ಕೇಂದ್ರದ ಆಯವ್ಯಯಕ್ಕೆ ಕ್ಷಣಗಣನೆ: ಕರ್ನಾಟಕ ಏರಿಗೆ, ಕೇಂದ್ರ ನೀರಿಗೆ

ಕೇಂದ್ರದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ (ಜುಲೈ 23ಕ್ಕೆ) ತಮ್ಮ ಏಳನೇ ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವುದರಿಂದ, ಸೀತಾರಾಮನ್ ಈ ಬಾರಿ, ಕರ್ನಾಟಕಕ್ಕೆ ನ್ಯಾಯ ದೊರಕಿಸಲಿದ್ದಾರೆ ಎಂಬ ಭಾವನೆ ಜನರಲ್ಲಿ ದಟ್ಟವಾಗಿದೆ. ಇದರೊಂದಿಗೆ ಜಲ ಶಕ್ತಿ, ರೈಲ್ವೆಯ ರಾಜ್ಯ ಸಚಿವರಾಗಿರುವ ವಿ ಸೊಮಣ್ಣ ಅವರ ಮೇಲೆ, ರಾಜ್ಯದ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು, ರೈಲ್ವೆ ಯೋಜನೆಗಳಿಗೆ ಮುಕ್ತಿ ದೊರಕಬಹುದೆಂಬ ಆಶಾ ಭಾವವೂ ಇದೆ. ಇವರ ಹಿಂದೆ ಕೇಂದ್ರ ಸರ್ಕಾರದ ಪ್ರಭಾವಿ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರೂ ಇರುವುದರಿಂದ, ಈ ಬಾರಿ ಕರ್ನಾಟಕಕ್ಕೆ ಅನ್ಯಾಯವಾಗಲಾರದೆಂಬ ನಂಬಿಕೆ ಇದೆ.

Update: 2024-07-21 07:12 GMT

ಕೇಂದ್ರದ ಎನ್ ಡಿ ಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಅವರು ಮತ್ತೆ ವಿತ್ತ ಸಚಿವರಾಗಿ ಜುಲೈ 23 ರಂದು ಅವರು ತಮ್ಮ ಏಳನೇ ಬಜೆಟ್‌ ಮಂಡಿಸಲು ಸಜ್ಜಾಗಿದ್ದಾರೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಮೇಲೆ ಕರ್ನಾಟಕದ ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಕೇಂದ್ರದ ಬಜೆಟ್‌ ಮಂಡನೆಗೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕಕ್ಕೆ ಏನನ್ನು ನೀಡಲಿದ್ದಾರೆ? ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿಯೂ ಇದೆ.

25 ಸಂಸದರಿದ್ದೂ ಸನ್ನದ್ಧರಾಗದವರು

ಕಳೆದ ಬಾರಿ, ಅಂದರೆ ಫೆಬ್ರುವರಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್ ಮಂಡಿಸಿದಾಗ, ಕರ್ನಾಟಕದ ಬಿಜೆಪಿಯಿಂದ ಆಯ್ಕೆಯಾದ 25 ಸಂಸದರಿದ್ದರು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್‌ ಅವರೇ ಹಣಕಾಸು ಸಚಿವರಾಗಿದ್ದರು. ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಕೆಲವರು ಕೇಂದ್ರದ ಸಚಿವ ಸಂಪುಟದಲ್ಲಿದ್ದರೂ, ಕರ್ನಾಟಕಕ್ಕೆ ʻದ್ರೋಹʼವಾಗಿದೆ. ತಮ್ಮನ್ನು ಆಯ್ಕೆಮಾಡಿ ಕಳುಹಿಸಿದ ಕರ್ನಾಟಕಕ್ಕಾಗಿ ಅವರೇನೂ ಸಹಾಯ ಮಾಡಲಿಲ್ಲ. ಅದಕ್ಕೂ ಮುನ್ನಿನ ದಿನಗಳಲ್ಲಿ, ಕೇಂದ್ರ ಮತ್ತು ರಾಜ್ಯದಲ್ಲಿ ʻದ್ವಿ-ಎಂಜಿನ್‌ʼ (Double Engine) ಸರ್ಕಾರವಿದ್ದಾಗಲೂ, ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಅರೋಪ, ಈಗ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರದ್ದು.

