸ್ಥಳದಲ್ಲಿ ಶೋಧ ಕಾರ್ಯ ನಡೆಸುತ್ತಿರುವ ಬಗ್ಗೆ ಸದನಕ್ಕೆ ಮಾಹಿತಿ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗೃಹ ಸಚಿವರು, ಸೋಮವಾರ(ಆ.18) ಪ್ರಕರಣದ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದರು.;

Update: 2025-08-16 13:56 GMT

ಗೃಹ ಸಚಿವ ಡಾ.ಜಿ. ಪರಮೇಶ್ವರ್‌

ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಶವಗಳ ಶೋಧ ಕಾರ್ಯದ ಕುರಿತು ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುತ್ತಿದ್ದು, ಅಂತಿಮ ವರದಿ ನೀಡುವವರೆಗೂ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೋಧ ಕಾರ್ಯದ ಬಗ್ಗೆ ಈಗಲೇ ಮಾತನಾಡಿದರೆ ಅದು ಎಸ್ಐಟಿ ತನಿಖೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಯಾರೊಬ್ಬರೂ ಪ್ರಕರಣದ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಸಲಹೆ ನೀಡಿದರು.

ಸದನಕ್ಕೆ ಸೋಮವಾರ ಮಾಹಿತಿ

ಗುರುವಾರ ಪ್ರತಿಪಕ್ಷಗಳು ಅಧಿವೇಶನದಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶೋಧ ಕಾರ್ಯದ ಬಗ್ಗೆ ಸದನಕ್ಕೆ ಮಾಹಿತಿ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗೃಹ ಸಚಿವರು, ಸದನಕ್ಕೆ ಸೋಮವಾರ (ಆಗಸ್ಟ್ 18) ಪ್ರಕರಣದ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದರು.

ಪ್ರತಿಪಕ್ಷದ ಲೇವಡಿ

ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು, ಎಸ್ಐಟಿ ಅಧಿಕಾರಿಗಳು ಮುಸುಕುಧಾರಿ ದೂರುದಾರ ಹೇಳಿದಂತೆ ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಿದ್ದರು. "ಆತ ತೋರಿಸಿದ ಜಾಗದಲ್ಲೆಲ್ಲಾ ಗುಂಡಿ ತೋಡುತ್ತಿದ್ದಾರೆ. ಆದರೆ ಯಾವ ಮೂಳೆಯೂ ಪತ್ತೆಯಾಗಿಲ್ಲ. ರಸ್ತೆಯಲ್ಲಿರುವ ಗುಂಡಿಗಳು ಇರುವುದು ಸಾಲದು ಎಂದು ಸರ್ಕಾರ ಅರಣ್ಯದಲ್ಲಿ ಗುಂಡಿ ತೋಡುತ್ತಿದೆ. ಆದರೆ ಏನೂ ಪ್ರಯೋಜನವಾಗಿಲ್ಲ. ಆ ಗುಂಡಿಗಳನ್ನು ಕೃಷಿ ಹೊಂಡಗಳನ್ನಾಗಿ ಮಾಡಿದರೆ ಪ್ರಾಣಿಗಳಾದರೂ ನೀರು ಕುಡಿಯುತ್ತವೆ" ಎಂದು ಆರ್. ಅಶೋಕ್ ವ್ಯಂಗ್ಯವಾಡಿದ್ದರು.

ಗೃಹ ಸಚಿವರ ಹೇಳಿಕೆ ಮತ್ತು ಪ್ರತಿಪಕ್ಷದ ಟೀಕೆಗಳ ಹಿನ್ನೆಲೆಯಲ್ಲಿ, ಸೋಮವಾರ ಸದನದಲ್ಲಿ ಡಾ. ಜಿ. ಪರಮೇಶ್ವರ್ ಅವರು ನೀಡುವ ಮಾಹಿತಿ ಕುತೂಹಲ ಕೆರಳಿಸಿದೆ.

Tags:    

Similar News