ದೇವೇಗೌಡರಿಗೆ ಕೈ ಹಿಡಿದು ನಡೆಯಲು ಸಹಾಯ ಮಾಡಿದ ಡಿ.ಕೆ. ಶಿವಕುಮಾರ್
ದೇವೇಗೌಡ ಕುಟುಂಬದ ಸದಸ್ಯರು ಮತ್ತು ಡಿ.ಕೆ. ಶಿವಕುಮಾರ್ ಸಾರ್ವಜನಿಕವಾಗಿ ಇಬ್ಬರೂ ನಾಯಕರು ಪರಸ್ಪರ ಭೇಟಿಯಾಗುವುದು ಅಥವಾ ಒಟ್ಟಿಗೆ ಕಾಣಿಸಿಕೊಳ್ಳುವುದು ಅಪರೂಪ.;
ಕರ್ನಾಟಕ ರಾಜಕೀಯದಲ್ಲಿ ದೀರ್ಘಕಾಲದಿಂದ ಪರಸ್ಪರ ವಿರೋಧಿಗಳಾಗಿದ್ದ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ವಿರಳಾತಿ ವಿರಳ ಘಟನೆಯಲ್ಲಿ ಮುಖಾಮುಖಿಯಾಗಿದ್ದಾರೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಹಿರಿಯ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಗಳ ಅಂತ್ಯಕ್ರಿಯೆ ವೇಳೆ, ರಾಜಕೀಯ ಹಗೆತನವನ್ನು ಮೀರಿ ಇಬ್ಬರೂ ನಾಯಕರು ಅಕ್ಕ-ಪಕ್ಕದಲ್ಲಿ ಕುಳಿತಿದ್ದರು.
ದಶಕಗಳಿಂದ ದೇವೇಗೌಡ ಕುಟುಂಬ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ತೀವ್ರ ರಾಜಕೀಯ ವೈರತ್ವವಿದೆ. ಸಾರ್ವಜನಿಕವಾಗಿ ಇಬ್ಬರೂ ನಾಯಕರು ಪರಸ್ಪರ ಭೇಟಿಯಾಗುವುದು ಅಥವಾ ಒಟ್ಟಿಗೆ ಕಾಣಿಸಿಕೊಳ್ಳುವುದು ಅಪರೂಪ. ಅದರಲ್ಲೂ, ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಆಗಾಗ ನಡೆಯುವ ಮಾತಿನ ಸಮರ, ಈ ರಾಜಕೀಯ ವೈರತ್ವವನ್ನು ಮತ್ತಷ್ಟು ತೀವ್ರಗೊಳಿಸಿವೆ. ಇಬ್ಬರೂ ನಾಯಕರು ಪರಸ್ಪರ ತೀವ್ರ ವಾಗ್ದಾಳಿ ನಡೆಸುತ್ತಾ, ರಾಜಕೀಯ ವೇದಿಕೆಗಳಲ್ಲಿ ನೇರ ಆರೋಪಗಳನ್ನು ಮಾಡುತ್ತಿರುತ್ತಾರೆ. ಇಂತಹ ಕಟು ರಾಜಕೀಯ ವೈಷಮ್ಯದ ನಡುವೆಯೂ, ಈ ಹಿರಿಯ ನಾಯಕರ ಭೇಟಿ ಎಲ್ಲರ ಗಮನ ಸೆಳೆದಿದೆ.
ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸೌಹಾರ್ದ ಕ್ಷಣ
ಶ್ರೀ ಚಂದ್ರಶೇಖರನಾಥ ಸ್ವಾಮೀಜಿಗಳ ಅಂತ್ಯಕ್ರಿಯೆಯ ಶೋಕಮಯ ಸಂದರ್ಭದಲ್ಲಿ, ದೇವೇಗೌಡರು ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಹಾಜರಿದ್ದರು. ಇದೇ ವೇಳೆ, ದೇವೇಗೌಡರು ಎದ್ದು ನಿಲ್ಲಲು ಪ್ರಯತ್ನಿಸುತ್ತಿದ್ದಾಗ, ಡಿ.ಕೆ. ಶಿವಕುಮಾರ್ ಅವರು ಕೈಹಿಡಿದು ಸಹಾಯ ಮಾಡಿದ್ದಾರೆ. ಈ ದೃಶ್ಯವು ರಾಜಕೀಯ ವಲಯದಲ್ಲಿ ವಿಭಿನ್ನ ಅಭಿಪ್ರಾಯಗಳ ಸೃಷ್ಟಿಗೆ ಕಾರಣವಾಗಿದೆ.