ಕರ್ನಾಟಕದ ವಿರುದ್ಧ ತಾರತಮ್ಯ

ತೆರಿಗೆ ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಇತರ ದಕ್ಷಿಣ ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಎಲ್ಲ ಸಚಿವರೂ, ಶಾಸಕರೂ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪ್ರತಿಭಟನೆಯನ್ನು “ಕರ್ನಾಟಕ ಮತ್ತು ಕನ್ನಡಿಗರ ಹಿತಾಸಕ್ತಿ ಕಾಪಾಡುವ ಆಂದೋಲನ” ಮತ್ತು ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ಎಂದು ಸ್ಪಷ್ಟಪಡಿಸಿದ್ದ ಸಿದ್ದರಾಮಯ್ಯ, ಪ್ರತಿಭಟನೆಯು ಉತ್ತರ-ದಕ್ಷಿಣ ವಿಭಜನೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂಬ ಬಿಜೆಪಿಯ ಆರೋಪವನ್ನು ತಳ್ಳಿಹಾಕಿದ್ದರು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ದೇಶದ ಆದಾಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಕರ್ನಾಟಕವು ಒಕ್ಕೂಟ ವ್ಯವಸ್ಥೆಯಡಿಯಲ್ಲಿ ತನ್ನ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ ಎಂದು ಸ್ವತಃ ವಕೀಲರಾಗಿದ್ದ ಸಿದ್ದರಾಮಯ್ಯ ಸಮರ್ಥ ವಾದ ಮಂಡಿಸಿದ್ದರು.

ಕರ್ನಾಟಕಕ್ಕೆ ಆಗಿರುವ ನಷ್ಟ

ಹದಿನೈದನೇ ಹಣಕಾಸು ಆಯೋಗದ ಅಡಿಯಲ್ಲಿ 2017 ರಿಂದ ರೂ. 1.87 ಲಕ್ಷ ಕೋಟಿಗಳಷ್ಟು ರಾಜ್ಯದ ನಷ್ಟವನ್ನು ಕೇಂದ್ರ ಸರ್ಕಾರ ಸರಿಪಡಿಸಬೇಕು. ಹದಿನಾಲ್ಕನೇ ಹಣಕಾಸು ಆಯೋಗದ ಅಡಿಯಲ್ಲಿ ರಾಜ್ಯಗಳಿಗೆ, ವಿಶೇಷವಾಗಿ ಕರ್ನಾಟಕಕ್ಕೆ ತೆರಿಗೆಗಳನ್ನು ವಿತರಿಸಲು ಬಳಸಿದ ಸೂತ್ರವನ್ನು ಹದಿನೈದನೇ ಹಣಕಾಸು ಆಯೋಗವು ಬದಲಾಯಿಸಿದೆ ಎಂದು ಅವರು ಪ್ರತಿಪಾದಿಸಿ, ಕರ್ನಾಟಕಕ್ಕೆ ಆಗಿರುವ ಆದಾಯದ ನಷ್ಟವನ್ನು ತಡೆಗಟ್ಟಲು ಹಳೆಯ ಸೂತ್ರವನ್ನೇ ಅನುಸರಿಸುವಂತೆ ಅವರು ಒತ್ತಾಯಿಸಿದ್ದರು.

