ಬೀದಿನಾಯಿಗಳನ್ನು ಶೆಡ್‌ಗಳಿಗೆ ಸ್ಥಳಾಂತರಿಸಲು ವಿಧಾನಸಭೆಯಲ್ಲಿ ಶಾಸಕರ ಒತ್ತಾಯ

ಸುಪ್ರೀಂ ಕೋರ್ಟ್‌ನ ಆದೇಶವನ್ನು ರಾಜ್ಯದಲ್ಲಿಯೂ ಜಾರಿಗೊಳಿಸಬೇಕು ಮತ್ತು ಈ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಅವರು ಸ್ಪೀಕರ್ ಅವರಿಗೆ ಮನವಿ ಮಾಡಿದರು.;

Update: 2025-08-14 05:46 GMT

ವಿಧಾನಸಭೆ ಅಧಿವೇಶನದಲ್ಲಿ ಬೀದಿ ನಾಯಿಗಳ ಕುರಿತು ಚರ್ಚಿಸಲಾಯಿತು.

ರಾಜ್ಯದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ ಸಮಸ್ಯೆಯು ಇದೀಗ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ದೆಹಲಿ ಮಾದರಿಯಲ್ಲಿ ರಾಜ್ಯದ ಎಲ್ಲಾ ಬೀದಿನಾಯಿಗಳನ್ನು ಹಿಡಿದು ಪ್ರತ್ಯೇಕ ಶೆಡ್‌ಗಳಿಗೆ ಸ್ಥಳಾಂತರಿಸಬೇಕೆಂದು ಹಲವು ಶಾಸಕರು ಗುರುವಾರ ನಡೆದ ಕಲಾಪದಲ್ಲಿ ಒತ್ತಾಯಿಸಿದರು.

ಪ್ರಶೋತ್ತರ ಕಲಾಪದ ನಂತರ ಜೆಡಿಎಸ್ ಶಾಸಕ ಸುರೇಶ್ ಬಾಬು ಅವರು ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದರು. ಅವರಿಗೆ ಬಿಜೆಪಿಯ ಹಿರಿಯ ಸದಸ್ಯರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಎಸ್. ಸುರೇಶ್ ಕುಮಾರ್ ಸೇರಿದಂತೆ ಹಲವು ಶಾಸಕರು ಬೆಂಬಲ ನೀಡಿದರು. ಸುಪ್ರೀಂ ಕೋರ್ಟ್‌ನ ಆದೇಶವನ್ನು ರಾಜ್ಯದಲ್ಲಿಯೂ ಜಾರಿಗೊಳಿಸಬೇಕು ಮತ್ತು ಈ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಅವರು ಸ್ಪೀಕರ್ ಅವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ, ಕೆಲವು ಸದಸ್ಯರು ವಿಧಾನಸೌಧ ಮತ್ತು ಶಾಸಕರ ಭವನದ ಆವರಣದಲ್ಲಿಯೂ ನಾಯಿಗಳ ಹಾವಳಿ ಹೆಚ್ಚಾಗಿರುವುದನ್ನು ಪ್ರಸ್ತಾಪಿಸಿದರು. "ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ, 18 ಜನರಿಗೆ ರೇಬೀಸ್ ತಗುಲಿದೆ. ಇಂತಹ ಪರಿಸ್ಥಿತಿಯಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೀದಿನಾಯಿಗಳಿಗೆ ಬಿರಿಯಾನಿ ಹಾಕುವಂತಹ ಯೋಜನೆಗಳತ್ತ ಗಮನಹರಿಸುತ್ತಿದೆ. ಅದನ್ನು ಬಿಟ್ಟು, ಮೊದಲು ನಾಯಿಗಳನ್ನು ಹಿಡಿಯುವ ಕೆಲಸಕ್ಕೆ ಆದ್ಯತೆ ನೀಡಬೇಕು," ಎಂದು ಕೆಲವರು ಆಗ್ರಹಿಸಿದರು.

ಶಾಸಕರ ಮನವಿಗೆ ಪ್ರತಿಕ್ರಿಯಿಸಿದ ಸ್ಪೀಕರ್, ಈ ವಿಷಯದ ಕುರಿತು ಚರ್ಚಿಸಲು ಲಿಖಿತ ಮನವಿ ಸಲ್ಲಿಸುವಂತೆ ಸೂಚಿಸಿ, ಸದನದ ಮುಂದಿನ ಕಲಾಪಗಳನ್ನು ಮುಂದುವರಿಸಿದರು.

Tags:    

Similar News