ಪಬ್ಲಿಕ್‌ ಪರೀಕ್ಷೆ ಗೊಂದಲ | ಮಕ್ಕಳು, ಪೋಷಕರ ಆತಂಕಕ್ಕೆ ಕುರುಡಾದ ಸರ್ಕಾರ

ಪಬ್ಲಿಕ್‌ ಪರೀಕ್ಷೆಯ ಗೊಂದಲದ ವಿಷಯದಲ್ಲಿ ಮಕ್ಕಳು ಮತ್ತು ಪೋಷಕರನ್ನು ವಿಶ್ವಾಸಕ್ಕೆ ಪಡೆಯದ, ಅವರ ಆತಂಕ ನಿವಾರಿಸುವ ಯಾವ ಯತ್ನವನ್ನೂ ಮಾಡದ ರಾಜ್ಯ ಸರ್ಕಾರದ ಉದಾಸೀನ ಧೋರಣೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಶಿಕ್ಷಣ ತಜ್ಞರು, ಮಾಜಿ ಶಿಕ್ಷಣ ಸಚಿವರು ಮತ್ತು ಮಕ್ಕಳ ಪೋಷಕರು ಸರ್ಕಾರದ ಅಸೂಕ್ಷ್ಮತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.;

Update: 2024-03-13 10:53 GMT
ಸಾಂದರ್ಬಿಕ ಚಿತ್ರ

ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳ ಪಬ್ಲಿಕ್ ಪರೀಕ್ಷೆಯ ವಿಷಯದಲ್ಲಿ ಖಾಸಗಿ ಶಾಲೆಗಳ ಒಕ್ಕೂಟ- ರುಪ್ಸಾ ಮತ್ತು ರಾಜ್ಯ ಸರ್ಕಾರದ ನಡುವಿನ ಕಾನೂನು ಸಮರ ಮುಂದುವರಿದಿದೆ. ಕಳೆದ ಒಂದು ವಾರದಿಂದ ಪರೀಕ್ಷೆ ವಿಷಯದಲ್ಲಿ ಹೊಳೆ ದಡ, ಹೊಳೆ ದಡ ಆಟ ಮುಂದುವರಿದಿದೆ. ಆದರೆ, ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಈ ಕಣ್ಣಾಮುಚ್ಚಾಲೆ ಆಟದಲ್ಲಿ ಮಕ್ಕಳು ಆಟದ ಬೊಂಬೆಯಂತಾಗಿದ್ದಾರೆ.