ಒಟ್ಟಾರೆ, 14ನೇ ಹಣಕಾಸು ಆಯೋಗದ ಶಿಫಾರಸುಗಳನ್ನು 15ನೇ ಹಣಕಾಸು ಆಯೋಗ ಅನುಸರಿಸಿದ್ದರೆ ಕರ್ನಾಟಕಕ್ಕೆ ₹ 62,098 ಕೋಟಿ ಸಿಗುತ್ತಿತ್ತು ಎಂದು ಹೇಳಿದ್ದ ಸಿದ್ದರಾಮಯ್ಯ "15 ನೇ ಹಣಕಾಸು ಆಯೋಗವು ದಕ್ಷಿಣ ಭಾರತದ ರಾಜ್ಯಗಳಿಂದ ಒಬ್ಬ ಸದಸ್ಯರನ್ನು ಹೊಂದಿಲ್ಲ" ಎಂದು ಆರೋಪಿಸಿದ್ದರು. ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆ, ಅನುದಾನ, ಬರ ಪರಿಹಾರ ಬಿಡುಗಡೆ ಮಾಡದಿರುವುದು ಮತ್ತು ಕಳೆದ ಕೆಲವು ವರ್ಷಗಳಿಂದ ಜಲಸಂಪನ್ಮೂಲ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಮತಿ ನಿರಾಕರಿಸುವದೂ ಸೇರಿದಂತೆ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. 2014ರಲ್ಲಿ ರೂ. 23 ಲಕ್ಷ ಕೋಟಿಯಷ್ಟಿದ್ದ ಕೇಂದ್ರ ಬಜೆಟ್‌ನ ಗಾತ್ರ 2023ರಲ್ಲಿ ರೂ. 45 ಲಕ್ಷ ಕೋಟಿಗೆ ದ್ವಿಗುಣಗೊಂಡಿದ್ದರೂ, ರಾಜ್ಯಕ್ಕೆ ಪ್ರತಿ ವರ್ಷ ₹ 50,000 ಕೋಟಿಗಳಷ್ಟು ಹಂಚಿಕೆ ಸ್ಥಗಿತಗೊಂಡಿದೆ ಎಂದು ಅವರು ವಾದಿಸಿದ್ದರು. ಕನ್ನಡಿಗರು ರೂ. 4.30 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿದ್ದಾರೆ. . ಆದರೆ ಅವರಿಗೆ ರೂ. 50,000 ಕೋಟಿ ಮಾತ್ರ ಹಿಂದಿರುಗಿ ದಕ್ಕುತ್ತಿದೆ. ಅಂದರೆ ಪ್ರತಿ ರೂ. 100ರಲ್ಲಿ ಕರ್ನಾಟಕಕ್ಕೆ ಹಿಂದಿರುಗಿ ಸಿಕ್ಕುತ್ತಿರುವುದು ರೂ. 13 ಮಾತ್ರ. ಇದು ಅನ್ಯಾಯ ಎಂದಿದ್ದರು.

ಈಗ ಬದಲಾದ ಪರಿಸ್ಥಿತಿ

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೇಂದ್ರದ ಎನ್‌ ಡಿ ಎ ಸರ್ಕಾರದಲ್ಲಿ ಬಿಜೆಪಿ ಸಂಸದರ ಸಂಖ್ಯೆ ಕುಸಿದಿದ್ದು, ಅಧಿಕಾರದಲ್ಲಿರಲು, ಬಿಜೆಪಿ ಪಕ್ಷವು, ಟಿಡಿಪಿ ಮತ್ತು ಜೆಡಿ(ಯು) ಪಕ್ಷಗಳ ಬೆಂಬಲವನ್ನು ಅವಲಂಬಿಸಿದೆ. ರಾಜ್ಯದಿಂದ ಆಯ್ಕೆಯಾದ ಬಿಜೆಪಿಯ ಪ್ರಹ್ಲಾದ್‌ ಜೋಶಿ, ಮೈತ್ರಿ ಕೂಟದ ಜೆಡಿ(ಎಸ್)ನ ಎಚ್ ಡಿ ಕುಮಾರಸ್ವಾಮಿ, ಕೇಂದ್ರದ ಸಂಪುಟದ ಪ್ರಮುಖ ಸ್ಥಾನದಲ್ಲಿದ್ದರೆ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ರಾಜ್ಯ ಸಚಿವರಾಗಿದ್ದಾರೆ. ಮೊದಲೇ ಪ್ರಸ್ತಾಪಿಸಿದಂತೆ ಕರ್ನಾಟಕದಿಂದ ರಾಜ್ಯ ಸಭೆ ಪ್ರತಿನಿಧಿಯಾಗಿರುವ ನಿರ್ಮಲಾ ಸೀತಾರಾಮನ್ ಅವರೇ ವಿತ್ತ ಸಚಿವರಾಗಿದ್ದಾರೆ. ಉಳಿದಂತೆ ಎಲ್ಲವೂ ಸೇರಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ 19 ಮಂದಿ ಸಂಸದರಿದ್ದಾರೆ. ಇವರು, ಕರ್ನಾಟಕಕ್ಕೆ ಆಗಿದೆ ಎಂದು ಕಾಂಗ್ರೆಸ್‌ ಹೇಳುತ್ತಿರುವ ಅನ್ಯಾಯಗಳನ್ನು ಸರಿಪಡಿಸುತ್ತಾರೆಯೇ? ಎಂಬ ಪ್ರಶ್ನೆ ಜನತೆಯ ಮುಂದಿದೆ. ಈ ಕೇಂದ್ರ ಸಚಿವರಿಗೂ, ಜನರಿಗೆ ಉತ್ತರಿಸಬೇಕಾದ ಒತ್ತಡವಿದೆ. ಕೇಂದ್ರದ ಉಕ್ಕು ಸಚಿವರಾಗಿರುವ ಕುಮಾರಸ್ವಾಮಿಯವರಿಂದ ಕರ್ನಾಟಕ ಸಾಕಷ್ಟು ನಿರೀಕ್ಷೆಗಳನ್ನು ಹೊಂದಲು ಕಾರಣವೆಂದರೆ; ಅವರೀಗ ಬಹುಮುಖ್ಯವಾದ ದೇಶದ ಆರ್ಥಿಕ ವಿಷಯಗಳ ಸಂಪುಟ ಸಮಿತಿಯಲ್ಲಿ (Cabinet Committee on Economic Affairs) ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಕರ್ನಾಟಕದ ರಾಜಕೀಯ ಹಾಗೂ ಆರ್ಥಿಕ ತಜ್ಞರ ಪ್ರಕಾರ; ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಯೋಜನೆಗಳ ಅನುಮೋದನೆಯ ವಿಚಾರವನ್ನೇ ತೆಗೆದುಕೊಂಡರೆ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಉಳಿದ ಉತ್ತರದ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಕರ್ನಾಟಕವು ಬಿಜೆಪಿಗೆ ʻದಕ್ಷಿಣದ ಹೆಬ್ಬಾಗಿಲುʼ ಎಂದು ಭಾವಿಸಿ, ಹೆಚ್ಚು ಸಂಸದರನ್ನು ನೀಡಿದರೂ, ರಾಜ್ಯಕ್ಕೆ ರಾಜಕೀಯ ಅನುಕೂಲವಾಗಿರುವುದು ಕಡಿಮೆ. ಎಲ್ಲರಿಗೂ ಹೀಗನ್ನಿಸಲು ಅವರು ಅನೇಕ ನಿದರ್ಶನಗಳನ್ನು ನೀಡುತ್ತಾರೆ.

