ಒಳ ಮೀಸಲಾತಿ ಜಾರಿ ವಿಳಂಬ: ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಅತಂತ್ರ, ಬಾಗಿಲು ಮುಚ್ಚುತ್ತಿರುವ ತರಬೇತಿ ಕೇಂದ್ರಗಳು

ಕಳೆದ ಒಂದು ವರ್ಷದಿಂದ ತರಬೇತಿ ಪಡೆಯುವವರ ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗಿದ್ದು, ವಿದ್ಯಾರ್ಥಿಗಳನ್ನೇ ನಂಬಿಕೊಂಡಿದ್ದ ಚಂದ್ರಾಲೇಔಟ್‌ ಹಾಗೂ ವಿಜಯನಗರದ ಹಲವು ಸ್ಪರ್ಧಾತ್ಮಕ ಕೇಂದ್ರಗಳು ಸ್ಥಗಿತಗೊಂಡಿವೆ.;

Update: 2025-08-17 02:30 GMT

ಪರಿಶಿಷ್ಟ ಜಾತಿಗಳಿಗೆ ನ್ಯಾಯಯುತ ಪ್ರಾತಿನಿಧ್ಯ ನೀಡಲು ಒಳ ಮೀಸಲಾತಿ ಕಲ್ಪಿಸುವ ಸರ್ಕಾರದ ಆಶಯ, ಇದೀಗ ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಪಾಲಿಗೆ ಬಗೆಹರಿಯದ ಸಂಕಷ್ಟವಾಗಿ ಪರಿಣಮಿಸಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗವು ವರದಿ ಸಲ್ಲಿಸಿದ್ದರೂ, ಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಹೊಸ ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿರುವ ಸರ್ಕಾರದ ಆದೇಶ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಿದೆ. ಇದರ ಪರಿಣಾಮವಾಗಿ, ಉದ್ಯೋಗಾಕಾಂಕ್ಷಿಗಳನ್ನು ಅವಲಂಬಿಸಿದ್ದ ಇಡೀ ವ್ಯವಸ್ಥೆಯೇ ಅಲುಗಾಡುತ್ತಿದೆ.


Full View

ಕಳೆದ ಒಂದು ವರ್ಷದಿಂದ ಕೆಪಿಎಸ್​ಸಿ , ಕೆಇಎ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಪ್ರಮುಖ ಸರ್ಕಾರಿ ಸಂಸ್ಥೆಗಳಿಂದ ಒಂದೇ ಒಂದು ನೇಮಕಾತಿ ಅಧಿಸೂಚನೆಯೂ ಹೊರಬಿದ್ದಿಲ್ಲ. ಇದರಿಂದಾಗಿ, ಸರ್ಕಾರಿ ಹುದ್ದೆಯ ಕನಸು ಹೊತ್ತು ಬೆಂಗಳೂರಿನ ವಿಜಯನಗರ, ಚಂದ್ರಾಲೇಔಟ್​ನಂತಹ ಪ್ರದೇಶಗಳಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ವಿದ್ಯಾರ್ಥಿಗಳನ್ನೇ ನಂಬಿ ಸ್ಥಾಪನೆಯಾಗಿದ್ದ ಹಲವಾರು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು ಈಗಾಗಲೇ ಬಾಗಿಲು ಮುಚ್ಚಿದ್ದು, ಅಲ್ಲಿ ಬೋಧನೆ ಮಾಡುತ್ತಿದ್ದ ನೂರಾರು ಶಿಕ್ಷಕರು ಉದ್ಯೋಗ ಕಳೆದುಕೊಂಡಿದ್ದಾರೆ.

ಈ ಬಗ್ಗೆ ಚಂದ್ರಾಲೇಔಟ್​ನ ಸ್ವಾತಿ ಪಿ.ಜಿ. ಮಾಲೀಕರಾದ ರೇಣುಕಾ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ. "ಹಿಂದೆಲ್ಲಾ ನಮ್ಮ ಪಿ.ಜಿ.ಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ವಿದ್ಯಾರ್ಥಿಗಳಿಂದ ಸದಾ ತುಂಬಿರುತ್ತಿದ್ದವು. ಆದರೆ, ಒಂದು ವರ್ಷದಿಂದ ನೇಮಕಾತಿ ಇಲ್ಲದಿರುವುದರಿಂದ ಈಗ ಕೇವಲ ಉದ್ಯೋಗಸ್ಥ ಮಹಿಳೆಯರು ಮಾತ್ರ ಉಳಿದಿದ್ದಾರೆ. ಶೇ. 50ರಷ್ಟು ಪಿ.ಜಿ. ಕೊಠಡಿಗಳು ಖಾಲಿಯಿದ್ದು, ನಿರ್ವಹಣೆಯೇ ಕಷ್ಟವಾಗಿದೆ," ಎಂದು ಅವರು ಹೇಳಿದರು.