ಅದರಲ್ಲೂ ರಾಜ್ಯ ಸರ್ಕಾರ ಈ ವಿಷಯದಲ್ಲಿ ನಡೆದುಕೊಂಡ ರೀತಿ, ಮಕ್ಕಳು ಮತ್ತು ಪೋಷಕರನ್ನು ವಿಶ್ವಾಸಕ್ಕೆ ಪಡೆಯದೆ, ಅವರ ಆತಂಕ ನಿವಾರಿಸುವ ಯಾವ ಯತ್ನವನ್ನೂ ಮಾಡದ ಉದಾಸೀನ ಧೋರಣೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಶಿಕ್ಷಣ ತಜ್ಞರು, ಮಾಜಿ ಶಿಕ್ಷಣ ಸಚಿವರು ಮತ್ತು ಮಕ್ಕಳ ಪೋಷಕರು ಸರ್ಕಾರದ ಅಸೂಕ್ಷ್ಮತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವಾರದಿಂದ ಪಬ್ಲಿಕ್ ಪರೀಕ್ಷೆಯ ವಿಷಯದಲ್ಲಿ ನ್ಯಾಯಾಲಯದಲ್ಲಿ ವಾದ ವಿವಾದ ಮುಂದುವರಿದಿದೆ. ಹೈಕೋರ್ಟ್ ಕಳೆದ ಬುಧವಾರ ಪರೀಕ್ಷೆ ರದ್ದು ಮಾಡಿ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿ ಪರೀಕ್ಷೆ ನಡೆಸಲು ಶುಕ್ರವಾರ ಅನುಮತಿ ಪಡೆದುಕೊಂಡಿತ್ತು. ಆ ಹಿನ್ನೆಲೆಯಲ್ಲಿ ಪೂರ್ವನಿಗದಿಯಂತೆ ಮಾ.11ರ ಸೋಮವಾರದಿಂದಲೇ 5, 8 , 9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳು ಆರಂಭವಾಗಿದ್ದವು. ಆದರೆ, ರುಪ್ಸಾ, ಸುಪ್ರೀಂಕೋರ್ಟಿನ ಮೆಟ್ಟಿಲೇರಿ ಎಳೆಯ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸುವುದು ಶಿಕ್ಷಣ ಹಕ್ಕು ಕಾಯ್ದೆ ಮತ್ತು ಮಕ್ಕಳ ಹಕ್ಕು ಕಾಯ್ದೆಗಳ ಉಲ್ಲಂಘನೆ ಎಂದು ವಾದಿಸಿತ್ತು. ಬೋರ್ಡ್ ಪರೀಕ್ಷೆ ನಡೆಸುವುದು ಶಿಕ್ಷಣ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್, ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಪರೀಕ್ಷೆ ನಡೆಸದಂತೆ ತಡೆಯಾಜ್ಞೆ ನೀಡಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ, ಈಗಾಗಲೇ ಮುಗಿದಿರುವ ಎರಡು ಪತ್ರಿಕೆಗಳ ಪರೀಕ್ಷೆ ಹೊರತುಪಡಿಸಿ ಬಾಕಿ ಇರುವ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಸುತ್ತೋಲೆ ಹೊರಡಿಸಿದೆ.

8ನೇ ತರಗತಿಯವರೆಗೆ ಬೋರ್ಡ್ ಪರೀಕ್ಷೆ ನಡೆಸುವುದು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 30ರ ಸ್ಪಷ್ಟ ಉಲ್ಲಂಘನೆ ಎಂಬುದನ್ನು ಪ್ರಮುಖವಾಗಿ ಸುಪ್ರೀಂಕೋರ್ಟ್ ಪ್ರಸ್ತಾಪಿಸಿ, ಸರ್ಕಾರಕ್ಕೆ ಚಾಟಿ ಬೀಸಿದೆ. ಅಲ್ಲದೆ, ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಮಕ್ಕಳನ್ನು ಅನುತ್ತೀರ್ಣಗೊಳಿಸುವುದಿಲ್ಲ ಎಂದಾದರೆ, ಪರೀಕ್ಷೆ ನಡೆಸುವ ಅಗತ್ಯವೇನು? ಎಂದೂ ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಒಂದು ಕಡೆ, ಪರೀಕ್ಷೆಯಲ್ಲಿ ಪಡೆದ ಅಂಕ ಪರಿಗಣಿಸಿ ಉತ್ತೀರ್ಣ, ಅನುತ್ತೀರ್ಣ ಎಂಬುದನ್ನು ನಿರ್ಧರಿಸುವುದಿಲ್ಲ ಎನ್ನುವ ಸರ್ಕಾರ, ಮತ್ತೊಂದು ಕಡೆ ಪರೀಕ್ಷೆ ನಡೆಸಲೇಬೇಕು ಎಂಬ ಹಠಕ್ಕೆ ಬಿದ್ದು ಕೋರ್ಟ್ ತೀರ್ಪಿನ ವಿರುದ್ಧ ಕಾನೂನು ಸಮರ ಸಾರಿದೆ. ಸರ್ಕಾರದ ಈ ಇಬ್ಬಂದಿತನಕ್ಕೆ ಚಿಕ್ಕ ಮಕ್ಕಳು ಮತ್ತು ಅವರ ಪೋಷಕರು ಈಗ ಅಡಕತ್ತರಿಗೆ ಸಿಲುಕಿದ್ದಾರೆ. ಮಕ್ಕಳ ಮಾನಸಿಕ ಒತ್ತಡ ಮತ್ತು ಪೋಷಕರ ಆತಂಕಕ್ಕೆ ಸಮಾಧಾನ ಹೇಳುವ, ಅವರ ಭೀತಿ, ಆತಂಕ ದೂರ ಮಾಡಿ ವಿಶ್ವಾಸ ತುಂಬುವ ಕನಿಷ್ಟ ಹೊಣೆಗಾರಿಕೆಯನ್ನೂ ಸರ್ಕಾರ ತೋರುತ್ತಿಲ್ಲ ಎಂಬುದು ಮತ್ತಷ್ಟು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ತಾನೇ ತಂದ ಕಾಯ್ದೆ ತಾನೇ ಉಲ್ಲಂಘಿಸಿದ ಕಾಂಗ್ರೆಸ್

ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಈ ಧೋರಣೆ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಶಿಕ್ಷಣ ತಜ್ಞ ಡಾ ವಿ ಪಿ ನಿರಂಜನಾರಾಧ್ಯ ಅವರು, “2009ರಲ್ಲಿ ಮಹತ್ವದ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಸರ್ಕಾರ. ಮಕ್ಕಳಿಗೆ ಎಂಟನೇ ತರಗತಿಯವರೆಗೆ ಅವರ ಮಾನಸಿಕ ಒತ್ತಡ, ಆತಂಕಕ್ಕೆ ಕಾರಣವಾಗುವ ಪರೀಕ್ಷೆ ಪದ್ಧತಿ ಕೈಬಿಡಬೇಕು. ಅದಕ್ಕೆ ಬದಲಾಗಿ ಶೈಕ್ಷಣಿಕ ವರ್ಷದಲ್ಲಿ ನಿಯಮಿತವಾಗಿ ಆಂತರಿಕ ಮೌಲ್ಯಮಾಪನದ ಸಿಸಿಎ ಪದ್ಧತಿ ಅಳಡಿಸಿಕೊಳ್ಳಬೇಕು ಎಂಬುದು ಕಾಯ್ದೆಯ ನಿಯಮ. ಆದರೆ, ಈಗ ಆ ಕಾಯ್ದೆ ಜಾರಿಗೆ ತಂದ ಕಾಂಗ್ರೆಸ್ ಸರ್ಕಾರವೇ ಕಾಯ್ದೆಯನ್ನು ಉಲ್ಲಂಘಿಸಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸುತ್ತಿರುವುದು ಮಾತ್ರವಲ್ಲ, ಪರೀಕ್ಷೆಯನ್ನು ಸಮರ್ಥಿಸಿಕೊಂಡು ದೊಡ್ಡ ಕಾನೂನು ಸಮರ ಸಾರಿದೆ. ಇದು ವಿಪರ್ಯಾಸ. ಇದು ಶಿಕ್ಷಣ ಹಕ್ಕು ಕಾಯ್ದೆಯ ಮತ್ತು ಆ ಮೂಲಕ ಸಂವಿಧಾನದ ಉಲ್ಲಂಘನೆ” ಎಂದು ಅಭಿಪ್ರಾಯಪಟ್ಟರು.