ಕರ್ನಾಟಕವು, ದೇಶದ ಆರ್ಥಿಕತೆಗೆ ಅತಿ ಹೆಚ್ಚು ಸಂಪನ್ಮೂಲವನ್ನು ನೀಡುತ್ತಿದೆ. ರಾಜ್ಯದಿಂದ ಕೇಂದ್ರಕ್ಕೆ ಸಲ್ಲಿಕೆಯಾಗುತ್ತಿರುವ GST ಮೊತ್ತವೇ ರೂ. 1.20 ಲಕ್ಷ ಕೋಟಿ. ಆದರೆ ರಾಜ್ಯಕ್ಕೆ ಕೇಂದ್ರದಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಸಿಕ್ಕುತ್ತಿಲ್ಲ. ಹಾಗಾಗೇ ಕೇಂದ್ರದೊಂದಿಗೆ ಸಂಘರ್ಷಕ್ಕಿಳಿಯಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ, ಕಾಂಗ್ರೆಸ್‌ ವಾಕ್ತಾರ ರಮೇಶ್‌ ಬಾಬು.

ಎಲ್ಲರ ಚಿತ್ರ ಸೋಮಣ್ಣನತ್ತ

ಮೇಕೆದಾಟು ಯೋಜನೆ ಆಮೆ ವೇಗದಲ್ಲಿ ಸಾಗುತ್ತಿದೆ. 2019ರಲ್ಲಿಯೇ ರಾಜ್ಯ ಸರ್ಕಾರ ವಿಸ್ತೃತ ಯೋಜನಾ ವರದಿ (DPR) ಸಲ್ಲಿಸಿದರೂ ಕೇಂದ್ರದ ಜಲ ಆಯೋಗ ಇದನ್ನು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರಕ್ಕೆ ಸಾಗಹಾಕಿದೆ. ಈ ವಿಷಯವನ್ನು ಸಭೆಯ ಕಾರ್ಯಸೂಚಿಯಲ್ಲಿ ಸೇರಿಸಬೇಕೇ? ಬೇಡವೇ? ಎಂದು ಯೋಚಿಸುತ್ತಲೇ ಪ್ರಾಧಿಕಾರ ಮೂರು ವರ್ಷ ಕಳೆದಿದೆ. ಕಳಸಾ-ಬಂಡೂರಿ ಯೋಜನೆಗೆ ಮಹದಾಯಿ ನ್ಯಾಯ ಮಂಡಳಿ ಅನುಮತಿಯನ್ನು ನಿರಾಕರಿಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಾರಿಯ ಬಜೆಟ್‌ ನಲ್ಲಿ ನಿರ್ಮಲಾ ಸೀತಾರಾಮನ್‌ ರೂ.5300 ಕೋಟಿ ಮೀಸಲಿಡುವುದಾಗಿ ಪ್ರಕಟಿಸಿದ್ದರು. ಆದರೆ ರಾಜ್ಯಕ್ಕೆ ಇದುವರೆಗೆ ಚಿಕ್ಕಾಸೂ ಬಂದಿಲ್ಲ ಎಂದು ಸಿದ್ದರಾಮಯ್ಯ ಅಲವೊತ್ತಿಕೊಳ್ಳುತ್ತಾರೆ. ಈಗ ಎಲ್ಲರ ಚಿತ್ತ ಸೋಮಣ್ಣನವರತ್ತ ಇದೆ. ʼಜಲಶಕ್ತಿʼ ಮಂತ್ರಾಲಯದ ಸಚಿವರಾಗಿರುವ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5300 ಕೋಟಿ ಕೊಡಿಸುತ್ತಾರೆಯೇ. ಕರ್ನಾಟಕದ ಹಿತ ಕಾಪಾಡಲು ಮೇಕೆದಾಟು, ಕಳಸಾ-ಬಂಡೂರಿ ಯೋಜನೆಯನ್ನು ಕೆಂಪು ಪಟ್ಟಿಯಿಂದ ಬಿಡುಗಡೆಗೊಳಿಸುತ್ತಾರೆಯೇ? ಕಾದು ನೊಡಬೇಕಿದೆ.

1264 ಕಿ.ಮೀನ ಒಂಭತ್ತು ರೈಲ್ವೆ ಯೋಜನೆ

ಸೋಮಣ್ಣನವರು ಕೇಂದ್ರದ ರೈಲ್ವೆ ಮಂತ್ರಾಲಯದ ರಾಜ್ಯ ಸಚಿವರಾಗಿರುವ ಕಾರಣದಿಂದ ಅವರಿಂದ ನಿರೀಕ್ಷೆಗಳು ಮತ್ತಷ್ಟು ಹೆಚ್ಚಿದೆ. ಕಳೆದ ಮೂರು ದಶಕಗಳಿಂದ ವಿಳಂಬವಾಗುತ್ತಿರುವ ಸುಮಾರು 1264 ಕಿ.ಮೀ ಒಳಗೊಂಡ ಒಂಭತ್ತು ರೈಲ್ವೆ ಯೋಜನೆ ಕಾಮಗಾರಿಗಳಿಗೆ ವೇಗ ದೊರೆಯಬೇಕಿದೆ. ಈ ಯೋಜನೆಗಳನ್ನು 2025-2026 ರೊಳಗೆ ಅಂತ್ಯಗೊಳಿಸುವುದಾಗಿ ಸೋಮಣ್ಣ ಇತ್ತೀಚೆಗೆ, ನೈಋತ್ಯ ರೈಲ್ವೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸ್ಪಷ್ಟಪಡಿಸಿದ್ದಾರೆ. ಈ ಒಂಭತ್ತು ಯೋಜನೆಗಳೆಂದರೆ; ತುಮಕೂರು-ಕಲ್ಯಾಣದುರ್ಗ ಮೂಲಕ ರಾಯದುರ್ಗ, ತುಮಕೂರು-ಚಿತ್ರದುರ್ಗ-ದಾವಣಗೆರೆ, ಗಿಣಿಗೇರಾ-ರಾಯಚೂರು, ಬಾಗಲಕೋಟೆ-ಕುಡುಚಿ, ಗದಗ-ವಾಡಿ, ಕಡೂರು-ಚಿಕ್ಕಮಗಳೂರು, ಶಿವಮೊಗ್ಗ, ಶಿಕಾರಿಪುರ-ರಾಣೆಬೆನ್ನೂರು, ಬೆಳಗಾವಿ-ಕಿತ್ತೂರು ಮಾರ್ಗವಾಗಿ ಧಾರವಾಡ, ಹಾಗೂ, ಹಾಸನ-ಬೇಲೂರು.

