ಧರ್ಮಸ್ಥಳ ಪ್ರಕರಣ: ವೀರೇಂದ್ರ ಹೆಗ್ಗಡೆ ಭೇಟಿಯಾದ ಬಿಜೆಪಿ ಮುಖಂಡರಿಂದ ಸಮಾಲೋಚನೆ

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಬಿಜೆಪಿ ನಾಯಕರು ಭೇಟಿಯಾಗಿದ್ದು, ಸಮಾಲೋಚನೆ ನಡೆಸಿದ್ದಾರೆ. ಕ್ಷೇತ್ರದ ಬಗ್ಗೆ ʼಅಪಪ್ರಚಾರ ನಡೆಸಲಾಗುತ್ತಿದೆʼ ಎಂಬ ಬಗ್ಗೆ ಚರ್ಚಿಸಿದ್ದಾರೆ.;

Update: 2025-08-17 03:26 GMT

ಭಗವಾಧ್ವಜಗಳನ್ನು ಪ್ರದರ್ಶಿಸಿಕೊಂಡು ಬೆಂಗಳೂರಿನಿಂದ ಧರ್ಮಸ್ಥಳ ಕ್ಷೇತ್ರದವರೆಗೆ ʼಧರ್ಮಸ್ಥಳ ಚಲೋʼ ಕಾರ್‌ ರ್ಯಾಲಿ ಕೈಗೊಂಡಿರುವ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್, ಹಾಗೂ ಕಾರ್ಯಕರ್ತರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.  ವಿಜಯೇಂದ್ರ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಮತ್ತಿತರರು ಸೇರಿಕೊಂಡಿದ್ದು,  ಕ್ಷೇತ್ರದ ಅಪಪ್ರಚಾರ ಸಂಬಂಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ಮತ್ತು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ  ಅವರನ್ನು ಬಿಜೆಪಿ ನಾಯಕರು ಭೇಟಿಯಾಗಿದ್ದು, ಸಮಾಲೋಚನೆ ನಡೆಸಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ʼಅಪಪ್ರಚಾರ ನಡೆಸಲಾಗುತ್ತಿದೆʼ ಎಂಬ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಧರ್ಮಸ್ಥಳದ ಸುತ್ತುಮುತ್ತ ಅನೇಕ ಕೊಲೆಗಳನ್ನು ಮಾಡಲಾಗಿದ್ದು, ಸುತ್ತಲಿನ ಪ್ರದೇಶಗಳಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಭೀಮ ಎಂಬ ವ್ಯಕ್ತಿ ದೂರಿದ ಬಳಿಕ ಸರ್ಕಾರ ಎಸ್‌ಐಟಿ ರಚಿಸಿ  ಆತ ಹೇಳಿದ ಸ್ಥಳಗಳಲ್ಲಿ ಶೋಧನೆ ನಡೆಸುತ್ತಿದ್ದಾರೆ. ಇವೆಲ್ಲವೂ ಅಪಪ್ರಚಾರ ನಡೆಸಿ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯ ಹಾಳು ಮಾಡುವ ಚಿತಾವಣೆ ಎಂದು ಬಿಜೆಪಿ ಆರೋಪಿಸಿದೆ. ವಿಧಾನಸಭೆಯಲ್ಲೂ ಶಾಸಕ ಸುನಿಲ್‌ ಕುಮಾರ್‌ ಈ ಬಗ್ಗೆ ಪ್ರಸ್ತಾಪಿಸಿದ್ದು, ಸೋಮವಾರ ಈ ಸಂಬಂಧ ಉತ್ತರ ನೀಡುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ.

ಈ ನಡುವೆ  ಬಿಜೆಪಿ ಮುಖಂಡರು ʼಧರ್ಮಸ್ಥಳ ಉಳಿಸಿʼ ಅಭಿಯಾನ ನಡೆಸಿದ್ದು, ʼಧರ್ಮಸ್ಥಳ ಚಲೋʼ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.   ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ದಕ್ಷಿಣ ಕನ್ನಡ ಸಂಸದ ಬೃಜೇಶ್‌ ಚೌಟ ಮತ್ತಿತರ ನಾಯಕರೂ ಪಾಲ್ಗೊಂಡಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.


ಹಕ್ಕು ಚ್ಯುತಿ ಮಂಡನೆ

ಶನಿವಾರ ರಾತ್ರಿ ಧರ್ಮಸ್ಥಳಕ್ಕೆ ತಲುಪಿದ ಬಳಿಕ, ಭಾನುವಾರ ಬೆಳಿಗ್ಗೆ ನೂರಾರು ಕಾರ್ಯಕರ್ತರ ಜತೆ ತೆರಳಿದ ಬಳಿಕ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರು, "ತಾನು ಶ್ರೀ ಕ್ಷೇತ್ರದ ವಿರುದ್ಧ ನಡೆದಿರುವ ಷಡ್ಯಂತ್ರದ ವಿರುದ್ಧ ಮತ್ತು ಅಪ ಚಾರದ ವಿರುದ್ಧ ಯಾತ್ರೆ ಕೈಗೊಂಡಿದ್ದು, ಈ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದೇನೆ,"'ಎಂದರು.