ಅಲ್ಲದೆ, “ಈ ಪರೀಕ್ಷೆಯ ವಿಷಯದಲ್ಲಿ ಸರ್ಕಾರ ಹೈಕೋರ್ಟಿನ ಏಕಸದಸ್ಯ ಪೀಠದ ಆದೇ ಒಪ್ಪಿ ಪರೀಕ್ಷೆ ಕೈಬಿಡುವುದು ಜಾಣ ನಡೆಯಾಗಿತ್ತು. ಆದರೆ, ಅಧಿಕಾರಿಗಳು ಮತ್ತು ಇಲಾಖೆಯ ಕೆಲವರು ಹಿತಾಸಕ್ತಿಗಾಗಿ ಈ ಪರೀಕ್ಷೆ ನಡೆಸಲು ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಸಚಿವರು ಮತ್ತು ಮುಖ್ಯಮಂತ್ರಿಗಳು ಕೂಡ ಈ ಬಗ್ಗೆ ಸರಿಯಾದ ಮಾಹಿತಿ ಪಡೆದು ಸಕಾಲದಲ್ಲಿ ಮಕ್ಕಳು ಮತ್ತು ಪೋಷಕರ ಆತಂಕ ನಿವಾರಿಸುವ ಕೆಲಸ ಮಾಡಬೇಕಿತ್ತು. ಅದಾಗಲಿಲ್ಲ. ಬೇರೆ ಬೇರೆ ಹಿತಾಸಕ್ತಿಯ ಕಾರಣಕ್ಕೆ ಈಗ ಮಕ್ಕಳು ಮತ್ತು ಪೋಷಕರನ್ನು ಗೊಂದಲಕ್ಕೆ ತಳ್ಳಲಾಗಿದೆ” ಎಂದು ಡಾ ನಿರಂಜನಾರಾಧ್ಯ ವಿವರಿಸಿದರು.

ಇದು ತೀರಾ ಅಸೂಕ್ಷ್ಮ, ಸಂವೇದನಾಹೀನ ನಡೆ

ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ಮತ್ತು ತರಗತಿಗಳ ವಿಷಯದಲ್ಲಿ ಇಂತಹದ್ದೇ ಹಲವು ಗೊಂದಲ, ಆತಂಕ ಎದುರಾಗಿತ್ತು. ಆಗ ಶಿಕ್ಷಣ ಸಚಿವರಾಗಿ ಪರಿಸ್ಥಿತಿಯನ್ನು ಎದುರಿಸಿದ್ದ ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರನ್ನು ʼದ ಫೆಡರಲ್ ಕರ್ನಾಟಕʼ ಸಂಪರ್ಕಿಸಿದಾಗ, ಅವರು “ಇದು ಸರ್ಕಾರದ ಹೊಣೆಗೇಡಿತನ. ಪಬ್ಲಿಕ್ ಪರೀಕ್ಷೆ ಎಂಬುದೇ ಐದನೇ ತರಗತಿಯಂತಹ ಹಂತದಲ್ಲಿ ಎಳೆಯ ಮಕ್ಕಳಿಗೆ ಆತಂಕದ ವಿಷಯ. ಇನ್ನು ಪರೀಕ್ಷೆ ನಡೆಯುತ್ತೆ, ಇಲ್ಲ, ನಡೆಯುತ್ತೆ, ಇಲ್ಲ,., ಎಂದು ಆ ಮಕ್ಕಳನ್ನು ಸತಾಯಿಸಿದರೆ, ಅದರ ಪರಿಣಾಮ ಆ ಮಕ್ಕಳ ಮನಸ್ಸಿನ ಮೇಲೆ ಏನಾಗುತ್ತದೆ? ಪೋಷಕರ ಸ್ಥಿತಿ ಏನು? ಎಂಬ ಬಗ್ಗೆ ಸರ್ಕಾರ, ಶಿಕ್ಷಣ ಸಚಿವರು ಯೋಚಿಸಬೇಕಿತ್ತು. ಆದರೆ, ದುರಂತ ಅಂದರೆ ಈವರೆಗೆ ಶಿಕ್ಷಣ ಸಚಿವರಾಗಲೀ, ಮುಖ್ಯಮಂತ್ರಿಗಳಾಗಲೀ, ಸರ್ಕಾರದ ಹಿರಿಯ ಅಧಿಕಾರಿಗಳಾಗಲೀ ಮಕ್ಕಳು ಮತ್ತು ಪೋಷಕರಿಗೆ ಭರವಸೆ ತುಂಬುವ, ಅವರ ಆತಂಕ ದೂರ ಮಾಡುವ ಒಂದು ಹೇಳಿಕೆಯನ್ನೂ ನೀಡಿಲ್ಲ. ಇದು ತೀರಾ ಅಸೂಕ್ಷ್ಮ, ಸಂವೇದನಾಹೀನ ನಡೆ.. “ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಶಿಕ್ಷಣ ಇಲಾಖೆ ಎಂಬುದು ಅತ್ಯಂತ ಸೂಕ್ಷ್ಮ ಇಲಾಖೆ, ನೀವು ಇಲ್ಲಿ ಕಡತಗಳ ಜೊತೆ ವ್ಯವಹರಿಸುವುದಿಲ್ಲ. ಬದಲಾಗಿ ಎಳೆಯ ಮಕ್ಕಳ ಮನಸ್ಸಿನ ಜೊತೆ ವ್ಯವಹರಿಸುತ್ತೀರಿ. ಆ ಎಚ್ಚರಿಕೆ ಮತ್ತು ಸೂಕ್ಷ್ಮತೆ ನಿಮಗೆ ಇರಬೇಕಾಗುತ್ತೆ. ಪರೀಕ್ಷೆಯಂತಹ ವಿಷಯದಲ್ಲಿ ಈ ರೀತಿಯ ಗೊಂದಲ ಸೃಷ್ಟಿಸಿರುವುದು ಸರ್ಕಾರವೇ. ಜೊತೆಗೆ ತಮ್ಮ ಇಂತಹ ಹೊಣೆಗೇಡಿತನದಿಂದಾಗಿ ಗೊಂದಲ, ಆತಂಕಕ್ಕೆ ಈಡಾಗಿರುವ ಮಕ್ಕಳು, ಪೋಷಕರನ್ನು ಸಮಾಧಾನಪಡಿಸುವ, ವಿಶ್ವಾಸ ತುಂಬುವ ಕನಿಷ್ಟ ಕಾಳಜಿಯನ್ನೂ ತೋರದೆ ಇರುವುದು ದುರಂತ” ಎಂದು ಸುರೇಶ್ ಕುಮಾರ್ ಸರ್ಕಾರದ ನಡೆಯನ್ನು ಖಂಡಿಸಿದರು.

