ಧರ್ಮಸ್ಥಳ ಪ್ರಕರಣ: ವಿಚಾರಣೆಗೆ ಹಾಜರಾಗದಿದ್ದರೆ ಬಂಧನ; ಮಹೇಶ್ ಶೆಟ್ಟಿ ತಿಮರೋಡಿ ಸೇರಿ ನಾಲ್ವರಿಗೆ ಸಮನ್ಸ್.
ಧರ್ಮಸ್ಥಳದಲ್ಲಿನ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಎಸ್‌ಐಟಿ ನಾಲ್ವರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ. ವಿಚಾರಣೆಗೆ ಹಾಜರಾಗದಿದ್ದಲ್ಲಿ ಬಂಧಿಸುವ ಎಚ್ಚರಿಕೆ ನೀಡಿದೆ.
ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಅತ್ಯಾಚಾರ ಮತ್ತು ಅನುಮಾನಾಸ್ಪದ ಸಾವುಗಳ ಪ್ರಕರಣದ ತನಿಖೆ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣದ ಕೇಂದ್ರಬಿಂದುವಾಗಿರುವ ನಾಲ್ವರು ಪ್ರಮುಖ ಸಾಮಾಜಿಕ ಹೋರಾಟಗಾರರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಒಂದು ವೇಳೆ ವಿಚಾರಣೆಗೆ ಗೈರಾದರೆ ಬಂಧನ ಎದುರಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಕಠಿಣ ಎಚ್ಚರಿಕೆ ನೀಡಲಾಗಿದೆ.
ವಿಚಾರಣೆಗೆ ಹಾಜರಾಗಲು ಕಟ್ಟುನಿಟ್ಟಿನ ಸೂಚನೆ
ಸಾಮಾಜಿಕ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್, ವಿಠಲ ಗೌಡ ಮತ್ತು ಗಿರೀಶ್ ಮಟ್ಟಣ್ಣವರ್ ಅವರಿಗೆ ಈ ಸಮನ್ಸ್ ನೀಡಲಾಗಿದೆ. ತನಿಖೆಗೆ ಸಹಕರಿಸುವುದು, ಸಾಕ್ಷಿಗಳ ಮೇಲೆ ಪ್ರಭಾವ ಬೀರದಿರುವುದು ಹಾಗೂ ತನಿಖಾಧಿಕಾರಿಗಳು ಕೇಳಿದಾಗ ಯಾವುದೇ ಮಾಹಿತಿ ಮರೆಮಾಚದೆ ಒದಗಿಸಬೇಕೆಂದು ನೋಟಿಸ್‌ನಲ್ಲಿ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ ಮತ್ತು ಚಿನ್ನಯ್ಯನ ಸ್ಫೋಟಕ ಆರೋಪ
ಈ ಇಡೀ ಪ್ರಕರಣ ಬೆಳಕಿಗೆ ಬಂದಿದ್ದು ಧರ್ಮಸ್ಥಳದ ಮಾಜಿ ಸ್ವಚ್ಛತಾ ಕಾರ್ಮಿಕ ಚಿನ್ನಯ್ಯ ಎಂಬಾತ ನೀಡಿದ ದೂರಿನಿಂದ. ತಾನು 2002 ರಿಂದ 2014ರ ನಡುವೆ ಸುಮಾರು 200ಕ್ಕೂ ಹೆಚ್ಚು ಅಪರಿಚಿತ ಶವಗಳನ್ನು ಯಾವುದೇ ಮರಣೋತ್ತರ ಪರೀಕ್ಷೆಯಿಲ್ಲದೆ ರಹಸ್ಯವಾಗಿ ಹೂತಿರುವುದಾಗಿ ಆತ 2025ರ ಆಗಸ್ಟ್‌ನಲ್ಲಿ ಸ್ಫೋಟಕ ಆರೋಪ ಮಾಡಿದ್ದ. ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿತ್ತು.
ಹೋರಾಟಗಾರರ ಪಾತ್ರವೇನು?
ದೂರುದಾರ ಚಿನ್ನಯ್ಯನಿಗೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಆಶ್ರಯ ನೀಡಿದ್ದರು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಎಸ್‌ಐಟಿ ಅಧಿಕಾರಿಗಳು ತಿಮರೋಡಿ ನಿವಾಸದಲ್ಲಿ ಶೋಧ ನಡೆಸಿ, ಚಿನ್ನಯ್ಯನ ಮಾಧ್ಯಮ ಸಂವಾದಗಳ ವಿಡಿಯೋಗಳಿದ್ದ ಲ್ಯಾಪ್‌ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಮತ್ತೊಬ್ಬ ಹೋರಾಟಗಾರ ಟಿ. ಜಯಂತ್, ಚಿನ್ನಯ್ಯನನ್ನು ಬೆಂಗಳೂರಿಗೆ ಕರೆತಂದು ಆತಿಥ್ಯ ನೀಡಿ, ತಲೆಬುರುಡೆಯೊಂದಿಗೆ ದೆಹಲಿಗೆ ಹೋಗಿದ್ದರು ಎಂಬ ಆರೋಪವೂ ಇದೆ. ಜೊತೆಗೆ, ಧರ್ಮಸ್ಥಳದ ಬಳಿ 15 ವರ್ಷದ ಬಾಲಕಿಯ ಶವ ಹೂತಿರುವ ಬಗ್ಗೆ ಜಯಂತ್ ಪ್ರತ್ಯೇಕ ದೂರು ದಾಖಲಿಸಿದ್ದರು.
ಅಂತಿಮ ಹಂತದಲ್ಲಿ ತನಿಖೆ, ಹೆಚ್ಚಿದ ಕುತೂಹಲ
ಈ ನಾಲ್ವರು ಹೋರಾಟಗಾರರನ್ನು ಈಗಾಗಲೇ ಹಲವು ಬಾರಿ ತೀವ್ರ ವಿಚಾರಣೆಗೆ ಒಳಪಡಿಸಿರುವ ಎಸ್‌ಐಟಿ, ಇದೀಗ ಮತ್ತೊಮ್ಮೆ ವಿಚಾರಣೆಗೆ ಕರೆದಿರುವುದು ಪ್ರಕರಣದ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ತನಿಖೆ ಅಂತಿಮ ಹಂತದಲ್ಲಿದ್ದು, ಈ ವಿಚಾರಣೆಯ ನಂತರ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.