ಧರ್ಮಸ್ಥಳ ಪ್ರಕರಣ: ಎಸ್ಐಟಿಗೆ ಕನಿಷ್ಠ ಜ್ಞಾನ ಇಲ್ಲ- ಸುರೇಶ್‌ಕುಮಾರ್ ಆಕ್ರೋಶ
ಡಿಕೆ ಶಿವಕುಮಾರ್ ಅವರು ನಾನು ಮಂಜುನಾಥನ ಭಕ್ತ ಅಂತ ಹೇಳುತ್ತಿದ್ದಾರೆ, ಇಲ್ಲಿ ಅವರು ಭಕ್ತರಾಗಿ ಮಾತಾಡಿದ್ದಾರೋ?, ಡಿಸಿಎಂ ಆಗಿ ಮಾತಾಡಿದ್ದಾರೋ ನನಗಂತೂ ಅರ್ಥ ಆಗುತ್ತಿಲ್ಲ. ಆದರೆ, ಅವರ ಈ ಹೇಳಿಕೆಗೂ ವರ್ತನೆಗೂ ಎಳ್ಳಷ್ಟೂ ಸಾಮ್ಯತೆ ಇಲ್ಲ ಎಂದು ಸುರೇಶ್‌ಕುಮಾರ್ ವಾಗ್ದಾಳಿ ನಡೆಸಿದರು.;
ಧರ್ಮಸ್ಥಳದ ಅಸಹಜ ಸಾವುಗಳ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ( ಎಸ್‌ಐಟಿ) ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲ ಎಂದು ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆ ಅಧಿವೇಶನದ ಕಲಾಪದಲ್ಲಿ ಮಾತನಾಡಿದ ಅವರು, ಎಸ್‌ಐಟಿ ಅಧಿಕಾರಿಗಳು ಅನಾಮಿಕ ವ್ಯಕ್ತಿಯನ್ನು ತನ್ನ ಕಸ್ಟಡಿಯಲ್ಲಿ ಇಟ್ಟುಕೊಳ್ಳದೇ ವಕೀಲರ ಜೊತೆ ಕಳುಹಿಸಿಕೊಡುತ್ತಿದ್ದಾರೆ. ಮಂಗಳೂರಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ವ್ಯಕ್ತಿಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಇಡೀ ರಾಜ್ಯದ ಜನರನ್ನು ಧರ್ಮಸ್ಥಳಕ್ಕೆ ನುಗ್ಗಿಸುತ್ತೇವೆ ಎನ್ನುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಜರುಗಿಸಿಲ್ಲ. ಸೂಕ್ಷ್ಮ ಪ್ರಕರಣದ ತನಿಖೆ ನಡೆಯುವಾಗ ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡುವವರ ಮೇಲೆ ಎಸ್‌ಐಟಿ ಏನು ಕ್ರಮ ಕೈಗೊಂಡಿದೆ ಎಂದು ಕಿಡಿಕಾರಿದರು.
ಎಸ್ಐಟಿ ಅಗತ್ಯ ಇಲ್ಲ, ಅಗತ್ಯವಿದ್ದರೆ ಎಸ್‌ಐಟಿ ರಚನೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಮರುದಿನವೇ ಎಸ್ಐಟಿ ರಚಿಸಿ ಆದೇಶ ಮಾಡಿದರು. ಈಗ ಡಿಕೆ ಶಿವಕುಮಾರ್ ಅವರು ನಾನು ಮಂಜುನಾಥನ ಭಕ್ತ ಅಂತ ಹೇಳುತ್ತಿದ್ದಾರೆ, ಇಲ್ಲಿ ಅವರು ಭಕ್ತರಾಗಿ ಮಾತಾಡಿದ್ದಾರೋ?, ಡಿಸಿಎಂ ಆಗಿ ಮಾತಾಡಿದ್ದಾರೋ ನನಗಂತೂ ಅರ್ಥ ಆಗುತ್ತಿಲ್ಲ. ಆದರೆ, ಅವರ ಈ ಹೇಳಿಕೆಗೂ ವರ್ತನೆಗೂ ಎಳ್ಳಷ್ಟೂ ಸಾಮ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತೀರ್ಪು ಬಂದಿದೆ. ಆದರೂ, ಅನೇಕ ಹೋರಾಟಗಾರರು ಹಾಗೂ ಯೂಟ್ಯೂಬ್ ಚಾನೆಲ್‌ನವರು ನಮ್ಮ ಬಳಿ ಸಾಕ್ಷಿ ಇದೆ ಎಂದು ಹೇಳಿದ್ದರಿಂದ ಸರ್ಕಾರ ತನಿಖೆಗೆ ಸೂಚಿಸಿದೆ. ಈ ಪ್ರಕರಣದ ಕುರಿತಂತೆ ಸಮಾಜಕ್ಕೆ ಸರ್ಕಾರ ಉತ್ತರ ನೀಡಬೇಕು. ಎಸ್‌ಐಟಿ ತನಿಖೆಯನ್ನು ನಾವು ಸ್ವಾಗತಿಸಿದ್ದೇವೆ. ಆದರೆ, ದೇಶದ ಜನರ ಭಾವನೆಗೆ ಧಕ್ಕೆಯಾಗುತ್ತಿರುವುದನ್ನು ನಿಲ್ಲಿಸಬೇಕು. ಆದಷ್ಟು ಶೀಘ್ರವಾಗಿ ಎಸ್‌ಐಟಿ ತನಿಖೆ ವರದಿ ನೀಡಬೇಕು. ಹಿಂದೂ ಕ್ಷೇತ್ರದ ಮೇಲೆ ನಡೆಸುತ್ತಿರುವ ಅಪಪ್ರಚಾರ ನಿಲ್ಲಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಆಗಬೇಕು ಎಂದು ಆಗ್ರಹಿಸಿದರು.
ಶಾಸಕ ಸುನೀಲ್‌ಕುಮಾರ್ ಮಾತನಾಡಿ, ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಅಸಹಾಯಕವಾಗಿದೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವವರನ್ನು ಒದ್ದು ಒಳ ಹಾಕಬೇಕು. ರಾಜ್ಯದ ಜನ ರಸ್ತೆಗೆ ಬಂದಿರುವಾಗ ಸರ್ಕಾರ ಎಚ್ಚೆತ್ತುಕೊಂಡಿದೆ. ನಾಳೆ ಸರ್ಕಾರದ ವಿರುದ್ಧವೂ ಅಪಪ್ರಚಾರ ಆಗಬಹುದು. ಟೂಲ್‌ಕಿಟ್ ಬಳಕೆ ನಿಲ್ಲಿಸದಿದ್ದರೆ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಕೂಡಲೇ ಮಧ್ಯಂತರ ವರದಿ ಬಿಡುಗಡೆ ಮಾಡಿ, ಎಲ್ಲವನ್ನೂ ಹೇಳಬೇಕು. ಎಲ್ಲ ಮುಗಿದ ಮೇಲೆ ಮುಸುಕುಧಾರಿ ಮೆಂಟಲ್ ಎಂದು ಹೇಳಿದರೆ ಸರಿ ಇರುವುದಿಲ್ಲ. ಹೇಳುವುದಿದ್ದರೆ ಈಗಲೇ ಅದನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.