ಇವಲ್ಲದೆ ಹಳೇ ಯೋಜನೆ ಮುನಿರಾಬಾದ್‌ - ಮೆಹಬೂಬ್‌ನಗರ ರೈಲ್ವೇ ಕಾಮಗಾರಿಗೆ ವೇಗ ನೀಡಬೇಕಿದೆ. ಹಳಿಗಳ ವಿದ್ಯುತ್ತೀಕರಣ ಶೇ.87ರಷ್ಟು ಆಗಿದ್ದು, ಕರಾವಳಿ ಭಾಗದಲ್ಲಿ ಹಳಿಗಳ ವಿದ್ಯುತ್ತೀಕರಣ ಆಗಬೇಕಿದೆ. ಕರಾವಳಿಗೆ ಹೆಚ್ಚಿನ ರೈಲ್ವೇ ಯೋಜನೆಗಳು ಬೇಕಿದೆ. ಅದು ಕರ್ನಾಟಕದ ಪ್ರಮುಖ ಅವಿಭಾಜ್ಯ ಅಂಗ, ಆದ್ದರಿಂದ ಅಲ್ಲಿ ಹೆಚ್ಚಿನ ರೈಲುಗಳ ಅಗತ್ಯವಿದೆ. ಕೊಂಕಣ ರೈಲ್ವೇ ವಿಭಾಗವನ್ನು ನೈರುತ್ಯ  ರೈಲ್ವೆಗೆ ಸೇರಿಸಬೇಕಿದೆ, ಮಂಗಳೂರು ರೈಲ್ವೇ ವಲಯವನ್ನು ಘೋಷಿಸಬೇಕಿದೆ. ಇದರಿಂದ ಕರಾವಳಿಗೆ ನ್ಯಾಯ ಸಿಗಲಿದೆ ಎಂಬುದು ಕರಾವಳಿ ಭಾಗದ ಜನರ ಆಕಾಂಕ್ಷೆ. ಬೆಂಗಳೂರು ಉಪನಗರ ರೈಲು ಯೋಜನೆ (BSRP) ಕಾಮಗಾರಿ ಚುರುಕುಗೊಳಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (Rail Infrastructure Development Company Karnataka K RIDE ) ನ ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ತಾಂತ್ರಿಕ ತಜ್ಞರ ನೇಮಕಾತಿ ಮಾಡುವುದಾಗಿ ಹೇಳಿದ್ದಾರೆ.

ಬೆಂಗಳೂರ-ಚಾಮರಾಜನಗರ ರೈಲು ಯೋಜನೆ

ಈ ನಡುವೆ ಕೇಂದ್ರದ ಉಕ್ಕು ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೆ ಸಚಿವರಾಗಿರುವ ಅಶ್ವಿನಿ ವೈಷ್ಣವ್‌ ಅವರನ್ನು ಭೇಟಿಯಾಗಿ ಕರ್ನಾಟಕದ ನಿಂತ ನೀರಿನಂತಾಗಿರುವ ರೈಲ್ವೆ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಮುಖ್ಯವಾಗಿ ಕುಮಾರಸ್ವಾಮಿ ಅವರು ಪ್ರಸ್ತಾಪ ಮಾಡಿದ್ದು, ಅವರ ತಂದೆ ಎಚ್‌ ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಅನುಮತಿಸಲಾಗಿದ್ದ ಬೆಂಗಳೂರು-ಸತ್ಯಮಂಗಲ-ಚಾಮರಾಜಪುರ ರೈಲ್ವೆ ಯೋಜನೆಯನ್ನು ಶೀಘ್ರದಲ್ಲಿ ಮುಗಿಸಿಕೊಡುವಂತೆ ಅವರು ಮನವಿ ಮಾಡಿದ್ದಾರೆ. ಮೋದಿ ಸಂಪುಟದಲ್ಲಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿರುವ ಕುಮಾರಸ್ವಾಮಿ ಅವರ ಮಾತನ್ನು ವೈಷ್ಣವ್‌ ಅಷ್ಟು ಸುಲಭವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲದಿರುವುದರಿಂದ, ಈ ಯೋಜನೆಯ ಕಾಮಗಾರಿ ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಕುಮಾರಸ್ವಾಮಿ ಅವರ ಸಮೀಪವರ್ತಿ ಮೂಲಗಳು ಹೇಳುತ್ತಿವೆ.

