ತೇಜಸ್ವಿ ಅಲ್ಲ ಅಮಾವಾಸ್ಯೆ ಸೂರ್ಯ, ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ದೆಹಲಿಯಲ್ಲಿದ್ದರೂ, ರಾಜ್ಯಕ್ಕೆ ಆಗುತ್ತಿರುವ ಮೋಸ, ದ್ರೋಹದ ಬಗ್ಗೆ ಒಂದೇ ಒಂದು ದಿನವಾದರೂ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತದ ರಾಜ್ಯದ ಬಿಜೆಪಿ ಸಂಸದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಒಬ್ಬ 'ಅಮಾವಾಸ್ಯೆ ಸೂರ್ಯ', ಅವರಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ತೀಕ್ಷ್ಣವಾಗಿ ಲೇವಡಿ ಮಾಡಿದ್ದಾರೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯದ ಬಹುತೇಕ ಬಿಜೆಪಿ ಸಂಸದರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.
ರಾಜ್ಯದ ಸಂಸದರ ಮೌನಕ್ಕೆ ಸಿಎಂ ಕಿಡಿ
ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಬಿಜೆಪಿ ಸಂಸದರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಸಿಎಂ, "ನಿಮ್ಮ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಅವರು ಸಂಸತ್ತಿನಲ್ಲಿ ಎಂದಾದರೂ ನಿಮ್ಮ ಪರವಾಗಿ ಮಾತನಾಡಿದ್ದಾರಾ? ನಾನು ತೇಜಸ್ವಿ ಸೂರ್ಯ ಅವರನ್ನು 'ಅಮಾವಾಸ್ಯೆ ಸೂರ್ಯ' ಎಂದು ಕರೆಯುತ್ತೇನೆ, ಏಕೆಂದರೆ ಅವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಇವತ್ತಿನವರೆಗೂ ಬಾಯಿ ಬಿಟ್ಟಿಲ್ಲ. ಅಮಾವಾಸ್ಯೆಯ ಸೂರ್ಯನಿಂದ ಬೆಳಕನ್ನು ನಿರೀಕ್ಷಿಸಲು ಸಾಧ್ಯವೇ?" ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವರ ವಿರುದ್ಧವೂ ಹರಿಹಾಯ್ದ ಸಿಎಂ
ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಅವರು, "ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ದೆಹಲಿಯಲ್ಲಿದ್ದರೂ, ರಾಜ್ಯಕ್ಕೆ ಆಗುತ್ತಿರುವ ಮೋಸ, ದ್ರೋಹದ ಬಗ್ಗೆ ಒಂದೇ ಒಂದು ದಿನವಾದರೂ ಮಾತನಾಡಿದ್ದಾರಾ? ಬರ ಪರಿಹಾರ, ಜಿಎಸ್‌ಟಿ ಪಾಲು, ಮತ್ತು ಇತರ ಯೋಜನೆಗಳ ಅನುದಾನವನ್ನು ಕೇಳಿದ್ದಾರಾ? ಇಂಥವರನ್ನು ಗೆಲ್ಲಿಸಿ ನಿಮಗಾಗಲೀ, ರಾಜ್ಯಕ್ಕಾಗಲೀ ಏನು ಪ್ರಯೋಜನವಾಗಿದೆ?" ಎಂದು ಜನರನ್ನು ಪ್ರಶ್ನಿಸಿದರು.