ಜನರ ಹಕ್ಕುಗಳನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ : ಕೃಷ್ಣಬೈರೇಗೌಡ
ಕೆಲ ಅಧಿಕಾರಿಗಳು ಕಾನೂನು ಮೀರಿ ತಮ್ಮ ವ್ಯಾಪ್ತಿಗೆ ಬರದ ಸಿವಿಲ್ ಮೊಕದ್ದಮೆಗಳನ್ನೂ ದಾಖಲಿಸಿಕೊಳ್ಳುತ್ತಿರುವುದು ಕಂಡುಬಂದಿದ್ದೆದು, ಇದು ಸರಿಯಲ್ಲ.;
ಜನರ ನ್ಯಾಯಬದ್ಧ ಹಕ್ಕುಗಳನ್ನು ಅಧಿಕಾರಿಗಳು ಮೊಟಕುಗೊಳಿಸಲು ಸಾಧ್ಯವಿಲ್ಲ. ಹಾಗೆಂದು ಎಲ್ಲಾ ಪ್ರಕರಣಗಳನ್ನೂ ಮನಸ್ಸೋ ಇಚ್ಚೆ ಸ್ವೀಕರಿಸುವುದೂ ಸರಿಯಲ್ಲ ಎಂದು ಉಪ ವಿಭಾಗಾಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉಪ ವಿಭಾಗಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೆಲ ಅಧಿಕಾರಿಗಳು ಕಾನೂನು ಮೀರಿ ತಮ್ಮ ವ್ಯಾಪ್ತಿಗೆ ಬರದ ಸಿವಿಲ್ ಮೊಕದ್ದಮೆಗಳನ್ನೂ ದಾಖಲಿಸಿಕೊಳ್ಳುತ್ತಿರುವುದು ಕಂಡುಬಂದಿದ್ದೆದು, ಇದು ಸರಿಯಲ್ಲ. ಸಾರ್ವಜನಿಕರಿಗೆ ತಮ್ಮ ಸಿವಿಲ್ ಮೊಕದ್ದಮೆಗಳು ಎಸಿ ನ್ಯಾಯಾಲಯದಲ್ಲೇ ಮುಕ್ತಾಯವಾಗಲಿ ಎಂಬ ಅಭಿಲಾಷೆ ಇರುತ್ತದೆ. ನಾಗರಿಕರಿಗೆ ಕಾನೂನು ರೀತಿ ನೀಡಲಾದ ಹಕ್ಕನ್ನು ಯಾರೂ ಮೊಟಕುಗೊಳಿಸುವುದು ಸಾಧ್ಯವಿಲ್ಲ. ಆದರೆ ಸಿವಿಲ್ ನ್ಯಾಯಾಲಯಗಳಲ್ಲಿ ವಿಚಾರಣೆಗೊಳಪಡಬೇಕಾದ ಪ್ರಕರಣಗಳನ್ನು ನಿಯಮ ಮೀರಿ ದಾಖಲಿಸಿಕೊಳ್ಳಲು ಅಧಿಕಾರ ಕೊಟ್ಟವರು ಯಾರು ಎಂದು ಕಿಡಿಕಾರಿದರು.
ಬಹುತೇಕ ಎಲ್ಲಾ ಅಧಿಕಾರಿಗಳೂ ತುಂಬಾ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲವು ಅಧಿಕಾರಿಗಳು ಸಮಂಜಸವಾಗಿ ಕೆಲಸ ಮಾಡುತ್ತಿಲ್ಲ. ಇದು ಉತ್ತಮ ಕೆಲಸ ಮಾಡುತ್ತಿರುವವರಿಗೂ ಕೆಟ್ಟ ಹೆಸರು ಬರುತ್ತಿದೆ. ಅಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ಸರಿ ದಾರಿಗೆ ತರುವುದು ಹೇಗೆ ಎಂತಲೂ ನಮಗೆ ಗೊತ್ತಿದೆ ಎಂದು ಹೇಳಿದರು.
