ಗೋಪೂಜೆ ನೆಪ; ಜನಜಾಗೃತಿಗೆ ಕರೆ; ಕಾಂಗ್ರೆಸ್ ಸರ್ಕಾರದಿಂದ 'ಹಿಂದುತ್ವ' ಜಪ
ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಯಂತ್ರಿಸಲು ನಿಯಮ ರೂಪಿಸುವ ಮೂಲಕ ಹಿಂದೂಪರ ಸಂಘಟನೆಗಳ ಸಿಟ್ಟಿಗೆ ಕಾರಣವಾಗಿದ್ದ ಸಿದ್ದರಾಮಯ್ಯ ಸರ್ಕಾರ, ಈಗ ಗೋಪೂಜೆಗೆ ಮುಂದಾಗಿದ್ದು, "ಹಿಂದೂದರ್ಮ ಪಾಲನೆ"ಗೆ ಮುಂದಾಗಿದೆ!
ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಯಂತ್ರಿಸಲು ಪರೋಕ್ಷವಾಗಿ ನಿಯಮ ರೂಪಿಸುವ ಮೂಲಕ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಸಿಟ್ಟಿಗೆ ಕಾರಣವಾಗಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಈಗ ಗೋಪೂಜೆಗೆ ಮುಂದಾಗುವ ಮೂಲಕ 'ಹಿಂದೂದರ್ಮ ಪಾಲನೆ'ಗೆ ಮುಂದಾಗಿದೆ.
ದೀಪಾವಳಿ ಬಲಿಪಾಡ್ಯಮಿ ದಿನದಂದು ಧಾರ್ಮಿಕ ದತ್ತಿ ಇಲಾಖೆಯ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಗೋಪೂಜೆ ಆಚರಣೆಗೆ ಸಂಬಂಧಿಸಿ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.
"ಹಿಂದೂ ಧರ್ಮದಲ್ಲಿ ಗೋವಿಗೆ ಗೋಮಾತೆ ಎಂಬ ಹೆಸರಿನಿಂದ, ವಿಶೇಷ ಸ್ಥಾನಮಾನವನ್ನು ನೀಡಿ ಪೂಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸಬೇಕಾಗಿರುವುದರಿಂದ ಬಲಿಪಾಡ್ಯಮಿ ದಿನದಂದು ಗೋಪೂಜೆ ನಡೆಸಬೇಕು,"ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
"ದೀಪಾವಳಿ ಬಲಿ ಪಾಡ್ಯಮಿ ದಿನದಂದು ಗೋವುಗಳಿಗೆ ಸ್ನಾನ ಮಾಡಿಸಿ ಅರಶಿನ ಕುಂಕುಮ ಹೂವುಗಳಿಂದ ಅಲಂಕರಿಸಿ ಅಕ್ಕಿ, ಬೆಲ್ಲ, ಹಣ್ಣು ಮುಂತಾದ ಗೋಗ್ರಾಸವನ್ನು ನೀಡಿ ಸಂಜೆ ಗೋಪೂಜೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ," ಎಂದು ಸುತ್ತೋಲೆ ಸೂಚಿಸಿದೆ.
ಸುತ್ತೋಲೆಯನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ, ಸಂಬಂಧಿಸಿದ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಆಡಳಿತಾಧಿಕಾರಿಗಳು ಮತ್ತು ಅನುವಂಶಿಕ ಮೊಕ್ತೇಸರರಿಗೆ ಸುತ್ತೋಲೆಯನ್ನು ಕಳುಹಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆ ಮೇರೆಗೆ ಇಲಾಖೆ ಆಯುಕ್ತರು ಈ ಸೂಚನೆ ಹೊರಡಿಸಿದ್ದಾರೆ.
ಈ ಕುರಿತು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರು ಮಂಗಳವಾರ (ಅಕ್ಟೋಬರ್ 21) ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ಸಾರಿಗೆ ಮತ್ತು ಮುಜರಾಯಿ ಸಚಿವರ ಮೌಖಿಕ ನಿರ್ದೇಶನದಂತೆ, ಇಲಾಖೆಯ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಸೂಚನೆ ನೀಡಲಾಗಿದೆ.