ಅಧಿಸೂಚನೆಗಾಗಿ ಕಾಯುವುದರಲ್ಲೇ ಕಳೆಯುತ್ತಿದೆ ಯೌವನ

ಚಿಕ್ಕಮಗಳೂರಿನ ಆಕಾಂಕ್ಷಿ ದರ್ಶನ್ ಇ.ಜೆ. ಅವರ ಪ್ರಕಾರ, "ನಾಲ್ಕು ವರ್ಷಗಳಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇವೆ. ಸರ್ಕಾರ ಅಪರೂಪಕ್ಕೆ ಅಧಿಸೂಚನೆ ಹೊರಡಿಸುತ್ತದೆ. ಕಳೆದ ವರ್ಷ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಅಧಿಸೂಚನೆ ಹೊರಡಿಸಿದರೂ, ಅದು ಕೂಡ ಹಲವು ಗೊಂದಲಗಳಲ್ಲೇ ಮುಗಿದುಹೋಯಿತು. ಈಗ ಒಳ ಮೀಸಲಾತಿ ಘೋಷಣೆಯಿಂದಾಗಿ ಅಧಿಸೂಚನೆ ಮತ್ತಷ್ಟು ವಿಳಂಬವಾಗುತ್ತಿದೆ. ಇದರಿಂದ ನಮ್ಮಂತಹ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ," ಎಂದು ನೋವು ವ್ಯಕ್ತಪಡಿಸಿದರು.

ಹಾಸನದ ದರ್ಶಿನಿ ಯು.ಪಿ. ಅವರ ಮಾತುಗಳಲ್ಲಿಯೂ ಇದೇ ಹತಾಶೆ ವ್ಯಕ್ತವಾಯಿತು. "ಅಧಿಸೂಚನೆಗಳ ವಿಳಂಬ, ಪರೀಕ್ಷೆ ನಡೆದರೂ ಫಲಿತಾಂಶ ಮತ್ತು ಕೀ ಉತ್ತರ ಪ್ರಕಟಿಸಲು ಕೆಪಿಎಸ್ಸಿ ತೆಗೆದುಕೊಳ್ಳುವ ವಿಪರೀತ ಸಮಯ, ನ್ಯಾಯಾಲಯದಲ್ಲಿನ ಪ್ರಕರಣಗಳು ನಮ್ಮ ಬದುಕನ್ನು ಸಂಕಷ್ಟಕ್ಕೆ ದೂಡಿವೆ. ಬಡ ಕುಟುಂಬದ ನಮ್ಮಂತಹ ವಿದ್ಯಾರ್ಥಿಗಳ ಯೌವನವೆಲ್ಲಾ ಪರೀಕ್ಷೆ ತಯಾರಿಯಲ್ಲೇ ಕಳೆದುಹೋಗುತ್ತಿದೆ. ನಾವು ನಾಗರಿಕ ಸೇವೆ ಮಾಡುವುದಾದರೂ ಯಾವಾಗ? ಸರ್ಕಾರ ವಾಸ್ತವ ಅರಿತು ಶೀಘ್ರ ನಿರ್ಧಾರ ಕೈಗೊಳ್ಳಬೇಕು," ಎಂದು ಅವರು ಆಗ್ರಹಿಸಿದ್ದಾರೆ.

