ಹಾಸನಾಂಬೆ: ಲಾಡು ಪ್ರಸಾದದಿಂದ 20 ಕೋಟಿ ರೂ. ಆದಾಯ, ಇಂದು ಕೊನೆಯ ದಿನದ ದರ್ಶನ

ಬುಧವಾರ ಬೆಳಿಗ್ಗೆ 5ಗಂಟೆಯಿಂದ ಸಂಜೆ 7 ಗಂಟೆಯವರೆಗೂ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದರ್ಶನಕ್ಕೆ ಆಗಮಿಸುವ ಭಕ್ತರು ಸಂಜೆ 5ಗಂಟೆಯೊಳಗೆ ಬರಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

Update: 2025-10-22 07:26 GMT

ಹಾಸನಾಂಬ ದರ್ಶನಕ್ಕೆ ನಿಂತಿರುವ ಭಕ್ತಾದಿಗಳು

Click the Play button to listen to article

ರಾಜ್ಯದ ಪ್ರಸಿದ್ದ ಧಾರ್ಮಿಕ ಸ್ಥಳ ಹಾಸನಾಂಬ ದರ್ಶನಕ್ಕೆ ಬುಧವಾರ (ಅ.22) ಕೊನೆ ದಿನವಾಗಿರುವುದರಿಂದ ಸಹಸ್ರಾರು ಭಕ್ತರು ಆಗಮಿಸಿದ್ದು, ಧರ್ಮದರ್ಶನದ ಸಾಲು ಕಿ.ಮೀ.ಗಟ್ಟಲೇ ಮುಟ್ಟಿದೆ. ಇದರಿಂದ ಭಕ್ತರನ್ನು ನಿಯಂತ್ರಿಸಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. 

ಶಾಸ್ತ್ರೋಕ್ತವಾಗಿ ಗುರುವಾರ (ಅ.23) ದೇವಾಲಯದ ಬಾಗಿಲು ಹಾಕುವುದರಿಂದ ಇಂದು ಮಧ್ಯಾಹ್ನ ನೈವೇದ್ಯ ಪೂಜೆ ಇರುವುದಿಲ್ಲ. ಬುಧವಾರ ಬೆಳಿಗ್ಗೆ 5ಗಂಟೆಯಿಂದ ಸಂಜೆ 7 ಗಂಟೆಯವರೆಗೂ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ದರ್ಶನಕ್ಕೆ ಆಗಮಿಸುವ ಭಕ್ತರು ಸಂಜೆ 5ಗಂಟೆ ಒಳಗೆ ಬರಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

23 ಲಕ್ಷ ಭಕ್ತಾದಿಗಳಿಂದ ದರ್ಶನ

ಅ.9ರಿಂದ ಆರಂಭವಾದ ಹಾಸನಾಂಬೆ ದರ್ಶನ ಇಂದು(ಅ.22) ಕೊನೆಗೊಳ್ಳಲಿದೆ. ಇಲ್ಲಿಯವರೆಗೂ 23 ಲಕ್ಷ ಭಕ್ತಾದಿಗಳು ದೇವರ ದರ್ಶನ ಪಡೆದಿದ್ದಾರೆ. ಧರ್ಮದರ್ಶನ, ವಿಶೇಷ ಗಣ್ಯರು ಸೇರಿದಂತೆ ಹಲವಾರು ಜನರು ಇಲ್ಲಿಯವರೆಗೂ ದರ್ಶನ ಪಡೆದಿದ್ದಾರೆ.

ಪ್ರಸಾದದಿಂದ 20 ಕೋಟಿ ರೂ. ಆದಾಯ

ಹಾಸನಾಂಬೆ ದರ್ಶನಕ್ಕೆ ಆಗಮಿಸಿರುವ ಭಕ್ತಾದಿಗಳಿಗೆ ವಿತರಿಸಲು ನಿಗದಿಪಡಿಸಲಾಗಿದ್ದ 1,000 ರೂ. ಹಾಗೂ 3,00 ರೂ. ಲಾಡು ಪ್ರಸಾದದಿಂದ ಇಲ್ಲಿಯವರೆಗೂ 20 ಕೋಟಿ ರೂ. ಆದಯ ಬಂದಿದೆ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಮಾಹಿತಿ ನೀಡಿದ್ದಾರೆ. 

ಶಿಷ್ಟಾಚಾರ ಬಂದ್‌

ಹಾಸನಾಂಬೆ ದರ್ಶನಕ್ಕೆ ಇಂದು ಕೊನೆಯ ದಿನವಾಗಿರುವುದರಿಂದ ಸಹಸ್ರಾರು ಭಕ್ತರು ಆಗಮಿಸುತ್ತಿದ್ದು, ವಿಶೇಷ ಗಣ್ಯರಿಗೆ ನೀಡಲಾಗುವ ಶಿಷ್ಟಾಚಾರವನ್ನು ಬಂದ್‌ ಮಾಡಲಾಗಿದೆ. ಆದರೂ ಸ್ವಾಮೀಜಿಗಳು ಹಾಗೂ ರಾಜಕೀಯ ಮುಖಂಡರು ಆಗಮಿಸುತ್ತಿದ್ದು, ಅವರಿಗೆ ಪಾಸ್‌ ಹಾಗೂ 1,000 ರೂ. ಟಿಕೆಟ್‌ ಮೂಲಕ ವಿಶೇಷ ದರ್ಶನಕ್ಕೆ ಅವಕಾಶ  ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಗಣ್ಯರಿಂದ ದರ್ಶನ

ದೇವರ ದರ್ಶನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಮಾಜಿ ಸಚಿವ ಹೆಚ್‌.ಡಿ. ರೇವಣ್ಣ , ಕೆ.ಎನ್‌. ರಾಜಣ್ಣ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ನಟ ಶಿವರಾಜ್‌ಕುಮಾರ್‌, ನಟಿಯರಾದ ಶೃತಿ, ಜಯಮಾಲಾ, ತಾರಾ ಅನುರಾಧ ಸೇರಿದಂತೆ ಹಲವು ಗಣ್ಯರು ಆಗಮಿಸಿ ದರ್ಶನ ಪಡೆದಿದ್ದಾರೆ.

Tags:    

Similar News