ಇವಿಷ್ಟೇ ಅಲ್ಲದೆ, ರಾಯಚೂರಿಗೆ All India Institute of Medical Sciences (AIIMS) ಏಮ್ಸ್‌ ಕೇಂದ್ರವನ್ನು ನೀಡಬೇಕು, ಬೆಂಗಳೂರಿನ ಹೆಚ್ಚುತ್ತಿರುವ ವಾಹನ ಸಂಚಾರದ ಸಮಸ್ಯೆಗೆ ಪರಿಹಾರ ದೊರಕಿಸಲು ಯೋಜಿಸಿರುವ ಸುರಂಗ ಕಾರಿಡಾರ್‌ (Tunnel Corridor) ಯೋಜನೆಗೆ ರೂ. 30000 ಕೋಟಿ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ ಕೇಳಿದ್ದರು. ಈ ಬೇಡಿಕೆಗಳ ಜೊತೆಗೆ, ಬೆಂಗಳೂರು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಒಂದನ್ನು ನೀಡುವಂತೆಯೂ ಅವರು ಕೇಳಿದ್ದಾರೆ. “ಮೋದಿ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದಕ್ಕಿದೆ” ಎಂದು ದೆಹಲಿಯಿಂದ ತಿರುಗಿ ಬಂದ ನಂತರ ಸಿದ್ದರಾಮಯ್ಯ ಹೇಳಿದ್ದಾರೆ. ಎಷ್ಟರ ಮಟ್ಟಿಗೆ ಸಕಾರಾತ್ಮಕ ಎಂಬುದನ್ನು ಕಾದು ನೋಡಬೇಕಿದೆ.

ಸಂಘರ್ಷ ಅನಗತ್ಯ

ಹಿಂದೆಲ್ಲ, ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಟೀಕಿಸುತ್ತಿದ್ದ, ಕುಮಾರಸ್ವಾಮಿ ಅವರು, ಎನ್‌ಡಿಎ ಮಿತ್ರಪಕ್ಷವಾಗಿ ಅಧಿಕಾರ ಸ್ಥಾನ ದೊರೆತ ನಂತರ ತಮ್ಮ ರಾಗ ಬದಲಿಸಿದ್ದಾರೆ. “ನೀರಾವರಿ ಯೋಜನೆಗಳೂ ಸೇರಿದಂತೆ, ರಾಜ್ಯದ ಅನೇಕ ಯೋಜನೆಗಳು ಬಾಕಿ ಉಳಿದಿವೆ. ಅವುಗಳ ತ್ವರಿತ ಜಾರಿಗೆ ಎಲ್ಲರೂ ಒಟ್ಟಾಗಿ ಪ್ರಯತ್ನ ಮಾಡಬೇಕಿದೆ. ಬೆಂಗಳೂರಿಗೆ 15ನೇ ಹಣಕಾಸು ಆಯೋಗ ರೂ.11000 ಕೋಟಿ ಮೀಸಲಿಟ್ಟಿದೆ. ಆ ಪೈಕಿ ರೂ. 6000 ಕೋಟಿ ಬಂದಿಲ್ಲ ಎಂದು ಕಾಂಗ್ರೆಸ್‌ ಸರ್ಕಾರ ದೂರುತ್ತಿದೆ. ಬೆಂಗಳೂರಿನ ಪೆರಿಫೆರಲ್‌ ವರ್ತುಲ ರಸ್ತೆಗೆ ರಾಜ್ಯ ಸರ್ಕಾರ ಮೊದಲು ಹಣವನ್ನು ಮೀಸಲಿಡಬೇಕು. ಬಳಿಕ ಕೇಂದ್ರದಿಂದ ಹಣ ಕೇಳಬೇಕು. ಇದು 29000 ಕೋಟಿ ರೂಪಾಯಿ ವೆಚ್ಚದ ಯೋಜನೆ. ಇದಕ್ಕೆ ರಾಜ್ಯ ಸರ್ಕಾರ ಹಣವನ್ನು ಮೀಸಲಿಟ್ಟಿಲ್ಲ. ಕೇಂದ್ರ-ರಾಜ್ಯ ಸರ್ಕಾರದ ನಡುವೆ ಬಾಂಧವ್ಯ ಬೇಕು. ಪರಸ್ಪರ ಹೊಂದಾಣಿಕೆ ಬೇಕಿದೆ. ಸಂಘರ್ಷ ಖಂಡಿತಾ ಬೇಡ” ಎಂದು ಹೇಳಿ ಕುಮಾರಸ್ವಾಮಿ ತಮ್ಮ ರಾಜಕೀಯ ಮುತ್ಸದೀತನ ಮೆರೆದಿದ್ದಾರೆ.

Tags:    

Similar News