ತುರ್ತುಪರಿಸ್ಥಿತಿ | ಬಿಜೆಪಿ ಪ್ರತಿಭಟನೆ ವಿರುದ್ಧ ಪಕ್ಷದ ಹಿರಿಯ ನಾಯಕ ಎಚ್ ವಿಶ್ವನಾಥ್ ವ್ಯಂಗ್ಯ
ತುರ್ತು ಪರಿಸ್ಥಿತಿಯಿಂದ ಬಡವರಿಗೆ ಲಾಭವಾಗಿದೆ, ತುರ್ತು ಪರಿಸ್ಥಿತಿಯನ್ನು ದೇವರಾಜ್ ಅರಸು ಚೆನ್ನಾಗಿ ಬಳಸಿಕೊಂಡರು. ಈಗ ಈ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯವರು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರು ಪತ್ರಿಕಾ ಭವನದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻತುರ್ತು ಪರಿಸ್ಥಿತಿಯಿಂದ ಬಡವರಿಗೆ ಒಳ್ಳೆಯದಾಗಿದೆ. ಕಳೆದ 50 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅಂದು ಊಟ ಮಾಡಲೂ ಕಷ್ಟ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ತುರ್ತು ಪರಿಸ್ಥಿತಿಯನ್ನು ದೇವರಾಜ್ ಅರಸು ಚೆನ್ನಾಗಿ ಬಳಸಿಕೊಂಡರು. ತುರ್ತು ಪರಿಸ್ಥಿತಿಯಿಂದ ಬಡವರಿಗೆ ಲಾಭವಾಗಿದೆ. ಈಗ ಈ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯವರು ಪ್ರತಿಭಟನೆ ಮಾಡುವುದು ಸರಿಯಲ್ಲʼʼ ಎಂದು ಅಭಿಪ್ರಾಯಪಟ್ಟರು.
ʻʻವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ಕರಾಳ ದಿನ ಆಚರಿಸಿದೆ. ಆದರೆ, ತುರ್ತು ಪರಿಸ್ಥಿತಿಯು ರಾಜ್ಯದ ಪಾಲಿಗೆ ಕರುಣಾಳು ದಿನಗಳಾಗಿದ್ದವು. ವಾಸ್ತವ ಅರಿತು ಬಿಜೆಪಿಗರು ಮಾತನಾಡಲಿ. ಹಳೇ ವಿಚಾರಗಳನ್ನೇ ಇನ್ನೆಷ್ಟು ದಿನ ಮಾತನಾಡಬೇಕು. ಪ್ರತಿಭಟನೆಯಿಂದ ಲಾಭವಿಲ್ಲ. ಆಗ ಡಿ.ದೇವರಾಜ ಅರಸು ಅವರು ಅಭಿವೃದ್ಧಿಗೆ ಬಳಸಿಕೊಂಡರು. ಅದರಿಂದ ದಲಿತರಿಗೆ, ಬಡವರಿಗಾದ ಲಾಭವನ್ನು ಯಾರೂ ವಿಶ್ಲೇಷಣೆ ಮಾಡುತ್ತಿಲ್ಲʼʼ ಎಂದು ಬೇಸರ ವ್ಯಕ್ತಪಡಿಸಿದರು.
ʻʻತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷವಾಗಿದೆ. ಬಾಲಕರಾಗಿದ್ದಾಗ ಜೈಲು ಪಾಲಾಗಿದ್ದುದಾಗಿ ಆರ್.ಅಶೋಕ ಸುಳ್ಳು ಹೇಳುತ್ತಿದ್ದಾರೆ. ಬಾಲಕರನ್ನು ಜೈಲಿಗೆ ಹಾಕಲು ಸಾಧ್ಯವೇ?ʼʼ ಎಂದು ಪ್ರಶ್ನಿಸಿದರು.