ಕಳೆದ ಒಂದು ವಾರದಿಂದ ಪಬ್ಲಿಕ್ ಪರೀಕ್ಷೆಯ ವಿಷಯದಲ್ಲಿ ದಿನಕ್ಕೊಂದು ಬೆಳವಣಿಗೆ, ಒಂದು ದಿನ ಪರೀಕ್ಷೆ ರದ್ದು, ಮಾರನೇ ದಿನ ಪರೀಕ್ಷೆ ಇದೆ, ಎರಡು ಪತ್ರಿಕೆಗಳ ಪರೀಕ್ಷೆ ಬಳಿಕ ಮತ್ತೆ ಪರೀಕ್ಷೆ ರದ್ದು,.. ಈ ನಡುವೆ ಉತ್ತರ ಪತ್ರಿಕೆಯನ್ನೂ ನೀಡಲಾಗದ ಸರ್ಕಾರದ ಕಂಜೂಸುತನ,.. ನಿತ್ಯ ಒಂದೊಂದು ಗೊಂದಲ, ಆತಂಕದಲ್ಲಿ ವಾರ ಕಳೆದಿರುವ ಪೋಷಕರಂತೂ ಸರ್ಕಾರ ಈ ವಿಷಯದಲ್ಲಿ ನಡೆದುಕೊಂಡಿರುವ ರೀತಿಗೆ ರೋಸಿಹೋಗಿದ್ದಾರೆ.

