Assembly Session Day-4 | ಸದನದಲ್ಲಿ ಧರ್ಮಸ್ಥಳ ಪ್ರಕರಣ ಪ್ರತಿಧ್ವನಿ ; ಇಡೀ ಮಂತ್ರಿಮಂಡಲ ಕ್ಷಮೆಯಾಚನೆಗೆ ಆಗ್ರಹ

ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂಬುದಕ್ಕೆ ಯಾರದ್ದೂ ಆಕ್ಷೇಪವಿಲ್ಲ.ಅದಕ್ಕಾಗಿ ಸಿಬಿಐ ತನಿಖೆ ಆಗಿದೆ, ಕೋರ್ಟ್ ತೀರ್ಪು ಬಂದಿದೆ, ಇಷ್ಟೆಲ್ಲಾ ಆದರೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಧಾರ್ಮಿಕ ನಂಬಿಕೆ ಹರಣವಾಗುತ್ತಿದೆ ಎಂದು ಸುನೀಲ್‌ ಕುಮಾರ್‌ ಆರೋಪಿಸಿದರು.;

Update: 2025-08-14 05:45 GMT

ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಧರ್ಮಸ್ಥಳ ಪ್ರಕರಣ ಪ್ರತಿಧ್ವನಿಸಿತು. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಕುರಿತು ಎಸ್‌ಐಟಿ ತನಿಖೆ ಮಾಡುತ್ತಿದೆ. ಆದರೆ, ತನಿಖೆಯ ನೆಪದಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಶಾಸಕ ಸುನೀಲ್‌ಕುಮಾರ್‌ ಆರೋಪಿಸಿದರು.

ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರಗಳ ಪೈಕಿ ಧರ್ಮಸ್ಥಳ ಪಾವಿತ್ರ್ಯತೆ ಹೊಂದಿದೆ. ಮಾತನಾಡುವ ಮಂಜುನಾಥ ಎಂತಲೇ ಪ್ರಸಿದ್ಧಯಾಗಿರುವ ಪುಣ್ಯಕ್ಷೇತ್ರವಿದು. ಎಲ್ಲರ ಮನೆಗಳಲ್ಲಿ ಇಂದಿಗೂ ಧರ್ಮಸ್ಥಳದ ಪೋಟೊ ಇದೆ. ಲಕ್ಷಾಂತರ ಕುಟುಂಬಗಳ ಆರಾಧನಾ ಕೇಂದ್ರವಾಗಿದೆ.  ಆದರೆ, ಇಂತಹ ಪುಣ್ಯಕ್ಷೇತ್ರದ ಬಗ್ಗೆ ಕೆಲ ತಿಂಗಳುಗಳಿಂದ ಅಪಪ್ರಚಾರದ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

ಇಲ್ಲಿ ಕೆಲ ವ್ಯಕ್ತಿಗಳು ನಿರಂತರವಾಗಿ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಸರ್ಕಾರ ಸಹಾನುಭೂತಿ ತೋರುತ್ತಿರುವುದು ಅನುಮಾನ ಮೂಡಿಸಿದೆ. ಸೌಜನ್ಯ ಎಂಬ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು ಎಂಬುದರಲ್ಲಿ ಯಾರ ಆಕ್ಷೇಪವೂ ಇಲ್ಲ. ಅದಕ್ಕಾಗಿ ಬೇಕಾದರೆ ಎಲ್ಲರೂ ಒಟ್ಟಾಗಿ ಹೋರಾಟೋಣ. ಆದರೆ, ಕೆಲ ಯೂಟ್ಯೂಬರ್‌ಗಳು ಅಭಿವ್ಯಕ್ತಿ ಸ್ವಾತಂತ್ರ್ಯ  ಹೆಸರಲ್ಲಿ ಧಾರ್ಮಿಕ ನಂಬಿಕೆಯನ್ನು ಹರಣ ಮಾಡುತ್ತಿದ್ದಾರೆ. ಇಲ್ಲಿ ನ್ಯಾಯ ದೊರಕಿಸಿಕೊಡುವುದಕ್ಕಿಂತ ಹೆಚ್ಚಾಗಿ ಧರ್ಮಸ್ಥಳದ ಹೆಸರು ಹಾಳು ಮಾಡುವುದೇ ಉದ್ದೇಶವಾಗಿದೆ ಎಂದು ಆರೋಪಿಸಿದರು. 