ಆರ್‌ಎಸ್‌ಎಸ್ ನಿಯಂತ್ರಣ ಕ್ರಮ ಬಳಿಕ ಒಮ್ಮೆಲೆ ಹಿಂದುತ್ವದ ಜಪ
ಸರ್ಕಾರಿ ಶಾಲೆಗಳು, ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳು, ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಶಾಖೆಗಳನ್ನು, ಕವಾಯತುಗಳನ್ನು ನಿಗ್ರಹಿಸಬೇಕೆಂದು ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದ ಬಳಿಕ ಸಚಿವ ಸಂಪುಟ ಸಭೆ ನಿರ್ಣಯವೊಂದನ್ನು ಕೈಗೊಂಡಿತ್ತು.
ಈ ಹಿಂದೆ ಬಿಜೆಪಿ ಸರ್ಕಾರ ಹೊರಡಿಸಿದ್ದ ನಿಯಮಗಳನ್ನೇ ಮರು ಆದೇಶದ ಮೂಲಕ ಜಾರಿಗೊಳಿಸಿ "ಯಾವುದೇ ಸಂಘಟನೆಗಳು ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಅನುಮತಿ ಪಡೆಯಬೇಕು," ಎಂದು ಸೂಚನೆ ಹೊರಡಿಸಲಾಗಿತ್ತು. ಆ ಮೂಲಕ ಪರೋಕ್ಷವಾಗಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಂಡಿತ್ತು.
ಈ ಬಗ್ಗೆ "ಹಿಂದೂಗಳ ವಿರೋಧಿ ಸರ್ಕಾರ," ಎಂದು ಟೀಕಿಸಿತ್ತು ಮತ್ತು ಆರ್‌ಎಸ್‌ಎಸ್ ನಿಯಂತ್ರಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಿಲ್ಲ ಎಂದು ವಾಗ್ದಾಳಿಯನ್ನೂ ಬಿಜೆಪಿ ನಡೆಸಿತ್ತು.
ಸುತ್ತೋಲೆ ಸೂಚಿಸಿರುವ ಅಂಶಗಳು
ಈಗ ಒಮ್ಮೆಲೆ "ಹಿಂದೂ ಧರ್ಮ ಪಾಲನೆಗೆ" ಮುಂದಾಗಿರುವ ಸರ್ಕಾರ, ದೀಪಾವಳಿ ಸಂದರ್ಭದಲ್ಲಿ "ಹಿಂದೂಧರ್ಮದಲ್ಲಿ ಗೋವಿಗೆ ಗೋಮಾತೆ ಎಂಬ ವಿಶೇಷ ಸ್ಥಾನಮಾನ ನೀಡಿ ಪೂಜಿಸಲಾಗುತ್ತಿದೆ," ಎಂದು ಸರ್ಕಾರ ಹೇಳಿರುವುದು ಹೊಸ ಬೆಳವಣಿಗೆಯಾಗಿದೆ. ಜತೆಗೆ, "ಗೋವುಗಳಿಗೆ ಸ್ನಾನ ಮಾಡಿಸಿ ಅರಶಿನ ಕುಂಕುಮ ಹೂವುಗಳಿಮದ ಅಲಂಕರಿಸಿ" ಗೋಗ್ರಾಸವನ್ನು ನೀಡಬೇಕೆಂದು ಸರ್ಕಾರ ತಿಳಿಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.
ಆರ್‌ಎಸ್‌ಎಸ್ ನಿಯಂತ್ರಿಸಲು ಮುಂದಾಗಿರುವ ಸಿದ್ದರಾಮಯ್ಯ ಸರ್ಕಾರ ಒಮ್ಮೆಲೆ "ಹಿಂದೂ ಧರ್ಮ ಪಾಲನೆ"ಗೆ ಮುಂದಾಗಿರುವುದು ಮತ್ತು ಗೋವುಗಳ ಸಂರಕ್ಷಣೆಗೆ "ಜನಜಾಗೃತಿ"ಗೆ ಮುಂದಾಗಿರುವುದು ಕಾಂಗ್ರೆಸ್ ಮತ್ತೆ ಮೃದು ಹಿಂದುತ್ವ ಧೋರಣೆಗೆ ಮುಂದಾಗಿದೆಯೇ ಎಂಬ ಅನುಮಾನವನ್ನು ಮೂಡಿಸುತ್ತಿದೆ.