ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಅಗೆಯಲು ಸಿದ್ಧತೆ, ಮೇಲ್ಮಟ್ಟದ ಶೋಧಕ್ಕೆ ಎಸ್​​ಐಟಿ ನಿರ್ಧಾರ
x

ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಅಗೆಯಲು ಸಿದ್ಧತೆ, ಮೇಲ್ಮಟ್ಟದ ಶೋಧಕ್ಕೆ ಎಸ್​​ಐಟಿ ನಿರ್ಧಾರ

ಈಗಾಗಲೇ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಅಂತಿಮ ಅನುಮತಿಗಾಗಿ ಕಾಯುತ್ತಿದ್ದಾರೆ.


Click the Play button to hear this message in audio format

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಧರ್ಮಸ್ಥಳ ಪ್ರಕರಣದ ತನಿಖೆ ಮಹತ್ವದ ಘಟ್ಟ ತಲುಪಿದ್ದು, ವಿಶೇಷ ತನಿಖಾ ತಂಡ (SIT)ವು ಧರ್ಮಸ್ಥಳದ ಬಂಗ್ಲೆಗುಡ್ಡ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲು ಸಿದ್ಧತೆ ನಡೆಸಿದೆ. ಸಾಕ್ಷಿ ವಿಠಲ್ ಗೌಡ ಅವರು 'ಬುರುಡೆಗಳ ರಾಶಿ' ಮತ್ತು 'ಅಸ್ಥಿಪಂಜರಗಳನ್ನು' ನೋಡಿರುವುದಾಗಿ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ತನಿಖೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಈಗಾಗಲೇ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಅಂತಿಮ ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಂದು (ಮಂಗಳವಾರ) ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ.

ಶೋಧಕ್ಕೆ ಕಾರಣವಾದ ವಿಠಲ್ ಗೌಡರ ಹೇಳಿಕೆ

ಪ್ರಕರಣದ ಪ್ರಮುಖ ಸಾಕ್ಷಿ ಮತ್ತು ಸೌಜನ್ಯಾ ಅವರ ಮಾವ ವಿಠಲ್ ಗೌಡ ಅವರನ್ನು ಎಸ್‌ಐಟಿ ಅಧಿಕಾರಿಗಳು ಮಹಜರು ಪ್ರಕ್ರಿಯೆಗಾಗಿ ಬಂಗ್ಲೆಗುಡ್ಡಕ್ಕೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ, ಚಿನ್ನಯ್ಯ (ಮುಖವಾಡಧಾರಿ) ಸುಳ್ಳು ಹೇಳುತ್ತಿದ್ದಾನೆ, ಆತ ಶವಗಳನ್ನು ಹೂತಿರುವುದನ್ನು ನಾನೇ ನೋಡಿದ್ದೇನೆ ಎಂದು ಆರೋಪಿಸಿದ್ದಲ್ಲದೆ, ಅಧಿಕಾರಿಗಳಿಗೆ ಬಂಗ್ಲೆಗುಡ್ಡದ ನಿರ್ದಿಷ್ಟ ಪ್ರದೇಶದಲ್ಲಿ ಬುರುಡೆಗಳ ರಾಶಿ ಮತ್ತು ಅಸ್ಥಿಪಂಜರಗಳು ಇರುವುದಾಗಿ ತಿಳಿಸಿದ್ದರು.

ಬೇರೆ ಸಂದರ್ಭದಲ್ಲಿ ಹೇಳಿದ್ದರೆ ಅದರ ತೂಕ ಬೇರೆಯೇ ಇರುತ್ತಿತ್ತು. ಆದರೆ, ಸ್ವತಃ ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲೇ ಈ ಸ್ಫೋಟಕ ಮಾಹಿತಿ ಹೊರಬಿದ್ದಿರುವುದರಿಂದ, ಈ ಬಗ್ಗೆ ಶೋಧ ನಡೆಸುವುದು ಎಸ್‌ಐಟಿಗೆ ಅನಿವಾರ್ಯವಾಗಿದೆ. ವಿಠಲ್ ಗೌಡರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಅವರು ಹೇಳಿದ ಸ್ಥಳದಲ್ಲಿ ಶೋಧ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ತಂಡದಲ್ಲಿ ವ್ಯಕ್ತವಾಗಿದೆ.

ಮೇಲ್ಮಟ್ಟದ ಶೋಧಕ್ಕೆ ಆದ್ಯತೆ

ಆರಂಭದಲ್ಲಿ, ವಿಠಲ್ ಗೌಡರು ತೋರಿಸಿದ ಸ್ಥಳದಲ್ಲಿ ಉತ್ಖನನ (ಅಗೆಯುವುದು) ನಡೆಸಲು ಎಸ್‌ಐಟಿ ಚಿಂತನೆ ನಡೆಸಿತ್ತು. ಆದರೆ, ಇದೀಗ ತಕ್ಷಣಕ್ಕೆ ಆಳವಾಗಿ ಅಗೆಯುವ ಬದಲು, ಭೂಮಿಯ ಮೇಲ್ಮೈಯಲ್ಲಿ ಸಿಗಬಹುದಾದ ಅಸ್ಥಿಪಂಜರದ ಅವಶೇಷಗಳನ್ನು ಸಂಗ್ರಹಿಸಲು ತಂಡ ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ, ಹೆಚ್ಚಿನ ಮಾಹಿತಿ ಸಂಗ್ರಹ ಮತ್ತು ಆಳವಾದ ಅಧ್ಯಯನದ ನಂತರವಷ್ಟೇ ಉತ್ಖನನದ ಬಗ್ಗೆ ತೀರ್ಮಾನ ಕೈಗೊಳ್ಳಲು ಎಸ್‌ಐಟಿ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಅರಣ್ಯ ಇಲಾಖೆಯ ಸಹಕಾರ

ಬಂಗ್ಲೆಗುಡ್ಡ ಪ್ರದೇಶವು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ, ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಆರಂಭದಲ್ಲಿ ಸ್ಥಳ ಪರಿಶೀಲನೆಗೆ ಮುಂದಾಗಿದ್ದ ಅರಣ್ಯ ಇಲಾಖೆಯು, ಇದೀಗ ನೇರವಾಗಿ ಉಪಗ್ರಹ ಚಿತ್ರಗಳು, ಅರಣ್ಯದ ವಿಸ್ತೀರ್ಣ ಮತ್ತು ಮರಗಳ ಕುರಿತ ದಾಖಲೆಗಳನ್ನು ಒದಗಿಸಲು ಒಪ್ಪಿಕೊಂಡಿದೆ. ಈ ದಾಖಲೆಗಳು ತನಿಖೆಯ ಮುಂದಿನ ಹಾದಿಯನ್ನು ನಿರ್ಧರಿಸಲಿವೆ.

ಸದ್ಯಕ್ಕೆ ಸೋಮವಾರ ನಡೆಯಬೇಕಿದ್ದ ಸ್ಥಳ ಭೇಟಿಯನ್ನು ಮುಂದೂಡಲಾಗಿದ್ದು, ದಾಖಲೆಗಳ ಪರಿಶೀಲನೆ ಮತ್ತು ಮೇಲಾಧಿಕಾರಿಗಳ ಅನುಮತಿ ದೊರೆತ ತಕ್ಷಣವೇ ಬಂಗ್ಲೆಗುಡ್ಡದಲ್ಲಿ ಶೋಧ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ.

Read More
Next Story