ಸಂವಿಧಾನ ಹಾಗೂ ಕಾನೂನಿನ ನೆರಳಿನಲ್ಲಿ ಕ್ಷೇತ್ರದ ಹೆಸರು ಕೆಡಿಸಲಾಗುತ್ತಿದೆ. ಗೃಹ ಸಚಿವ ಪರಮೇಶ್ವರ್‌ ಅವರ ಮತ್ತೊಂದು ಹೆಸರೇ ಮಂಜುನಾಥ, ಇಷ್ಟೊಂದು ಅಪಪ್ರಚಾರ ನಡೆಯುತ್ತಿದ್ದರೂ ಸರ್ಕಾರಕ್ಕೆ ಏನೂ ಅನಿಸುತ್ತಿಲ್ಲ ಎಂಬುದೇ ಸೋಜಿಗ. ಒಂದು ಗುಂಪು ವ್ಯವಸ್ಥಿತವಾಗಿ ಪಿತೂರಿ ಮಾಡುತ್ತಿದೆ, ಇದಕ್ಕೆ ಕಡಿವಾಣ ಹಾಕಬೇಕು ಆಗ್ರಹಿಸಿದರು.

ಪ್ರತಿ ದಿನ ಒಬ್ಬೊಬ್ಬರು ಬಂದು ಸಾಕ್ಷಿ ಕೊಡ್ತಿನಿ, ಗುಂಡಿ ತೆಗಿಬೇಕು ಅಂತಾರೆ. ಸತ್ಯ ಹೊರಗೆ ಬರಬೇಕು ಎನ್ನುವುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ, ಯಾವುದೇ ಒಬ್ಬ ವ್ಯಕ್ತಿ ಬುರುಡೆ ತಂದು ಹೇಳಿಕೆ ಕೊಟ್ಟ ಎಂದ ಮಾತ್ರಕ್ಕೆ ಆ ಬಗ್ಗೆ ತನಿಖೆ ನಡೆಸದೇ ಬೇರೆ ಬುರುಡೆಗಳ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಮಂಗಳೂರು ಎಸ್ಪಿ ಅವರು ಆರಂಭದಲ್ಲೇ ಅನಾಮಿಕನ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಮಂಪರು ಪರೀಕ್ಷೆ ಅಗತ್ಯ ಎಂದು ಹೇಳಿದ್ದರು. ಆಗಲೇ ಅವನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರೆ, ಸತ್ಯ ಬಯಲಿಗೆ ಬರುತ್ತಿತ್ತು. ಆತ ತೋರಿಸಿದ 13 ಪಾಯಿಂಟ್ ಗಳನ್ನು ನೋಡಿದರೆ ರಾಜಕುಮಾರ್‌ ಅವರ ಪತ್ತೆದಾರಿ ಸಿನಿಮಾ ನೋಡಿದಂತಾಗುತ್ತಿದೆ ಎಂದು ಹೇಳಿದರು.