ಇದೊಂದು ಮತಿಗೇಡಿ ಸರ್ಕಾರ: ಪೋಷಕರ ಆಕ್ರೋಶ

ಈ ಬಗ್ಗೆ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ, 8ನೇ ತರಗತಿ ವಿದ್ಯಾರ್ಥಿಯ ಪೋಷಕರಾದ ಶಿವಮೊಗ್ಗದ ರೋಹಿಣಿ ಜಗದೀಶ್, “ಈ ಸರ್ಕಾರ ಮಕ್ಕಳನ್ನು ಏನು ಆಟದ ಗೊಂಬೆ ಎಂದುಕೊಂಡಿದೆಯಾ? ಒಂದು ದಿನ ಪರೀಕ್ಷೆ ನಡೆಸ್ತೀವಿ ಅನ್ನೋದು, ಮಾರನೇ ದಿನ ನಡೆಸೊಲ್ಲ ಅನ್ನೋದು.. ಮಕ್ಕಳ ಜೊತೆ ಶಿಕ್ಷಣ ಇಲಾಖೆ ಇದೇನು ಕಣ್ಣಾಮುಚ್ಚಾಲೆ ಆಡ್ತಿದೆ? ಚಿಕ್ಕಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಎಂದರೆ ಎಷ್ಟೊಂದು ಭಯ, ಆತಂಕ ಇದೆ ಅನ್ನೋದು ನಮಗೆ ಗೊತ್ತಿದೆ. ಮಕ್ಕಳು ರಾತ್ರಿ ನಿದ್ರೆಯಲ್ಲೂ ಪರೀಕ್ಷೆ ಪರೀಕ್ಷೆ ಅಂತ ಬೆಚ್ಚಿಬೀಳ್ತಿವೆ. ಈ ಸರ್ಕಾರಕ್ಕೆ ಮಕ್ಕಳ ಪರೀಕ್ಷೆಯ ಗೊಂದಲ ಪರಿಹರಿಸುವುದಕ್ಕಿಂತ ಚುನಾವಣೆಯೇ ಮುಖ್ಯವಾಗಿಬಿಟ್ಟಿದೆ. ಕನಿಷ್ಟ ಒಬ್ಬೇ ಒಬ್ಬ ಸಚಿವರಾಗಲೀ, ಅಧಿಕಾರಿಯಾಗಲೀ ಮಕ್ಕಳ ಪರಿಸ್ಥಿತಿ ಏನು? ಪೋಷಕರ ಮನಸ್ಥಿತಿ ಏನು ಎಂದು ಯೋಚಿಸಿದ್ದಾರ? ಪರೀಕ್ಷೆ ಬಗ್ಗೆ ಯಾವುದಾದರೂ ಪೋಷಕರ ಅಭಿಪ್ರಾಯ ಕೇಳಿದ್ದಾರ? ಮುಂದೆನೂ ಪರೀಕ್ಷೆ ಮಾಡ್ತಾರೋ, ಬಿಡ್ತಾರೋ, ಯಾವಾಗ ಮಾಡ್ತಾರೆ? ಏನು ಕಥೆ.. ಅನ್ನೋದರ ಬಗ್ಗೆ ಶಿಕ್ಷಣ ಸಚಿವರು ಎಲ್ಲಾದರೂ ಮಾತನಾಡಿದಾರ? ಇವರಿಗೇನು ಒಂಚೂರು ಜವಾಬ್ದಾರಿಯೇ ಇಲ್ಲವಾ? ಇದೊಂದು ಮತಿಗೇಡಿ ಸರ್ಕಾರ..” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಒಂದು ವಾರದಿಂದ ಪಬ್ಲಿಕ್ ಪರೀಕ್ಷೆಯ ವಿಷಯದಲ್ಲ ದಿನಕ್ಕೊಂದು ಆದೇಶ, ದಿನಕ್ಕೊಂದು ಸುತ್ತೋಲೆಗಳು ಬರುತ್ತಿವೆಯೇ ವಿನಃ, ಗೊಂದಲದ ಬಗ್ಗೆ ಸ್ಪಷ್ಟನೆ ನೀಡುವ, ಮಕ್ಕಳು- ಪೋಷಕರ ಆತಂಕ ದೂರ ಮಾಡುವ ಪ್ರಯತ್ನವನ್ನು ಶಿಕ್ಷಣ ಇಲಾಖೆಯ ಸಚಿವರಾಗಲೀ, ಅಧಿಕಾರಿಗಳಾಗಲೀ ಮಾಡಿಲ್ಲ ಎಂಬುದು ಅಕಾಡೆಮಿಕ್ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳು ಮತ್ತು ಪೋಷಕರನ್ನು ಶಿಕ್ಷಣ ಇಲಾಖೆ ವಿಶ್ವಾಸಕ್ಕೆ ಪಡೆಯದೇ ನಿರ್ಲಕ್ಷಿಸುತ್ತಿರುವುದು ಸರ್ಕಾರಕ್ಕೂ ಕಪ್ಪುಚುಕ್ಕೆ ತಂದಿದೆ.

