ಬೀದಿನಾಯಿಗಳ ಸ್ಥಳಾಂತರಕ್ಕೆ ಸುಪ್ರೀಂ ಆದೇಶ: ದತ್ತು ಪಡೆಯಲು ಕರೆ ನೀಡಿದ ಕಿಚ್ಚ, ರಮ್ಯಾ, ರಾಜ್. ಬಿ ಶೆಟ್ಟಿ

ನಟರಾದ ಕಿಚ್ಚ ಸುದೀಪ್, ರಮ್ಯಾ ಮತ್ತು ರಾಜ್ ಬಿ. ಶೆಟ್ಟಿ ಸೇರಿದಂತೆ ಹಲವರು ಬೀದಿನಾಯಿಗಳನ್ನು ಸ್ಥಳಾಂತರಿಸುವ ಬದಲು ಅವುಗಳನ್ನು ದತ್ತು ತೆಗೆದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.;

Update: 2025-08-14 05:27 GMT

ಕಿಚ್ಚ ಸುದೀಪ್, ರಮ್ಯಾ ಮತ್ತು ರಾಜ್ ಬಿ. ಶೆಟ್ಟಿ ಸೇರಿದಂತೆ ಹಲವರು ಬೀದಿನಾಯಿಗಳನ್ನು ಸ್ಥಳಾಂತರಿಸುವ ಬದಲು ಅವುಗಳನ್ನು ದತ್ತು ತೆಗೆದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ದಾಳಿ ಪ್ರಕರಣಗಳ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನಗರದ ಎಲ್ಲಾ ಬೀದಿನಾಯಿಗಳನ್ನು ಹಿಡಿದು ಆಶ್ರಯತಾಣಗಳಿಗೆ ಸ್ಥಳಾಂತರಿಸಲು ಇತ್ತೀಚೆಗೆ ಆದೇಶ ನೀಡಿತ್ತು. ಈ ತೀರ್ಪಿಗೆ ಕನ್ನಡ ಚಿತ್ರರಂಗದ ತಾರೆಯರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಟರಾದ ಕಿಚ್ಚ ಸುದೀಪ್, ರಮ್ಯಾ ಮತ್ತು ರಾಜ್ ಬಿ. ಶೆಟ್ಟಿ ಸೇರಿದಂತೆ ಹಲವರು ಬೀದಿನಾಯಿಗಳನ್ನು ಸ್ಥಳಾಂತರಿಸುವ ಬದಲು ಅವುಗಳನ್ನು ದತ್ತು ತೆಗೆದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ನಟ ಕಿಚ್ಚ ಸುದೀಪ್, "ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಪ್ರಶ್ನಿಸುವುದಿಲ್ಲ, ಅದರ ಹಿಂದೆ ತನ್ನದೇ ಆದ ಕಾರಣಗಳಿರಬಹುದು. ಆದರೆ, ಈ ಪ್ರಕ್ರಿಯೆಯು ನಾಯಿಗಳ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದರ ಬಗ್ಗೆಯೂ ನಾವು ಚಿಂತಿಸಬೇಕು. ಬೀದಿಗಳಲ್ಲೇ ಬೆಳೆದು, ಸ್ವತಂತ್ರವಾಗಿದ್ದ ನಾಯಿಗಳನ್ನು ಒಂದೆಡೆ ಕೂಡಿಹಾಕುವುದು ಅವುಗಳ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

"ನಮ್ಮ ಕುಟುಂಬದಲ್ಲಿಯೂ ನಾವು ಬೀದಿನಾಯಿಗಳನ್ನು ದತ್ತು ಪಡೆದು ಸಾಕುತ್ತಿದ್ದೇವೆ. ಅವುಗಳ ಪ್ರೀತಿ ಮತ್ತು ನಿಷ್ಠೆ ದೊಡ್ಡದು. ಧ್ವನಿ ಇಲ್ಲದ ಮೂಕ ಜೀವಿಗಳಿಗೆ ನಾವೇ ದನಿಯಾಗೋಣ, ಬೀದಿ ನಾಯಿಗಳನ್ನು ದತ್ತು ಪಡೆಯೋಣ," ಎಂದು ಅವರು ಜನರಲ್ಲಿ ಕರೆ ನೀಡಿದ್ದಾರೆ.

ನಟ ಮತ್ತು ನಿರ್ದೇಶಕ ರಾಜ್ ಬಿ. ಶೆಟ್ಟಿ ಕೂಡ ತಮ್ಮ ಪ್ರಾಣಿ ಪ್ರೇಮವನ್ನು ವ್ಯಕ್ತಪಡಿಸಿ, "ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ನಾನು ಸ್ವತಃ ಏಳು ಬೀದಿನಾಯಿಗಳನ್ನು ಸಾಕುತ್ತಿದ್ದೇನೆ. ನಾವೆಲ್ಲರೂ ಬೀದಿನಾಯಿಗಳನ್ನು ದತ್ತು ಪಡೆಯೋಣ," ಎಂದು ಹೇಳಿದ್ದಾರೆ.

ಇನ್ನು, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಮಹಾತ್ಮ ಗಾಂಧೀಜಿಯವರ ಹೇಳಿಕೆಯನ್ನು ಉಲ್ಲೇಖಿಸಿ, "ಯಾವುದೇ ದೇಶದ ನಾಗರಿಕರು ಎಂಥವರು ಎಂಬುದನ್ನು ಅವರು ಪ್ರಾಣಿಗಳನ್ನು ನೋಡಿಕೊಳ್ಳುವ ರೀತಿಯಿಂದ ನಿರ್ಧರಿಸಬಹುದು" ಎಂಬ ಸಂದೇಶದ ಮೂಲಕ ಪ್ರಾಣಿಗಳ ಬಗ್ಗೆ ಸಹಾನುಭೂತಿ ತೋರುವಂತೆ ಪರೋಕ್ಷವಾಗಿ ಮನವಿ ಮಾಡಿದ್ದಾರೆ.

ಇದೇ ರೀತಿ ನಟಿ ನಿಶ್ವಿಕಾ ನಾಯ್ಡು ಕೂಡ ಬೀದಿನಾಯಿಗಳ ಪರವಾಗಿ ಧ್ವನಿ ಎತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ನಂತರ, ಬೀದಿನಾಯಿಗಳ ನಿರ್ವಹಣೆಯ ಕುರಿತು ಹೊಸ ಚರ್ಚೆ ಆರಂಭವಾಗಿದ್ದು, ಚಿತ್ರರಂಗದ ತಾರೆಯರು ಕ್ರೌರ್ಯದ ಬದಲಿಗೆ ಕರುಣೆ ಮತ್ತು ದತ್ತು ಸ್ವೀಕಾರದ ಮಾರ್ಗವನ್ನು ಪ್ರತಿಪಾದಿಸುತ್ತಿದ್ದಾರೆ.

Tags:    

Similar News