ಮಧ್ಯಂತರ ವರದಿ ಬಿಡುಗಡೆಗೆ ಆಗ್ರಹ 

ರಾಜ್ಯ ಸರ್ಕಾರ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಹಾಗೂ ಕುಟುಂಬದ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ಕೆ.ಜಿ. ಹಳ್ಳಿ ಪ್ರಕರಣದಲ್ಲಿ ಫೇಸ್‌ ಬುಕ್‌ ಪೋಸ್ಟ್‌ನಿಂದ ಭಾವನೆಗೆ ಧಕ್ಕೆಯಾಗಿದೆ ಎಂದು ಭಾಷಣ ಮಾಡಿದ್ದರು. ಈಗ ಧರ್ಮಸ್ಥಳದ ಬಗ್ಗೆ ಸಾವಿರಾರು ಪೋಸ್ಟ್‌ ಹಾಕುತ್ತಿದ್ದರೂ ಸರ್ಕಾರಕ್ಕೆ ಏನೂ ಅನ್ನಿಸುತ್ತಿಲ್ಲ ಎಂದು ಸುನೀಲ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡದಲ್ಲಿ ಧರ್ಮಸ್ಥಳ ಅಸಹಜ ಸಾವುಗಳ ಬಗ್ಗೆ 50 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಪಪ್ರಚಾರದ ಪೋಸ್ಟ್‌ಗಳ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದ ಸಹಾನೂಭೂತಿ ಇದೆಯೇ ಎಂದು ಪ್ರಶ್ನಿಸಿದ ಅವರು, ಸರ್ಕಾರ ಮಾಡದೇ ಇರುವ ಕೆಲಸ ಧರ್ಮಸ್ಥಳ ಮಾಡಿದೆ. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಶೌರ್ಯ ಎಂಬ ಟೀಂ ಮಾಡಿ ಸ್ಪಂದಿಸಿದೆ. ಧರ್ಮಸ್ಥಳದ ಪರವಾಗಿ ಈಗ ಎಲ್ಲೆಡೆ ಸಮಾಜದಲ್ಲಿ ಹೋರಾಟಗಳು ಆರಂಭವಾಗಿವೆ. ರಸ್ತೆ ಬಿಟ್ಟು ಕಾಡಿನ್ಲಲೂ ಗುಂಡಿ ತೋಡಿದ್ದಾರೆ. ಬಾಹುಬಲಿ ಬೆಟ್ಟದ ಬುಡಕ್ಕೆ ಬಂದವರು ಮುಂದಿನ ದಿನಗಳಲ್ಲಿ ಸರ್ಕಾರದ ಬುಡಕ್ಕೆ ಬರಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. 

ಎಸ್‌ಡಿಪಿಐ ಏಕೆ ಪ್ರತಿಭಟನೆ?

ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್‌ಡಿಪಿಐ ಏಕೆ ಪ್ರತಿಭಟನೆ ನಡೆಸುತ್ತಿದೆ. ಅವರಿಗೂ ಇದಕ್ಕೂ ಏನು ಸಂಬಂಧ, ಇದರ ಹಿಂದೆ ಯಾರಿದ್ದಾರೆ, ಕೆಲವರು ಧರ್ಮಸ್ಥಳಕ್ಕೆ ನುಗ್ಗುತ್ತೇವೆ ಎಂದರೆ ಸರ್ಕಾರ ಮಾತನಾಡುತ್ತಿಲ್ಲ. ಅಪಪ್ರಚಾರ ಮಾಡುವವರನ್ನು ನಿಯಂತ್ರಿಸುತ್ತಿಲ್ಲ. ಇದರ ಬಗ್ಗೆ ಪೊಲೀಸ್‌ ಇಲಾಖೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದ ಮೌನವೇ ಅನುಮಾನ ಮೂಡಿಸಿದೆ ಎಂದು ಹೇಳಿದರು.

