ಮಾಜಿ ಸಂಗಾತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ
x

ಸಾಂದರ್ಭಿಕ ಚಿತ್ರ

ಮಾಜಿ ಸಂಗಾತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ

ಹೊಮ್ಮದೇವನಹಳ್ಳಿ ಮುಖ್ಯರಸ್ತೆಯಲ್ಲಿ ಕಾರು ನಿಲ್ಲಿಸುವಂತೆ ಪದೇ ಪದೇ ಹಾರ್ನ್ ಮಾಡಿದ್ದಾನೆ. ಮುನಿಯಪ್ಪ ಕಾರು ನಿಲ್ಲಿಸಿದಾಗ, ವಿಠ್ಠಲ್ ತನ್ನ ಕೈಯಲ್ಲಿದ್ದ ಪೆಟ್ರೋಲ್ ಕ್ಯಾನ್‌ನಿಂದ ಕಾರಿನ ಮೇಲೆ ಪೆಟ್ರೋಲ್ ಸುರಿದಿದ್ದಾನೆ.


ʼಲಿವ್ ಇನ್ ರಿಲೇಷನ್‌ಶಿಪ್‌ʼ ನಲ್ಲಿದ್ದ ಮಾಜಿ ಸಂಗಾತಿಯ ಮೇಲೆ ಕಾರು ಚಾಲಕನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಆನೇಕಲ್ ಬಳಿ ಶನಿವಾರ ನಡೆದಿದೆ. ಸುಟ್ಟ ಗಾಯಗಳಿಂದ ಗಂಭೀರ ಗಾಯಗೊಂಡಿದ್ದ 25 ವರ್ಷದ ಯುವತಿ ವನಜಾಕ್ಷಿ ಸೋಮವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಘಟನೆಯ ವಿವರ

ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬನ್ನೇರುಘಟ್ಟದ ​​ಬಿಲ್ವರದಹಳ್ಳಿ ನಿವಾಸಿ ವನಜಾಕ್ಷಿ (25) ಪ್ರಸ್ತುತ ಮುನಿಯಪ್ಪ ಜೊತೆ ಲಿವ್-ಇನ್ ರಿಲೇಷನ್‌ ಶಿಪ್‌ನಲ್ಲಿದ್ದಳು. ಮುನಿಯಪ್ಪ (49) ಮತ್ತು ತಮ್ಮ ಸಂಬಂಧಿಯೊಂದಿಗೆ ಕಾರಿನಲ್ಲಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ಹೋಗುತ್ತಿದ್ದರು. ಈ ವೇಳೆ, ವನಜಾಕ್ಷಿಯ ಜೊತೆ ಈ ಹಿಂದೆ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದ ಕ್ಯಾಬ್ ಚಾಲಕ ವಿಠ್ಠಲ್ (50) ತನ್ನ ಕಾರಿನಲ್ಲಿ ಹಿಂಬಾಲಿಸಿದ್ದಾನೆ.

ಹೊಮ್ಮದೇವನಹಳ್ಳಿ ಮುಖ್ಯ ರಸ್ತೆಯಲ್ಲಿ ಕಾರನ್ನು ತಡೆದು ಪೆಟ್ರೋಲ್ ಸುರಿಯಲು ಆರಂಭಿಸಿದ್ದಾನೆ. ಈ ವೇಳೆ ವನಜಾಕ್ಷಿ ಮತ್ತು ಮುನಿಯಪ್ಪ ಕಾರಿನಿಂದ ಇಳಿದು ಓಡಲು ಆರಂಭಿಸಿದ್ದಾರೆ. ಆದರೂ ಬಿಡದೇ ವನಜಾಕ್ಷಿಯನ್ನು ಬೆನ್ನಟ್ಟಿದ್ದಾನೆ. ಆಕೆ ಕೆಳಗೆ ಬಿದ್ದಾಗ ಪೆಟ್ರೋಲ್ ಸುರಿದು ಲೈಟರ್‌ನಿಂದ ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಶೇ. 60ರಷ್ಟು ಸುಟ್ಟ ಗಾಯಗಳಾಗಿದ್ದ ವನಜಾಕ್ಷಿಯನ್ನು ಸ್ಥಳೀಯರು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.

ಘಟನೆ ಸಂಬಂಧ ಕ್ಯಾಬ್ ಚಾಲಕ ವಿಠ್ಠಲ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹುಳಿಮಾವು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಮೃತ ಮಹಿಳೆ ವನಜಾಕ್ಷಿ ಮೂರು ವರ್ಷಗಳ ಹಿಂದೆ ತನ್ನ ಪತಿಯಿಂದ ಬೇರ್ಪಟ್ಟಿದ್ದಳು. ಆಕೆಯ ಪತಿ ಮೃತಪಟ್ಟ ಬಳಿಕ ಒಂದು ವರ್ಷ ಕ್ಯಾಬ್ ಚಾಲಕ ವಿಠ್ಠಲ್ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದಳು. ಕಳೆದ ಕೆಲ ದಿನಗಳಿಂದ ವನಜಾಕ್ಷಿ ಆತನನ್ನು ಕಡೆಗಣಿಸಿ, ಅದೇ ಗ್ರಾಮದ ಮುನಿಯಪ್ಪನೊಂದಿಗೆ ವಾಸಿಸಲು ಆರಂಭಿಸಿದ್ದಳು. ಇದರಿಂದ ಕೋಪಗೊಂಡಿದ್ದ ವಿಠ್ಠಲ್, ಆಕೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿಠ್ಠಲ್‌ಗೆ ಈಗಾಗಲೇ ಎರಡು ಮದುವೆಯಾಗಿದೆ. ಮೊದಲ ಪತ್ನಿ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.

Read More
Next Story