ಧರ್ಮಸ್ಥಳ ಪ್ರಕರಣ| ಎನ್‍ಐಎಗೆ ವಹಿಸುವಂತೆ ವಿಜಯೇಂದ್ರ ಆಗ್ರಹ, ಸೆ.1ರಂದು ʼಧರ್ಮಸ್ಥಳ ಚಲೋʼ
ಎನ್‍ಐಎ ತನಿಖೆಗೆ ಒತ್ತಾಯಿಸಿ ರಾಜ್ಯದ ಸಮಸ್ತ ಹಿಂದೂ ಸಮಾಜವು ಇದರಲ್ಲಿ ಪಾಲ್ಗೊಳ್ಳಬೇಕು. ಸೆ. 1ರಂದು ಬೃಹತ್ ಸಮಾವೇಶ ಮಾಡಲಿದ್ದೇವೆ. ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದಲೂ ಜನರು ಧರ್ಮಸ್ಥಳಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.;
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು.
ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ(ಎನ್‌ಐಎ) ವಹಿಸಬೇಕು ಎಂದು ಆಗ್ರಹಿಸಿ ಸೆಪ್ಟಂಬರ್ 1 ರಂದು ʼಧರ್ಮಸ್ಥಳ ಚಲೋʼ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ಸೋಮವಾರ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್‍ಐಎ ತನಿಖೆ ಮಾಡಿದರೆ ರಾಜ್ಯ ಸರ್ಕಾರದ ಬಗ್ಗೆ ಜನರಿಗೆ ಮತ್ತು ಭಕ್ತರಿಗೆ ವಿಶ್ವಾಸ ಬರಲಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ಈ ಕುರಿತು ತಿರ್ಮಾನ ಮಾಡಬೇಕು ಎಂದು ಆಗ್ರಹಿಸಿದರು.
ಎನ್‍ಐಎ ತನಿಖೆಗೆ ಒತ್ತಾಯಿಸಿ ರಾಜ್ಯದ ಸಮಸ್ತ ಹಿಂದೂ ಸಮಾಜವು ಇದರಲ್ಲಿ ಪಾಲ್ಗೊಳ್ಳಬೇಕು. ಸೆ. 1ರಂದು ಬೃಹತ್ ಸಮಾವೇಶ ಮಾಡಲಿದ್ದೇವೆ. ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದಲೂ ಜನರು ಧರ್ಮಸ್ಥಳಕ್ಕೆ ಬರಲಿದ್ದು, ಲಕ್ಷಾಂತರ ಜನರು ಭಾಗವಹಿಸುವ ವಿಶ್ವಾಸವಿದೆ ಎಂದರು.
"ಧರ್ಮಸ್ಥಳದ ಘಟನೆಯಿಂದ ಸರ್ಕಾರಕ್ಕೆ ಕಳಂಕ ಬಂದಿದೆ. ಆ ಕಳಂಕದಿಂದ ಹೊರ ಬರಲು ದುಷ್ಕೃತ್ಯದ ಹಿಂದಿರುವ ಸಂಘಟನೆಗಳ ಬಗ್ಗೆ ಸಮರ್ಪಕ ತನಿಖೆ ಆಗಬೇಕಿದೆ. ಅಪಪ್ರಚಾರ ಮಾಡುವವರು ಇದೇ ರೀತಿ ಇನ್ನೊಂದು ಹಿಂದೂ ದೇವಾಲಯದ ವಿರುದ್ಧ ಷಡ್ಯಂತ್ರ ಮಾಡಬಹುದು, ಧರ್ಮಸ್ಥಳದ ವಿಷಯದಲ್ಲಿ ಮುಖ್ಯಮಂತ್ರಿಗಳು ಆತುರ ತೋರಿದ್ದೇಕೆ ಎಂಬುದು ಒಗಟಾಗಿಯೇ ಉಳಿದಿದೆ" ಎಂದು ತಿಳಿಸಿದರು.
