ಧರ್ಮಸ್ಥಳ ಪ್ರಕರಣ ಬಿಜೆಪಿಯ ಆಂತರಿಕ ಷಡ್ಯಂತ್ರ: ಡಿಸಿಎಂ ಡಿ.ಕೆ. ಶಿವಕುಮಾರ್

“ಧರ್ಮಸ್ಥಳಕ್ಕೆ ನ್ಯಾಯ ಸಿಗಬೇಕು ಎಂದು ಬಿಜೆಪಿಯವರು ಎಂದೂ ಬಾಯಿ ಬಿಚ್ಚಲಿಲ್ಲ. ಬಿಜೆಪಿಯ ಮೂಲ ಕಾರ್ಯಕರ್ತರೇ ಧರ್ಮಸ್ಥಳದ ಮೇಲೆ ಕೆಟ್ಟ ಹೆಸರು ತರಬೇಕು ಎಂದು ಮಾಡಿರುವ ಕೆಲಸವಿದು” ಎಂದು ತಿಳಿಸಿದರು.;

Update: 2025-09-01 13:51 GMT
ಡಿಸಿಎಂ ಡಿ.ಕೆ. ಶಿವಕುಮಾರ್‌

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಎನ್‌ಐಎ ತನಿಖೆಗೆ ಒತ್ತಾಯಗಳು ಬಿಜೆಪಿಯ ಆಂತರಿಕ ಕಚ್ಚಾಟದ ಫಲವಾಗಿದ್ದು, ಇದು ಅವರದ್ದೇ ಷಡ್ಯಂತ್ರ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಬಿಜೆಪಿಯಲ್ಲಿನ ಎರಡು ಬಣಗಳು ತಮ್ಮ ಆಂತರಿಕ ಸಂಘರ್ಷದ ಭಾಗವಾಗಿ ಈ ವಿಷಯವನ್ನು ಬಳಸಿಕೊಳ್ಳುತ್ತಿವೆ. ಧರ್ಮಸ್ಥಳಕ್ಕೆ ನ್ಯಾಯ ಸಿಗಬೇಕು ಎಂದು ಅವರು ಎಂದಿಗೂ ಪ್ರಾಮಾಣಿಕವಾಗಿ ಹೋರಾಟ ಮಾಡಲಿಲ್ಲ. ಬದಲಾಗಿ, ಆ ಕ್ಷೇತ್ರದ ಮೇಲೆ ಕೆಟ್ಟ ಹೆಸರು ತರಬೇಕೆಂಬುದು ಬಿಜೆಪಿಯ ಮೂಲ ಕಾರ್ಯಕರ್ತರ ಉದ್ದೇಶವಾಗಿದೆ" ಎಂದು ದೂರಿದರು.

ಪ್ರಸ್ತುತ ಎಸ್‌ಐಟಿ ನಡೆಸುತ್ತಿರುವ ತನಿಖೆಯ ಬಗ್ಗೆ ಬಿಜೆಪಿಗೆ ಸಮಾಧಾನವಿಲ್ಲವೇ? ನಮ್ಮ ಸರ್ಕಾರ ಎಸ್‌ಐಟಿ ರಚನೆ ಮಾಡಿದಾಗ ಅವರೇ ಸ್ವಾಗತಿಸಿದ್ದರು. ಈಗ ತನಿಖೆಯಲ್ಲಿ ಏನೂ ಸಿಗದಿದ್ದಾಗ, ಸರ್ಕಾರದ ಮೇಲೆ ಆರೋಪ ಹೊರಿಸಿ ನಾಟಕವಾಡುತ್ತಿದ್ದಾರೆ" ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ. "ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಾ ಯಾತ್ರೆ ನಡೆಸುತ್ತಿದ್ದಾರೆ. ಎಸ್‌ಐಟಿ ತನಿಖೆ ಬೇಡ, ಎನ್‌ಐಎಗೆ ವಹಿಸಿ ಎಂದು ಆಗ್ರಹಿಸುತ್ತಿದ್ದಾರೆ. ಇದೆಲ್ಲವೂ ಬಿಜೆಪಿಯವರೇ ರೂಪಿಸಿದ ಷಡ್ಯಂತ್ರ," ಎಂದು ಅವರು ಸ್ಪಷ್ಟಪಡಿಸಿದರು. ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿಯೂ ಈ ವಿಷಯ ಚರ್ಚೆಯಾಗಿತ್ತು. ಆಗಲೂ ಮಾತನಾಡಿದ್ದ ಡಿ.ಕೆ. ಶಿವಕುಮಾರ್, "ಧರ್ಮಸ್ಥಳದ ವಿರುದ್ಧ ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ಎಸ್‌ಐಟಿ ತನಿಖೆಯ ಮೂಲಕ ಸತ್ಯಾಂಶ ಸಂಪೂರ್ಣವಾಗಿ ಹೊರಬರಲಿದೆ," ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.  

Tags:    

Similar News