"ಇದು ಪರೀಕ್ಷೆಯಲ್ಲ, ಸಂಕಲನಾತ್ಮಕ ಮೌಲ್ಯಮಾಪನ. ನಮ್ಮ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಬೋಧನೆಯ ಗುಣಮಟ್ಟ ಸರಿಯಿಲ್ಲ ಎಂದು ನಾವು ಅದನ್ನು ಸುಧಾರಿಸಲು ಈ ಪರೀಕ್ಷೆ ನಡೆಸುತ್ತಿದ್ದೇವೆ. ಇದರಲ್ಲಿ ಮಕ್ಕಳು ಉತ್ತೀರ್ಣರಾಗುವ ಅಗತ್ಯವಿಲ್ಲ. ಮಕ್ಕಳನ್ನು ಅವರ ಭವಿಷ್ಯಕ್ಕೆ ಸಿದ್ಧಪಡಿಸಲು ಈ ಪರೀಕ್ಷೆ ಅಷ್ಟೇ" ಎಂದು ಸುಪ್ರೀಂಕೋರ್ಟಿನಲ್ಲಿ ರಾಜ್ಯ ಸರ್ಕಾರ ವಾದ ಮಂಡಿಸಿದೆ. 

ಆದರೆ, ಪೋಷಕರು, ಶಿಕ್ಷಣ ತಜ್ಞರು, ಪ್ರತಿಪಕ್ಷಗಳು ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದಲ್ಲಿ ಪಬ್ಲಿಕ್‌ ಪರೀಕ್ಷೆ ನಡೆಸುವುದು ಕಾನೂನು ಉಲ್ಲಂಘನೆಯಷ್ಟೇ ಅಲ್ಲ; ಮಕ್ಕಳು ಮತ್ತು ಪೋಷಕರ ಮೇಲಿನ ಅನಗತ್ಯ ಒತ್ತಡ ಎಂದು ಸರ್ಕಾರವನ್ನು ಟೀಕಿಸಿವೆ. ಈ ಬಗ್ಗೆ ಸರ್ಕಾರ ಈವರೆಗೂ ಮೌನ ಮುರಿದಿಲ್ಲ. ಆ ಬಗ್ಗೆ ಪ್ರತಿಕ್ರಿಯೆ ಕೇಳಿ ʼದ ಫೆಡರಲ್‌ ಕರ್ನಾಟಕʼ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ. ಹಾಗೇ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್ ಸಿಂಗ್‌, ಆಯುಕ್ತೆ ಬಿ ಬಿ ಕಾವೇರಿ ಅವರಿಗೂ ಕರೆ ಮಾಡಲಾಯಿತಾದರೂ ಪ್ರತಿಕ್ರಿಯೆ ಸಿಕ್ಕಿಲ್ಲ.

Tags:    

Similar News