"ಧರ್ಮಸ್ಥಳದ ಬಗ್ಗೆ ಬುರುಡೆ ಹಿಡಿದ ವ್ಯಕ್ತಿಯೊಬ್ಬ ಬಂದು ಬುರುಡೆ ಹೊಡೆದರೆ, ಆ ವ್ಯಕ್ತಿಯ ಹಿನ್ನೆಲೆ ಏನು? ಅವನ ಹಿಂದಿರುವ ಶಕ್ತಿಗಳು, ಯಾವ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂದು ಮಾಹಿತಿ ಸಂಗ್ರಹಿಸಬೇಕಿತ್ತು. ಗುಪ್ತಚರ ದಳದಿಂದ ವರದಿ ಪಡೆದ ಬಳಿಕ ಮುಖ್ಯಮಂತ್ರಿಗಳು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಧರ್ಮಸ್ಥಳದ ವಿಷಯದಲ್ಲಿ ಕಳೆದ ಒಂದು ತಿಂಗಳಿನಿಂದ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ" ಎಂದು ಹೇಳಿದರು.
ಸಿಎಂ ತಮ್ಮ ನಿರ್ಧಾರ ಬದಲಿಸಿದ್ದೇಕೆ ?
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರೆ ತನಿಖೆ ಮಾಡಲಿದ್ದಾರೆ ಎಂದು ಜುಲೈ 18ರಂದು ಮುಖ್ಯಮಂತ್ರಿಗಳು ಮತ್ತು ಸಚಿವರು ಹೇಳಿದ್ದರು. ಮರುದಿನವೇ ಯಾವುದೇ ಕಾರಣಕ್ಕೆ ಎಸ್‍ಐಟಿಗೆ ಕೊಡುವುದಿಲ್ಲ ಎಂದಿದ್ದರು. ನಂತರ ಭಾನುವಾರದಂದು(ಜು.19) ಎಸ್‍ಐಟಿ ತನಿಖೆ ನಡೆಯಲಿದೆ ಎಂದು ಸಿಎಂ ಪ್ರಕಟಿಸಿದರು. ಶನಿವಾರ ಯಾವುದೇ ಕಾರಣಕ್ಕೆ ತನಿಖೆಯನ್ನು ಎಸ್‍ಐಟಿಗೆ ಕೊಡುವುದಿಲ್ಲ ಎಂದಿದ್ದ ಮುಖ್ಯಮಂತ್ರಿಗಳು, ಭಾನುವಾರ ಎಸ್‍ಐಟಿ ತನಿಖೆ ಘೋಷಿಸಿದ್ದಾರೆ. ರಾತ್ರೋರಾತ್ರಿ ಸಿಎಂ ನಿಲುವಿನಲ್ಲಿ ಬದಲಾವಣೆ ಆಗಿರುವುದಕ್ಕೆ ಕಾರಣಗಳಾದರೂ ಏನು? ಯಾವ್ಯಾವ ಸಂಘಟನೆಗಳು, ವ್ಯಕ್ತಿಗಳು ಸಿಎಂ ಮೇಲೆ ಒತ್ತಡ ಹೇರಿದ್ದಾರೆ? ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಪರಾಮರ್ಶೆ ಮಾಡದೇ ತಮ್ಮ ನಿರ್ಧಾರವನ್ನು ಬದಲಿಸಿರುವುದು ಬಹಿರಂಗವಾಗಬೇಕಿದೆ ಎಂದರು.
ಕೋಟ್ಯಂತರ ಭಕ್ತರ ಭಾವನೆಗಳಿಗೆ ಘಾಸಿ
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದಲ್ಲಿ ಸಿಎಂ ಹಾಗೂ ಡಿಸಿಎಂ ಪ್ರಚಾರ ಪಡೆಯುವ ಹುನ್ನಾರದ ಪರಿಣಾಮದಿಂದ 11 ಮುಗ್ಧ ಜನರು ಪ್ರಾಣ ಕಳಕೊಂಡಿದ್ದರು. ಹಲವರಿಗೆ ಗಂಭೀರ ಗಾಯಗಳಾಗಿದ್ದವು. ಅದೇ ರೀತಿ, ಧರ್ಮಸ್ಥಳದ ವಿಷಯದಲ್ಲಿ ಮುಖ್ಯಮಂತ್ರಿಗಳು ಆತುರದ ನಿರ್ಧಾರ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಅಪಪ್ರಚಾರ ನಡೆದು ಕೋಟ್ಯಂತರ ಭಕ್ತರ ಭಾವನೆಗಳಿಗೆ ಘಾಸಿ ಆಗಿದೆ ಎಂದು ತಿಳಿಸಿದರು.