"ಮುಸುಕುಧಾರಿಯ ದೂರಿನ ಆಧಾರದಲ್ಲಿ ಅಗೆತ ಆರಂಭಿಸಲಾಗಿದೆ. ನಾಳೆ ಆತ ವಸತಿ ಗೃಹ ಅಥವಾ ಇತರ ಕಟ್ಟಡ ಅಗೆಯಲು ಹೇಳಬಹುದು. ಆತನ ಮುಸುಕು ತೆಗೆದು ವಿಚಾರಣೆ ನಡೆಸಬೇಕು, ಎಂದು ಒತ್ತಾಯಿಸಿದ ಅವರು, ಸರಕಾರ SIT ರಚನೆ ಮಾಡಿರುವುದು ತಪ್ಪಲ್ಲ, ಆದರೆ ಕಾರ್ಯದ ಜೊತೆಗೆ ಶ್ರೀ ಕ್ಷೇತ್ರದ ಅಪಪ್ರಚಾರ ಮಾಡಲಾಗುತ್ತಿದೆ. ಇದು ತಪ್ಪು, ಇದರ ಕುರಿತು ತನಿಖೆಯಾಗಬೇಕು," ಎಂದು ಒತ್ತಾಯಿಸಿದರು.

"ವಿದೇಶಿಯರ ಹಣದ ಕೈವಾಡ, SDPI ಕೈವಾಡ ಕೂಡಾ ಈ ಷಡ್ಯಂತ್ರದ ಹಿಂದೆ ಇರಬಹುದು, ಹಾಗೆಯೇ ಮುಸುಕುಧಾರಿ ವ್ಯಕ್ತಿ ಒಬ್ಬ ಮತಾಂತರಗೊಂಡವನು. ಆತನಿಗೆ ಇಲ್ಲಿನ ನಂಬಿಕೆ ಬಗ್ಗೆ ಗೌರವ ಇಲ್ಲ. ಆತ ಭೀಮ ಎಂದು ಹೇಳಿಕೊಂಡಿದ್ದರೂ ಆತನ ನಿಜವಾದ ಹೆಸರು ಚೆನ್ನಯ್ಯ, ಅವನಿಗೆ ಮೂವರು ಹೆಂಡತಿಯರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ.ಅವನ ಸುಧೀರ್ಘ ವಿಚಾರಣೆ ಅಗತ್ಯವಿದೆ," ಎಂದರು.


"ಶವಗಳ ಅಗೆತ ಶುರುವಾಗಿನಿಂದ ಸಾಮಾಜಿಕ ಮಾಧ್ಯಮಗಳು ಸಿಕ್ಕಾಪಟ್ಟೆ ಅಪಪ್ರಚಾರ ಮಾಡುತ್ತಿವೆ. ಎಲ್ಲವೂ ಶ್ರೀ ಕ್ಷೇತ್ರವನ್ನು ಟಾರ್ಗೆಟ್ ಮಾಡುತ್ತಿವೆ. ಇದು ಜನರ ನಂಬಿಕೆಗೆ ಹಾನಿ ಮಾಡುತ್ತಿವೆ. ಇದರ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಅಪಪ್ರಚಾರ ತಪ್ಪಿಸಲು ಕ್ರಮ ಅಗತ್ಯ ಇದೆ, ಎಂದು ಅಭಿಪ್ರಾಯಪಟ್ಟರು.

ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುವ ಮೂಲಕ ಸರಕಾರದ ಗಮನ ಸೆಳೆಯುವುದಾಗಿ ಅವರು ಹೇಳಿದರು.

ಧರ್ಮಸ್ಥಳ ಚಲೋ

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮತ್ತು ಅವಹೇಳನಗಳನ್ನು ನಡೆಸಲಾಗುತ್ತಿದೆ ಎಂದಿರುವ ಬಿಜೆಪಿ ನಾಯಕರು, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದಲ್ಲಿ ಶನಿವಾರ 'ಧರ್ಮಸ್ಥಳ ಚಲೋ' ಹೊರಟಿದ್ದರು ಶನಿವಾರ. ಬೆಳಗ್ಗೆ 6.30ಕ್ಕೆ ಬೆಂಗಳೂರಿನ ನೆಲಮಂಗಲ ಟೋಲ್ ಬಳಿಯಿಂದ ಹೊರಟ ಈ ಯಾತ್ರೆಯಲ್ಲಿ, ಯಲಹಂಕ ಕ್ಷೇತ್ರದ ನೂರಾರು ಭಕ್ತರು ಮತ್ತು ಬಿಜೆಪಿ ಕಾರ್ಯಕರ್ತರು 400ಕ್ಕೂ ಹೆಚ್ಚು ವಾಹನಗಳಲ್ಲಿ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದ್ದರು.

ಧರ್ಮಸ್ಥಳ ಮತ್ತು ಅದರ ಪಾವಿತ್ರ್ಯತೆಯ ಕುರಿತು ಹರಡುತ್ತಿರುವ ಋಣಾತ್ಮಕ ಪ್ರಚಾರವನ್ನು ವಿರೋಧಿಸಿ ಈ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಹೇಳಿದೆ. ಪೂಜಾ ವಿಧಿವಿಧಾನಗಳೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ, ಧರ್ಮಸ್ಥಳಕ್ಕೆ ತಲುಪಿ ಶ್ರೀ ಮಂಜುನಾಥ ಸ್ವಾಮಿಯ ವಿಶೇಷ ದರ್ಶನ ಪಡೆಯುವ ಕಾರ್ಯಕ್ರಮವಿದೆ. ಈ ಸಂದರ್ಭದಲ್ಲಿ, "ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು" ಎಂಬ ಬೇಡಿಕೆಯೊಂದಿಗೆ ಸಾಮೂಹಿಕ ಸಂಕಲ್ಪ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಶಾಸಕ ಎಸ್.ಆರ್. ವಿಶ್ವನಾಥ್ ಅವರೊಂದಿಗೆ, ಹಾಲು ಪ್ರಕೋಷ್ಠದ ರಾಜ್ಯ ಸಂಚಾಲಕ ಬೇಲೂರು ರಾಘವೇಂದ್ರ ಶೆಟ್ಟಿ, ಪಕ್ಷದ ಪ್ರಮುಖರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

Tags:    

Similar News