ದರ್ಶನ್ ಜಾಮೀನು ರದ್ದು | ಮೈಸೂರಿನ ತೋಟದ ಮನೆಯಲ್ಲಿ ವಾಸ್ತವ್ಯ; ದರ್ಶನ್ ಮುಂದಿರುವ ಆಯ್ಕೆಗಳೇನು?
ದರ್ಶನ್ ಮೈಸೂರಿನ ತಮ್ಮ ತೋಟದ ಮನೆಯಲ್ಲಿ ಇರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಪೊಲೀಸರನ್ನು ಕಳುಹಿಸಲಾಗಿದೆ.;
ನಟ ದರ್ಶನ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ ಏಳು ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂಕೋರ್ಟ್, ತಕ್ಷಣವೇ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ ಆದೇಶದ ನಂತರ ದರ್ಶನ್ ಬಂಧನ ಪ್ರಕ್ರಿಯೆ ಅನಿವಾರ್ಯವಾಗಿದೆ. ಆದರೆ, ದರ್ಶನ್ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ ಎನ್ನುತ್ತಾರೆ ಕಾನೂನು ತಜ್ಞರು. ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಕೆಳ ನ್ಯಾಯಾಲಯದಲ್ಲಿ ಚೇಂಜೆಡ್ ಸರ್ಕಮ್ಟೆನ್ಸ್ ಅರ್ಜಿ ಸಲ್ಲಿಸಬಹುದು. ಲಭ್ಯವಾದ ಸಾಕ್ಷಿಗಳು, ಪೊಲೀಸರು ಹಾಗೂ ಎಫ್‌ಎಸ್‌ಎಲ್ ವರದಿಯಲ್ಲಿ ಯಾವುದಾದರೂ ಲೋಪಗಳಿದ್ದರೆ ಅವುಗಳನ್ನು ಗುರುತಿಸಿ ಮತ್ತೊಮ್ಮೆ ಜಾಮೀನು ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಕೆಳ ನ್ಯಾಯಾಲಯವು ಜಾಮೀನು ರದ್ದುಪಡಿಸಿದರೆ ಯಥಾ ಪ್ರಕಾರ ಮತ್ತೆ ಹೈಕೋರ್ಟ್, ಸುಪ್ರೀಂಕೋರ್ಟ್ ಮೊರೆ ಹೋಗಬಹುದಾಗಿದೆ ಎಂದು ಹೈಕೋರ್ಟ್ ವಕೀಲ ಸ್ವಾಮಿನಿ ಗಣೇಶ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ದರ್ಶನ್ ಜಾಮೀನು ರದ್ದು ಮಾಡುವ ಜತೆಗೆ ಸುಪ್ರೀಂಕೋರ್ಟ್ ಕೆಲ ಅಂಶಗಳ ಬಗ್ಗೆ ಕಠಿಣವಾಗಿ ಹೇಳಿರುವುದರಿಂದ ರಾಜ್ಯದ ನ್ಯಾಯಾಲಯದಲ್ಲಿ ಜಾಮೀನು ಸಿಗುವುದು ಕಷ್ಟಕರ. ವಿಚಾರಣೆ ಮುಗಿಯುವವರೆಗೆ ಜೈಲಿನಲ್ಲಿಯೇ ಇರಬೇಕಾಗುತ್ತದೆ. ನ್ಯಾಯಾಲಯವು ಸಾಕ್ಷಿಗಳ ಜತೆಗೆ ಘಟನಾ ಸ್ಥಳಗಳಲ್ಲಿನ ಸಂದರ್ಭಗಳನ್ನು ಸಹ ಗಮನಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಮನೆಯಲ್ಲಿ ಸಿಗದ ದರ್ಶನ್
ನಟ ದರ್ಶನ್ ಜಾಮೀನು ಅರ್ಜಿ ರದ್ದಾಗುತ್ತಿದ್ದಂತೆ ಪೊಲೀಸರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ನಿವಾಸಕ್ಕೆ ಭೇಟಿ ನೀಡಿದರು. ಆದರೆ, ದರ್ಶನ್ ಮನೆಯಲ್ಲಿ ಇರಲಿಲ್ಲ. ಬರಿಗೈಲಿ ವಾಪಸಾದರು. ದರ್ಶನ್ ಮೈಸೂರಿನ ತಮ್ಮ ತೋಟದ ಮನೆಯಲ್ಲಿ ಇರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಪೊಲೀಸರನ್ನು ಕಳುಹಿಸಲಾಗಿದೆ.
ಮೈಸೂರಿನ ತಿ.ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಸಮೀಪದ ತೋಟದ ಮನೆಯಲ್ಲಿ ದರ್ಶನ್ ಕಾಲ ಕಳೆಯುತ್ತಿದ್ದು, ಅವರನ್ನು ಬಂಧಿಸಿ ಕರೆತರಲು ಮೈಸೂರು ಪೊಲೀಸರು ತೆರಳಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಮನೆಯಿಂದ ಹೊರ ಹೋದ ಪವಿತ್ರಾ ಗೌಡ
ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡುತ್ತಿದ್ದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪವಿತ್ರಾ ಗೌಡ ಮನೆಯಿಂದ ಹೊರ ಹೋಗಿದ್ದಾರೆ. ಆದರೆ, ಎಲ್ಲಿಗೆ ಹೋದರು ಎಂಬ ಮಾಹಿತಿ ಇಲ್ಲ ಎಂದು ಮೂಲಗಳು ತಿಳಿಸಿವೆ.
ಪವಿತ್ರಾಗೌಡ ಕೂಡ ರಾಜರಾಜೇಶ್ವರಿ ನಗರದಲ್ಲಿ ವಾಸವಿದ್ದು, ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ರದ್ದಾದ ವಿಷಯ ತಿಳಿದ ಕೂಡಲೇ ಕಾರಿ ಹತ್ತಿಕೊಂಡು ಹೋಗಿದ್ದನ್ನು ಸ್ಥಳೀಯರು ನೋಡಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲಾ ಆರೋಪಿಗಳನ್ನು ಇಂದೇ ಬಂಧಿಸುವಂತೆ ಸುಪ್ರೀಂಕೋರ್ಟ್ ಖಡಕ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲರನ್ನೂ ಬಂಧಿಸುವುದು ಅನಿವಾರ್ಯವಾಗಿದೆ.
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪವಿತ್ರಾಗೌಡ, ಸತ್ಯಕ್ಕೆ ಜಯ ಸಿಗುವ ನಂಬಿಕೆ ನನಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ, ತಮಗೂ ಸಂಬಂಧವಿಲ್ಲ. ಸತ್ಯ ಎಲ್ಲಕ್ಕಿಂತ ಶಕ್ತಿಯುತವಾದುದ್ದು. ನ್ಯಾಯ ಸಿಕ್ಕೇ ಸಿಗುತ್ತದೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಇನ್ನು ಪವಿತ್ರಾ ಗೌಡ ಜಾಮೀನು ರದ್ದಾಗುತ್ತಿದ್ದಂತೆ ಮತ್ತೆ ಜೈಲಿಗೆ ಹೋಗುವುದು ಖಚಿತವಾಗಿದೆ. ಪೋಷಕರು ಕಣ್ಣೀರು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.