ಧರ್ಮಸ್ಥಳ ಪ್ರಕರಣ | ಬಂಗ್ಲೆಗುಡ್ಡ ಕಾಡಿನಲ್ಲಿ ಎಸ್‌ಐಟಿ ಶೋಧ; ಮೂಳೆಗಳು ಪತ್ತೆ
ಬಂಗ್ಲೆಗುಡ್ಡ ಕಾಡಿನಲ್ಲಿ ಎಸ್‌ಐಟಿ ಶೋಧ ಕಾರ್ಯಾಚರಣೆ ಮುಂದುವರಿಸಿದೆ. ಶೋಧದ ವೇಳೆ ಕೆಲ ಮೂಳೆಗಳ ಅವಶೇಷ, ಬಟ್ಟೆಯ ತುಂಡುಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.;
ಬಂಗ್ಲೆಗುಡ್ಡೆ ಕಾಡಿನಲ್ಲಿ ಮೂಳೆ ತುಂಡುಗಳು ಪತ್ತೆ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಮಾವ ವಿಠಲ್ ಗೌಡ ನೀಡಿರುವ ಹೇಳಿಕೆ ಆಧರಿಸಿ ಬಂಗ್ಲೆಗುಡ್ಡ ಕಾಡಿನಲ್ಲಿ ಎಸ್‌ಐಟಿ ಅಧಿಕಾರಿಗಳು ಅಸ್ಥಿ ಪಂಜರಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಶೋಧದ ವೇಳೆ ಮಾನವನ ಮೂಳೆಗಳು ಹಾಗೂ ಪುರುಷರ ಬಟ್ಟೆಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಬಂಗ್ಲೆಗುಡ್ಡ ಕಾಡಿನಲ್ಲಿ ಮೂಳೆ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ಅಧಿಕಾರಿಗಳು ಮಣ್ಣಿನ ಸ್ಯಾಂಪಲ್ ಕೂಡ ಸಂಗ್ರಹಿಸಿದ್ದು, ಶೋಧ ಮುಂದುವರಿಸಿದ್ದಾರೆ. ಬಂಗ್ಲೆಗುಡ್ಡದಲ್ಲಿ ಸ್ಥಳ ಮಹಜರಿಗೆ ಹೋದ ಸಂದರ್ಭದಲ್ಲಿ ರಾಶಿ ರಾಶಿ ಮೂಳೆಗಳು, ಮೂರು - ನಾಲ್ಕು ತಲೆಬುರುಡೆ ನೋಡಿದ್ದಾಗಿ ಸೌಜನ್ಯ ಮಾವ ವಿಠಲಗೌಡ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಹೀಗಾಗಿ ಬುಧವಾರ (ಸೆ.17) ಬಂಗ್ಲೆಗುಡ್ಡ ಸ್ಥಳವನ್ನು ಎಸ್‌ಐಟಿ ಅಧಿಕಾರಿಗಳು ಶೋಧ ಆರಂಭಿಸಿದ್ದಾರೆ.
ಎಸ್‌ಐಟಿ ತಂಡದೊಂದಿಗೆ ಧರ್ಮಸ್ಥಳ ಗ್ರಾಮ ಪಂಚಾಯತಿ ಸಿಬ್ಬಂದಿ, ಸೋಕೋ ತಂಡ, ಎಸ್‌ಐಟಿ ಎಸ್‌ಪಿಗಳಾದ ಜಿತೇಂದ್ರ ಕುಮಾರ್ ದಯಾಮ, ಸಿ.ಎ ಸೈಮನ್ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. 50 ಅಧಿಕಾರಿಗಳು ಮೂರು ತಂಡಗಳಾಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.