ಕೆಲವು ಉಪ ವಿಭಾಗಾಧಿಕಾರಿಗಳು ತಮ್ಮ ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿ ಕಾನೂನು ಮೀರಿ ಆದೇಶ ಹೊರಡಿಸಿರುವುದು ಕಂಡುಬಂದಿದೆ. ಎಸಿಗಳು ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶಗಳು ನ್ಯಾಯ ಸಮ್ಮತವಾಗಿಲ್ಲ. ರಾಜ್ಯದ ಐದು ಜಿಲ್ಲೆಗಳ ಎಸಿಗಳು ಅಧಿಕಾರ ಮೀರಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವಿಚಾರಣೆಗೆ ಸೂಚಿಸಲಾಗಿದ್ದು, ವರದಿ ಕೈಸೇರಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಕಾನೂನು ಮೀರಿ ವರ್ತಿಸಿದರೆ ನಾವೂ ಸಹ ಏನೂ ಮಾಡಲಾಗುವುದಿಲ್ಲ. ಕೋರ್ಟ್ ಮೊರೆ ಹೋದರೆ ನಾವೂ ಕೂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಲೂ ಸಿದ್ದರಿದ್ದೇವೆ ಎಂದು ಎಚ್ಚರಿಸಿದರು.
ಅಲ್ಲದೆ, ಮುಂದಿನ ದಿನಗಳಲ್ಲಿ ಉಪವಿಭಾಗಾಧಿಕಾರಿಗಳು ತಮ್ಮ ಆದೇಶ ಪ್ರತಿಯಲ್ಲಿ ಎಲ್ಲಾ ಪ್ರಕರಣಗಳನ್ನೂ ಯಾವ ಕಾಯ್ದೆ ಮತ್ತು ಸೆಕ್ಷನ್ ಅಡಿಯಲ್ಲಿ ಆದೇಶ ಮಾಡಲಾಗಿದೆ? ಅದನ್ನು ಮಾಡೋಕೆ ಕಾನೂನಲ್ಲಿ ತಮಗೆ ಅಧಿಕಾರ ಇದೆಯಾ? ಎಂಬ ಮಾಹಿತಿಯನ್ನೂ ಸ್ಪಷ್ಟವಾಗಿ ನಮೂದಿಸಬೇಕು ಎಂದು ಸೂಚಿಸಿದರು.
ಬಾಕಿ ಪ್ರಕರಣ ಇತ್ಯರ್ಥಕ್ಕೆ ಸೂಚನೆ
ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಎರಡು ತಿಂಗಳಲ್ಲಿ ಮುಗಿಸಬೇಕು ಎಂದು ಗುರಿ ನಿಗದಿಪಡಿಸಿದರೆ, ಆರು ತಿಂಗಳಾದರೂ ಗುರಿ ಮುಟ್ಟಲು ಸಾಧ್ಯವಾಗದಿರುವುದು ಸರಿಯಲ್ಲ. ಹೀಗಾಗಿ ಶೀಘ್ರ ಎಲ್ಲಾ ಬಾಕಿ ಪ್ರಕರಣಗಳನ್ನೂ ಇತ್ಯರ್ಥಗೊಳಿಸಬೇಕು. ಎಸಿ ನ್ಯಾಯಾಲಯಗಳಲ್ಲಿ ಆರು ತಿಂಗಳ ಅವಧಿ ಮೀರಿದ 18ಸಾವಿರ ಪ್ರಕರಣಗಳು ಬಾಕಿ ಇವೆ. ಒಂದು ವರ್ಷ ಮೀರಿದ 14ಸಾವಿರ ಹಾಗೂ ಐದು ವರ್ಷಕ್ಕೂ ಮೇಲ್ಪಟ್ಟ 4 ಸಾವಿರ ಪ್ರಕರಣಗಳು ಬಾಕಿ ಇವೆ. ಈ ಪ್ರಕರಣಗಳನ್ನು ಏನಾದರೂ ಮಾಡಿ ನ್ಯಾಯಬದ್ಧ ಇತ್ಯರ್ಥಕ್ಕೆ ಒಳಪಡಿಸಲೇಬೇಕು. ಅಲ್ಲದೆ, ನಾಲ್ಕು ತಿಂಗಳಿಗಿಂತ ಅಧಿಕ ಅವಧಿಗೆ ಎಸಿ ನ್ಯಾಯಾಲಯದಲ್ಲಿ ಯಾವ ಪ್ರಕರಣಗಳನ್ನೂ ಉಳಿಸಿಕೊಳ್ಳಬಾರದು ಎಂದು ತಾಕೀತು ಮಾಡಿದರು.