ಎಸ್‌ಐಆರ್‌ಗೆ ಸಿದ್ಧತೆ ನಡೆಸಲು ಎಲ್ಲಾ ಸಿಇಒಗಳಿಗೆ ಚುನಾವಣಾ ಆಯೋಗ ಸೂಚನೆ
ಮತದಾರರ ಪಟ್ಟಿಯನ್ನು ಸಿದ್ಧ ಮಾಡಿಕೊಂಡು, ವಿಶೇಷ ಸಮಗ್ರ ಪರಿಷ್ಕರಣೆಗೆ ಸೆ.30ರ ಒಳಗೆ ಸಿದ್ಧರಾಗುವಂತೆ ಕೇಂದ್ರ ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ದೇಶಾದ್ಯಂತ ಎಸ್‌ಐಆರ್‌ಗೆ (ವಿಶೇಷ ತೀವ್ರ ಪರಿಷ್ಕರಣೆ) ಚಾಲನೆ ನೀಡಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ಕೊನೆಯ ಬಾರಿಗೆ ಪರಿಷ್ಕರಣೆ ಆಗಿರುವ ಮತದಾರರ ಪಟ್ಟಿಯೊಂದಿಗೆ ʼವಿಶೇಷ ತೀವ್ರ ಪರಿಷ್ಕರಣೆʼಗೆ ಸೆ.30 ರೊಳಗೆ ಸಿದ್ಧತೆ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು ಶೀಘ್ರವೇ ದೇಶವ್ಯಾಪಿ ಎಸ್‌ಐಆರ್‌ಗೆ ಚಾಲನೆ ನೀಡುವುದಾಗಿ ಹೇಳಿತ್ತು.
ಎಸ್ಐಆರ್ ಎಂದರೇನು?
ಎಸ್ಐಆರ್ ಎಂದರೆ ಸಮಗ್ರ ವಿಶೇಷ ಪರಿಷ್ಕರಣೆ. ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಂತಹ ದೇಶಗಳಿಂದ ಅಕ್ರಮವಾಗಿ ವಲಸೆ ಬಂದು, ನಕಲಿ ವಿಳಾಸ ತೋರಿಸಿ ಮತದಾರರ ಗುರುತಿನ ಚೀಟಿ ಪಡೆದಿದ್ದಾರೆ. ಅಂಥವರ ವಿಳಾಸ ಪತ್ತೆ ಹಚ್ಚಲಾಗುವುದು. ಮನೆ ಬಳಿಗೆ ಹೋಗಿ ಅವರು ನಿಜವಾಗಿಯೂ ಭಾರತೀಯರೋ ಅಥವಾ ಅಕ್ರಮ ವಲಸಿಗರೋ ಎಂದು ಪತ್ತೆಹಚ್ಚಿ ಅವರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದಲ್ಲದೆ ಅವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಶಿಫಾರಸು ಮಾಡುವುದು ಪ್ರಕ್ರಿಯೆಯ ಭಾಗವಾಗಿದೆ.
ಎಸ್‌ಐಆರ್ ಎಲ್ಲೆಲ್ಲಿ ನಡೆದಿದೆ?
ಚುನಾವಣಾ ಸುಧಾರಣೆಯ ಭಾಗವಾಗಿ ಈಗಾಗಲೇ ಬಿಹಾರದಲ್ಲಿ ಎಸ್ಐಆರ್ ನಡೆಯುತ್ತಿದೆ. ಬಿಹಾರದಲ್ಲಿ ಇದುವರೆಗೆ 65 ಲಕ್ಷ ಮಂದಿ ನಕಲಿ ಮತದಾರರನ್ನು ಪತ್ತೆ ಹಚ್ಚಲಾಗಿದೆ. ಇದರ ಮುಂದುವರಿದ ಭಾಗವಾಗಿ ಇತರೆ ರಾಜ್ಯಗಳಲ್ಲೂ ಕೂಡ ಈ ಆಂದೋಲನವು ನಡೆಯಲಿದೆ.
ನಕಲಿ ಮತದಾನಕ್ಕೆ ಕೊಕ್?
2026ರಲ್ಲಿ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಪುದುಚೇರಿ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಗಳಿಗೆ ನೂತನ ಮತದಾರರ ಪಟ್ಟಿ ಲಭ್ಯವಾಗುವ ಸಾಧ್ಯತೆ ಇದ್ದು, ನಕಲಿ ಮತದಾರರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ.
ರಾಜ್ಯದಲ್ಲಿ ಪರಿಷ್ಕರಣೆ ಯಾವಾಗ ಆಗಿತ್ತು?
ಕರ್ನಾಟಕದಲ್ಲಿ ಕೊನೆಯದಾಗಿ 2002ರಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿತ್ತು. ಆ ಬಳಿಕ ಅದೇ ಪಟ್ಟಿಯನ್ನು ಮಾದರಿಯನ್ನಾಗಿ ಇಟ್ಟುಕೊಂಡು ನಂತರದ ವಿಧಾನಸಭಾ ಚುನಾವಣೆಗಳನ್ನು ನಡೆಸಲಾಗಿತ್ತು. ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆಯಾದರೆ 23 ವರ್ಷಗಳ ಬಳಿಕ ಪರಿಷ್ಕರಣೆ ಮಾಡಿದಂತಾಗುತ್ತದೆ.
ಬಹುತೇಕ ರಾಜ್ಯಗಳು 2002-03ರಲ್ಲಿ ತಮ್ಮ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದವು. ದೆಹಲಿಯಲ್ಲಿ 2008ರಲ್ಲಿ, ಉತ್ತರಾಖಂಡದಲ್ಲಿ 2006ರಲ್ಲಿ ಹಾಗೂ ಬಿಹಾರದಲ್ಲಿ 2003ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿತ್ತು.
ಮೊದಲೇ ನಡೆದಿತ್ತು ಸಭೆ
ಈ ತಿಂಗಳ ಆರಂಭದಲ್ಲಿಯೇ ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಎಲ್ಲಾ ರಾಜ್ಯಗಳ ಚುನಾವಣಾಧಿಕಾರಿಗಳೊಂದಿಗೆ ಎಸ್ಐಆರ್ ಕುರಿತೇ ವಿಶೇಷ ಸಭೆ ನಡೆಸಿದ್ದರು. ಆ ಸಂದರ್ಭದಲ್ಲಿ ಎಸ್ಐಆರ್ ಕಾರ್ಯಕ್ರಮ ಕೈಗೊಳ್ಳುವ ಉದ್ದೇಶವೇನು, ಮಾಡುವುದು ಹೇಗೆ, ಇದರಿಂದ ಆಗುವ ಲಾಭವೇನು ಎಂಬ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.