ಪರಿಹಾರ ನಿರಾಕರಣೆ; ಮಂಡ್ಯ ಡಿಸಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ
ಮಂಜೇಗೌಡ ಅವರ ಕುಟುಂಬಕ್ಕೆ ಸೇರಿದ್ದ ಎರಡು ಎಕರೆ ಜಮೀನನ್ನು ಸರ್ಕಾರ ಹಲವು ವರ್ಷಗಳ ಹಿಂದೆಯೇ ವಶಪಡಿಸಿಕೊಂಡು, 49 ನಿವೇಶನಗಳನ್ನು ಮಾಡಿ ಬಡವರಿಗೆ ಹಂಚಿಕೆ ಮಾಡಿತ್ತು. ಆದರೆ, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರವಾಗಲೀ, ಪರ್ಯಾಯ ಜಮೀನಾಗಲೀ ನೀಡಿಲ್ಲ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಮ್ಮ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ವರ್ಷಗಳೇ ಕಳೆದರೂ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿ, ಮನನೊಂದ ರೈತರೊಬ್ಬರು ಮಂಗಳವಾರ ಬೆಳಿಗ್ಗೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ಕೆ.ಆರ್. ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ಮಂಜೇಗೌಡ (55) ಆತ್ಮಹತ್ಯೆಗೆ ಯತ್ನಿಸಿದ ರೈತ. ತಮ್ಮ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಲು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಅವರು, ರಾತ್ರಿ ಕಚೇರಿ ಬಳಿಯ ಉದ್ಯಾನದಲ್ಲೇ ಮಲಗಿದ್ದರು. ಮಂಗಳವಾರ ಬೆಳಿಗ್ಗೆ ಏಕಾಏಕಿ ತಮ್ಮ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಸ್ಥಳೀಯರು ತಕ್ಷಣವೇ ನೀರು ಎರಚಿ ಬೆಂಕಿ ನಂದಿಸಿ, ಅವರನ್ನು ರಕ್ಷಿಸಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮಂಜೇಗೌಡ ಅವರ ದೇಹ ಶೇ. 60ರಷ್ಟು ಸುಟ್ಟುಹೋಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ನೆರವಾದರು.
ರೈತನ ಆರೋಪವೇನು?
ಮಂಜೇಗೌಡ ಅವರ ಕುಟುಂಬಕ್ಕೆ ಸೇರಿದ್ದ ಎರಡು ಎಕರೆ ಜಮೀನನ್ನು ಸರ್ಕಾರ ಹಲವು ವರ್ಷಗಳ ಹಿಂದೆಯೇ ವಶಪಡಿಸಿಕೊಂಡು, 49 ನಿವೇಶನಗಳನ್ನು ಮಾಡಿ ಬಡವರಿಗೆ ಹಂಚಿಕೆ ಮಾಡಿತ್ತು. ಆದರೆ, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರವಾಗಲೀ, ಪರ್ಯಾಯ ಜಮೀನಾಗಲೀ ನೀಡಿಲ್ಲ. ಈ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿ ಮತ್ತು ತಾಲೂಕು ಕಚೇರಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಂಜೇಗೌಡರ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ. ಕುಮಾರ್, "ಕೆ.ಆರ್.ಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ಭೂಸ್ವಾಧೀನ ಪರಿಹಾರಕ್ಕೆ ಸಂಬಂಧಿಸಿದಂತೆ ಮಂಜೇಗೌಡ ಸಲ್ಲಿಸಿರುವ ಯಾವುದೇ ಅರ್ಜಿ ಬಾಕಿ ಉಳಿದಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ, ಅಪ್ಪ-ಮಗನ ನಡುವಿನ ಜಗಳ ಮತ್ತು ಬ್ಯಾಂಕ್ ಸಾಲದ ಕಾರಣದಿಂದ ಅವರು ಮನನೊಂದು ಈ ಕೃತ್ಯ ಎಸಗಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ" ಎಂದು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಹೆಚ್ಚುವರಿ ಜಿಲ್ಲಾಧಿಕಾರಿಗೆ ಸೂಚಿಸಿದ್ದು, ಅವರು ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿ ರೈತನಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಅಗತ್ಯಬಿದ್ದರೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಿಸಲು ವೈದ್ಯಾಧಿಕಾರಿಗೆ ಸೂಚಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಆತ್ಮಹತ್ಯೆ ಯತ್ನಕ್ಕೆ ನಿಜವಾದ ಕಾರಣ ತಿಳಿಯಲಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.