ಹಿಂದೂ ಧಾರ್ಮಿಕ ಕ್ಷೇತ್ರದ ಬಗ್ಗೆ ಸರ್ಕಾರದ ನಿಲುವೇನು?, ವಿದೇಶಿ ವಾಹಿನಿಗಳಲ್ಲೂ ಅಪಪ್ರಚಾರ ನಡೆಯುತ್ತಿದೆ. ಎಲ್ಲಾ ಸಾಕ್ಷಿದಾರರನ್ನು ವಿಚಾರಣೆ ಮಾಡಬೇಕು. ಡಿಕೆಶಿ ಧರ್ಮಸ್ಥಳದ ಪರವಾಗಿದ್ದವರು, ಈಗ ಮೌನ ವಹಿಸಿರುವುದು ಅನುಮಾನ ಮೂಡಿಸಿದೆ ಎಂದು ಸುನೀಲ್‌ಕುಮಾರ್‌ ಹೇಳಿದರು. ಆಗ ಮಧ್ಯಪ್ರವೇಶಿಸಿದ ಡಿ.ಕೆ. ಶಿವಕುಮಾರ್‌, ನಾನು ಧರ್ಮಸ್ಥಳದ ಪರವಾಗಿರುವವನು, ದೂರುಗಳು ಬಂದಾಗ ತನಿಖೆ ನಡೆಸುವುದು ಸಹಜ.ಅನ್ನ ದಾಸೋಹ ಪ್ರಾರಂಭ ಮಾಡಿದ್ದು ಧರ್ಮಸ್ಥಳ ಎಂಬುದು ನಮಗೆ ಗೊತ್ತಿದೆ, ನಮಗೂ ಕೂಡ ಇದರ ಬಗ್ಗೆ ಕುತೂಹಲ ಇದೆ. ಧರ್ಮಸ್ಥಳದ ಗೌರವ ಕಾಪಾಡುವ ಉದ್ದೇಶ ನಮಗೂ ಇದೆ, ನಮ್ಮ ಸರ್ಕಾರ ಧಾರ್ಮಿಕ ಕೆಲಸಕ್ಕೆ ಪೂರಕವಾಗಿದೆ, ಕೋರ್ಟ್ ಆದೇಶಕ್ಕೆ ತನಿಖೆ ನಡೆಯುತ್ತಿದೆ, ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ನಮಗೂ ಕಾಳಜಿ ಇದೆ, ಮೈ ಸ್ಟ್ಯಾಂಡ್ ಇಸ್ ಧರ್ಮಸ್ಥಳ, ಮೈ ಸ್ಟ್ಯಾಂಡ್ ಇಸ್ ವಿತ್ ಮಂಜುನಾಥ ಎಂದು ಹೇಳಿದರು.

ಸುಮೊಟೊ ಪ್ರಕರಣ ದಾಖಲಿಸಿಲ್ಲ ಏಕೆ?

ಮಂಗಳೂರು ಗಲಭೆ ಸಂದರ್ಭದಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದರು. ಆದರೆ, ಧರ್ಮಸ್ಥಳದ ಬಗ್ಗೆ ಯಾಕೆ ಎಫ್ ಐ ಆರ್ ದಾಖಲಿಸಿಲ್ಲ.  ಅಪಪ್ರಚಾರ ನಡೆಸಿದರೂ ಯಾಕೆ ಪ್ರಕರಣ ಇಲ್ಲ, ಸರ್ಕಾರದ ಬಗ್ಗೆ ಏನು ತಿಳಿದುಕೊಳ್ಳಬೇಕು, ಇದಕ್ಕೆ ಸರ್ಕಾರದ ಬೆಂಬಲ ಇದೆಯಾ ಎಂದು ಸುನಿಲ್‌ಕುಮಾರ್‌ ಪ್ರಶ್ನಿಸಿದರು.

ಸಿಎಂ ಪರ ಬ್ಯಾಟಿಂಗ್‌  

ಕಲಾಪ ಆರಂಭದ ಬೆನ್ನಲ್ಲೇ ಆಡಳಿತ ಪಕ್ಷದ ಹಿರಿಯ ಸದಸ್ಯರು ʼಪೂರ್ಣಾವಧಿ ಸಿಎಂʼ ವಿಚಾರ ಪ್ರಸ್ತಾಪಿಸಿ ಸಿದ್ದರಾಮಯ್ಯ ಪರ ಬ್ಯಾಟ್‌ ಬೀಸಿದ್ದಾರೆ. 

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಅಪ್ರಸ್ತುತ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ 5 ವರ್ಷ ಪೂರ್ಣಗೊಳಿಸಲಿದ್ದಾರೆ ಎಂದು ಹಿರಿಯ ಶಾಸಕ ಆರ್. ವಿ. ದೇಶಪಾಂಡೆ ಹೇಳಿರುವುದು ರಾಜ್ಯ ರಾಜ್ಯಕಾರಣದಲ್ಲಿ ಮಹತ್ವ ಪಡೆದುಕೊಂಡಿದೆ. 