ʻʻಒಂದೇ ಮನೆಯವರೇಕೆ ಜೈಲಿನಲ್ಲಿದ್ದಾರೆ? ಪೋಕ್ರೋ ಪ್ರಕರಣದಡಿ ಸ್ವಾಮೀಜಿಯೇಕೆ ಜೈಲಿಗೆ ಹೋಗಿದ್ದಾರೆ? ಮೋದಿ ಅವರ ಕಾರಿಗೆ ಚಪ್ಪಲಿ ತೂರಿಬಂದ ಕಾರಣವೇನು? ರಾಮಮಂದಿರ ಏಕೆ ಸೋರುತ್ತಿದೆ? ಇದಕ್ಕೆಲ್ಲ ಕಾಂಗ್ರೆಸ್ ಕಾರಣವೇ? ವರ್ತಮಾನದ ಸಂಕಷ್ಟಗಳ ಬಗ್ಗೆ ಅಶೋಕ ಮಾತನಾಡಲಿʼʼ ಎಂದು ಕಿಡಿಕಾರಿದರು.
ʻʻಮುಖ್ಯಮಂತ್ರಿಗಳು ಸದನ ಕರೆಯಬೇಕು, ಏಕೆಂದರೆ ಸಾಮಾನ್ಯ ಜನರಿಗೆ ಹೊರೆಯಾಗುವಂತೆ ಅಗತ್ಯ ವಸ್ತುಗಳ ಬೆಲೆ ಏರಿಸುವುದಿಲ್ಲ ಎಂದು ಅವರು ವಚನ ಕೊಟ್ಟಿದ್ದರು. ಈಗ ದಿಢೀರ್ ಎಂದು ಹಾಲಿನ ದರ ಏರಿಸಿದ್ದಾರೆ. ಕನ್ನಡಿಗರು ದಡ್ಡರು ಎಂದುಕೊಂಡಿದ್ದೀರಾ ಸಿದ್ದರಾಮಯ್ಯನವರೇ?. ಜನರು ನಿಮಗಿಂತ ಬುದ್ಧಿವಂತರಿದ್ದಾರೆ. ವಚನ ಕೊಟ್ಟು ದರ ಏರಿಸಿದ ನೀವು ವಚನ ಭ್ರಷ್ಟರಾಗಿದ್ದೀರಿʼʼ ಎಂದು ವಾಗ್ದಾಳಿ ನಡೆಸಿದರು.
ʻʻಚುನಾವಣೆಗೆ ಮುನ್ನ ಜನರಿಗೆ ಯಾವುದೇ ಬೆಲೆ ಹೆಚ್ಚಿಸುವುದಿಲ್ಲ ಎಂದು ವಚನ ನೀಡಿದ್ದರು. ಆದರೆ ಈಗ ಮಾಡುತ್ತಿರುವುದೇನು?. ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದೀರಿ. ಮನೆಯಲ್ಲಿ ಕಾಫಿ, ಟೀ ಕುಡಿಯಲು ಜಿಎಸ್ಟಿ ಕಟ್ಟಬೇಕಾದ ಪರಿಸ್ಥಿತಿ ಇದೆʼʼ ಎಂದರು.
ನಟ ದರ್ಶನ್ ಅಭಿಮಾನಿಗಳ ಅಂಧಾಭಿಮಾನದ ಬಗ್ಗೆ ಮಾತನಾಡುತ್ತಾ, ʻʻಅಂಧಾಭಿಮಾನ ಹೆಚ್ಚು ದಿನ ಇರುವುದಿಲ್ಲ. ಭೂಮಿ, ನೀರು ಕೊಟ್ಟ ದೇವರಾಜ ಅರಸುರನ್ನೇ ಮರೆತುಬಿಟ್ಟರು ಜನ. ಇನ್ನು ಇದೆಲ್ಲಾ ಎಷ್ಟು ದಿನ ಇರುತ್ತದೆ?. ದರ್ಶನ್ ನಮ್ಮೂರಿನವನು. ಜನ ಎಲ್ಲಾ ರೀತಿಯ ಪ್ರೋತ್ಸಾಹ, ಅಭಿಮಾನ ಕೊಟ್ಟರು. ರಾಮಾಯಣವೂ ಹೆಣ್ಣಿಗಾಗಿ ನಡೆಯಿತು. ದರ್ಶನ್ ಸಹ ಹೆಣ್ಣಿಗಾಗಿಯೇ ಜೈಲಿಗೆ ಹೋಗುವಂತಾಯಿತುʼʼ ಎಂದರು.