ತಿಂಗಳ ಖರ್ಚು 8,000 ರೂ.: ಆರ್ಥಿಕ ಸಂಕಷ್ಟದಲ್ಲಿ ಆಕಾಂಕ್ಷಿಗಳು

ಸರ್ಕಾರಿ ನೌಕರಿಯೊಂದೇ ಗುರಿಯಾಗಿಸಿಕೊಂಡು ನಗರಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಹಾವೇರಿಯ ಶಂಭು ಅವರ ಪ್ರಕಾರ, "ಗ್ರಂಥಾಲಯ ಮತ್ತು ಪಿ.ಜಿ.ಗಾಗಿಯೇ ತಿಂಗಳಿಗೆ ಸುಮಾರು 8,000 ರೂ. ಖರ್ಚಾಗುತ್ತಿದೆ. ಮನೆಯಿಂದಲೂ ಪ್ರತಿ ತಿಂಗಳು ಹಣ ಕೇಳಲು ಸಂಕೋಚವಾಗುತ್ತದೆ. ಸರ್ಕಾರ ಕೇವಲ ಎರಡು ತಿಂಗಳಲ್ಲಿ ವರದಿ ಜಾರಿ ಮಾಡುವುದಾಗಿ ಹೇಳಿತ್ತು, ಆದರೆ ಇನ್ನೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಯುವಜನತೆಯ ಮಾನಸಿಕ ಮತ್ತು ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಸರ್ಕಾರ ತಕ್ಷಣವೇ ಅಧಿಸೂಚನೆ ಹೊರಡಿಸಬೇಕು," ಎಂದು ತಿಳಿಸಿದರು.

ತರೀಕೆರೆಯ ನವೀನ್, "ನಮ್ಮದು ಕೃಷಿ ಕುಟುಂಬ. ನನ್ನ ಮಗ ಸರ್ಕಾರಿ ಅಧಿಕಾರಿಯಾಗುತ್ತಾನೆಂದು ಪೋಷಕರು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಒಳ ಮೀಸಲಾತಿ ಜಾರಿಯಾಗಲಿ, ಆದರೆ ಅದಕ್ಕಾಗಿ ನೇಮಕಾತಿ ಪ್ರಕ್ರಿಯೆಯನ್ನೇ ನಿಲ್ಲಿಸಿರುವುದು ಸರಿಯಲ್ಲ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲೆ ಆವರಿಸಿದೆ," ಎಂದರು.

ಶೀಘ್ರ ಜಾರಿಯಾಗದಿದ್ದರೆ ಹೋರಾಟ: ವಿದ್ಯಾರ್ಥಿ ಸಂಘಟನೆ ಎಚ್ಚರಿಕೆ

ಸರ್ಕಾರದ ವಿಳಂಬ ಧೋರಣೆ ಖಂಡಿಸಿರುವ ಅಖಿಲ ಕರ್ನಾಟಕ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ಸಂಘ, ಹೋರಾಟದ ಎಚ್ಚರಿಕೆ ನೀಡಿದೆ. ಸಂಘದ ಅಧ್ಯಕ್ಷ ಸಂತೋಷ್ ಮರೂರು ಮಾತನಾಡಿ, "ಒಳ ಮೀಸಲಾತಿ ನೀಡುವುದರಿಂದ ಹಿಂದುಳಿದ ಜಾತಿಗಳಿಗೆ ಅನುಕೂಲವಾಗಲಿದೆ, ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ ವರದಿ ಬಂದರೂ ಜಾರಿಗೊಳಿಸಲು ವಿಳಂಬ ಮಾಡುತ್ತಿರುವುದು ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ಒಳ ಮೀಸಲಾತಿ ಚರ್ಚೆಗೆ ಕರೆದಿದ್ದ ವಿಶೇಷ ಸಭೆಯನ್ನೂ ಮುಂದೂಡಲಾಗಿದೆ. ಸರ್ಕಾರ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು," ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಖಾಲಿ ಇರುವ ಹುದ್ದೆಗಳು

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 7,69,981 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 5,11,272 ಹುದ್ದೆಗಳು ಭರ್ತಿಯಾಗಿವೆ. ಉಳಿದ 2,58,709 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಪ್ರಮುಖವಾಗಿ ಶಿಕ್ಷಣ ಇಲಾಖೆಯಲ್ಲಿ 58,298, ಒಳಾಡಳಿತ ಇಲಾಖೆಯಲ್ಲಿ 26,168, ಕಂದಾಯ ಇಲಾಖೆಯಲ್ಲಿ 11,145, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 10,898, ಸಹಕಾರ ಇಲಾಖೆಯಲ್ಲಿ 4,855 , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,334 , ಉನ್ನತ ಶಿಕ್ಷಣ ಇಲಾಖೆಯಲ್ಲಿ13,227, ಗೃಹ ಇಲಾಖೆಯಲ್ಲಿ 20,000 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ 6,191 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರವೇ ಕಳೆದ ಅಧಿವೇಶನದಲ್ಲಿ ತಿಳಿಸಿತ್ತು.

Tags:    

Similar News