ಗುರುವಾರ ಪ್ರಶ್ನೋತ್ತರ ಕಲಾಪಕ್ಕೆ ಮುನ್ನ ಹಿರಿಯ ಕಾಂಗ್ರೆಸ್‌ ನಾಯಕ ಆರ್.ವಿ.ದೇಶಪಾಂಡೆ ಅವರು ತಮ್ಮ ರಾಜಕೀಯ ಅನುಭವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ ಬೆಂಬಲವನ್ನು ಸದನದಲ್ಲಿ ಪ್ರಸ್ತಾಪಿಸಿ ಮಾತನಾಡಿದರು.

ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಯಾರು ಎಷ್ಟು ಬಾರಿ ಗೆದ್ದಿದ್ದಾರೆ” ಎಂದು ಹೇಳುವಾಗ ತಮ್ಮ ಹೆಸರನ್ನು ಉಲ್ಲೇಖಿಸಲಿಲ್ಲ. ಅವರು ಉದ್ದೇಶಪೂರ್ವಕವಾಗಿ ಮರೆತಿಲ್ಲ, ಆದರೆ, ನಾನು ಕೂಡ ಈ ಸದನದ ಹಿರಿಯ ಸದಸ್ಯ. 9 ಬಾರಿ ಈ ಸದನಕ್ಕೆ ಗೆದ್ದು ಬಂದಿದ್ದೇನೆ. ಜಾತಿ ಬಲ ಇಲ್ಲದಿದ್ದರೂ ಜನರ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ"  ಎಂದು ಹೇಳಿದರು.

“ರಾಜಕೀಯ ಜೀವನದಲ್ಲಿ ಅಧಿಕಾರ ಎಂಬುದು ಕ್ಷಣಿಕ, ದೇವರ ಆಶೀರ್ವಾದ ಇದ್ದರೆ ಮನೆಯವರೆಗೂ ಅಧಿಕಾರ ಹುಡುಕಿಕೊಂಡು ಬರುತ್ತದೆ. ನಾನು ಎಂಟು ಮಂದಿ ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ರಾಮಕೃಷ್ಣ ಹೆಗಡೆ ಅವರಿಂದ ಹಿಡಿದು ಸಿದ್ದರಾಮಯ್ಯವರೆಗೆ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರು ಒಂದು ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈಗ ಮತ್ತೆ ಐದು ವರ್ಷಗಳನ್ನು ಪೂರ್ಣಗೊಳಿಸಲಿದ್ದಾರೆ" ಎಂದು ಸ್ಪಷ್ಟಪಡಿಸಿದರು.

ಆಗ ಬಿಜೆಪಿ ಸದಸ್ಯರು “ಮತ್ತೊಮ್ಮೆ ಹೇಳಿ” ಎಂದು ಆಗ್ರಹಿಸಿದಾಗ ದೇಶಪಾಂಡೆ ಅವರು “ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ" ಎಂದು ಪುನರುಚ್ಚರಿಸಿದರು.

ಸಿಎಂ ಸ್ಥಾನ ಬದಲಾವಣೆ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೀಡಾಗಿತ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎದುರು ಹಲವು ಶಾಸಕರು ಸಿಎಂ ಸಿದ್ದರಾಮಯ್ಯ ಪರವಾದ ಅಭಿಪ್ರಾಯ ಮಂಡಿಸಿದ್ದರು. ಡಿಕೆಶಿ ಸಿಎಂ ಆಗಲಿ ಎಂದು ಬಹಿರಂಗ ಹೇಳಿಕೆ ನೀಡಿದ್ದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಗೆ ಡಿ.ಕೆ.ಶಿವಕುಮಾರ್ ನೋಟಿಸ್ ನೀಡಿದ್ದರು. ಈ ಬಗ್ಗೆ ಮಾತನಾಡದಂತೆ ತಾಕೀತು ಮಾಡಿದ್ದರು. ಮತ್ತೊಂದೆಡೆ ಸಿದ್ದರಾಮಯ್ಯ ಪರವಾಗಿ ಬಸವರಾಜ ರಾಯರೆಡ್ಡಿ ಅವರು ಬ್ಯಾಟಿಂಗ್ ಮಾಡಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಂತರ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿದ ನಂತರ ನಾನೇ ಪೂರ್ಣಾವಧಿ ಸಿಎಂ ಎಂದು ಹೇಳಿದ್ದರು. ಆ ಮೂಲಕ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳಿಗೆ ಪೂರ್ಣ ವಿರಾಮ ಹಾಕಿದ್ದರು.

Live Updates
2025-08-14 08:17 GMT

ಅನಾಮಿಕ ದೂರುದಾರನಿಗೆ ವಿದೇಶದಿಂದ ಹಣ ಪೂರೈಕೆಯಾಗಿದೆ. ಆತನ ಹಿಂದಿರುವವರು ಯಾರು ಎಂದು ತಿಳಿಯಬೇಕು. ಧರ್ಮಸ್ಥಳದ ಬಗ್ಗೆ ಕೆಲವರು ಬೇಕಂತಲೇ ಅಪ ಪ್ರಚಾರ ಮಾಡುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ಅಥವಾ ಎನ್‌ಐಎಗೆ ವಹಿಸಬೇಕು ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ವಿಧಾನಸಭೆಯಲ್ಲಿ ತಿಳಿಸದರು.

 

 

2025-08-14 07:42 GMT

ಹಿಂದೂ ಧಾರ್ಮಿಕ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ಕೆಲವರು ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದೆ. ಮಸುಕುದಾರಿಗೆ ಮೊದಲು ಮಂಪರು ಪರೀಕ್ಷೆ ನಡೆಸಬೇಕು ಎಂದು ಶಾಸಕ ಸುನೀಲ್‌ ಕುಮಾರ್‌ ಆಗ್ರಹಿಸಿದರು.

 

  

2025-08-14 07:10 GMT

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಗೆ ತೊಂದರೆಯಾಗಂತೆ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳ ನಾಯಕರಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಮನವಿ ಮಾಡಿದರು. 

 

2025-08-14 06:49 GMT

ರಾಜ್ಯದಲ್ಲಿ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ ನೇಮಿಸಿದ್ದ ಸಮಿತಿಯ ವರದಿಯಲ್ಲಿ ಚಾಲಕರು ಹೃದಯಾಘಾತಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದೆ. ಆದ್ದರಿಂದ ಆಟೋ ಹಾಗೂ ಕಾರು ಚಾಲಕರಿಗೆ ಸರ್ಕಾರದಿಂದಲೇ ಹೃದಯ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

 

2025-08-14 06:37 GMT

ಪಾಂಡವಪುರ ತಾಲೂಕಿನ ಆಸ್ಪತ್ರೆಯನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ. 

 

2025-08-14 06:08 GMT

ದರ್ಶನ್‌ಗೆ ನೀಡಿದ್ದ ಜಾಮೀನು ರದ್ದುಗೊಳಿಸಿ ಸುಪ್ರೀಂಕೋರ್ಟ್‌ ಆದೇಶ ನೀಡಿದ ಬೆನ್ನಲ್ಲೇ ವಿಧಾನಪರಿಷತ್ ನಿಂದ ವಿಧಾನಸಭೆಗೆ ಬಂದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಕಾನೂನು ಸುವ್ಯವಸ್ಥೆ ವಿಭಾಗದ ಮುಖ್ಯಸ್ಥ ಹಿತೇಂದ್ರ ಅವರೊಂದಿಗೆ ವಿಧಾನಸಭೆ ಮೊಗಸಾಲೆ ತಮ್ಮ ಕೊಠಡಿಯಲ್ಲಿ ಚರ್ಚೆ ನಡೆಸಿದರು. 

ದರ್ಶನ್‌ ಜಾಮೀನು ರದ್ದಾದ ಕುರಿತಂತೆ ವಿಧಾನಸಭೆ ಮೊಗಸಾಲೆಯ ಸಚಿವರ ಕೊಠಡಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು. 

Tags:    

Similar News