ದೇವನಹಳ್ಳಿ ಭೂ ಸ್ವಾಧೀನ ಬಿಕ್ಕಟ್ಟು| ನಾಳೆ ಸರ್ಕಾರದ ನಿಲುವು ಪ್ರಕಟಿಸಲಿರುವ ಸಿಎಂ ಸಿದ್ದರಾಮಯ್ಯ
ಭೂಸ್ವಾಧೀನಕ್ಕೆ ರೈತರಿಂದ ಭಾರಿ ವಿರೋಧ ವ್ಯಕ್ತವಾಗಿದ್ದರಿಂದ ಇತ್ತೀಚೆಗೆ ರೈತರು ಹಾಗೂ ಹೋರಾಟಗಾರರ ಜತೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ 10 ದಿನಗಳ ಕಾಲಾವಕಾಶ ಕೋರಿದ್ದರು.;
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಮಂಗಳವಾರ(ಜು.15) ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ಏರೋಸ್ಪೇಸ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಚನ್ನರಾಯಪಟ್ಟಣ ಹೋಬಳಿಯ 1777 ಎಕರೆ ಕೃಷಿ ಭೂಮಿಗೆ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಭೂಸ್ವಾಧೀನಕ್ಕೆ ರೈತರಿಂದ ಭಾರಿ ವಿರೋಧ ವ್ಯಕ್ತವಾಗಿದ್ದರಿಂದ ಇತ್ತೀಚೆಗೆ ರೈತರು ಹಾಗೂ ಹೋರಾಟಗಾರರ ಜತೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ 10 ದಿನಗಳ ಕಾಲಾವಕಾಶ ಕೋರಿದ್ದರು.
ಇದರ ಮಧ್ಯೆ ಕಾನೂನು ತಜ್ಞರ ಜತೆ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಆಗಿರುವುದರಿಂದ ಭೂಸ್ವಾಧೀನ ಕೈಬಿಟ್ಟರೆ ಮುಂದಿನ ಕಾನೂನು ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದಿದ್ದರು.
ಶನಿವಾರ ಕೆಲ ರೈತ ಮುಖಂಡರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ 449 ಭೂಮಿ ಕೊಡುವುದಾಗಿ ತಿಳಿಸಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ರೈತ ಹೋರಾಟಗಾರರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರುವ ರೈತರ ಭೂಮಿ ಸರ್ಕಾರ ಹೊರಡಿಸಿರುವ ಭೂಸ್ವಾಧೀನ ಅಧಿಸೂಚನೆಯಲ್ಲಿಲ್ಲ. ಸರ್ಕಾರ ರೈತರ ನಡುವೆ ಬಿರುಕು ಸೃಷ್ಠಿಸುವ ಕೆಲಸ ಮಾಡುತ್ತಿದೆ. 1200 ದಿನಗಳಿಂದ ಹೋರಾಟ ಮಾಡುತ್ತಿದ್ದ ನಮಗೆ ಮುಖ್ಯಮಂತ್ರಿ ಸಮಯ ನೀಡಿರಲಿಲ್ಲ. ಒಂದೇ ದಿನದಲ್ಲಿ ಹುಟ್ಟಿಕೊಂಡ ನಕಲಿ ರೈತರ ಭೇಟಿಗೆ ಅವಕಾಶ ನೀಡಿರುವುದರಲ್ಲೇ ಸರ್ಕಾರದ ಷಡ್ಯಂತ್ರ್ಯ ಕಾಣುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದರು.
ಮಂಗಳವಾರ(ಜು.15) ವಿಧಾನಸೌಧದಲ್ಲಿ ರೈತರು ಹಾಗೂ ರೈತ ಮುಖಂಡರ ಜತೆ ಸಭೆ ನಡೆಸಿ ಸಿಎಂ ಸಿದ್ದರಾಮಯ್ಯ ತೀರ್ಮಾನ ಪ್ರಕಟಿಸಲಿದ್ದಾರೆ. ಸರ್ಕಾರ ಭೂಸ್ವಾಧೀನ ಕೈ ಬಿಡದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸಲು ರೈತರು ನಿರ್ಧರಿಸಿದ್ದಾರೆ.
ಭೂಸ್ವಾಧೀನಕ್ಕೆ ಚಿತ್ರರಂಗ, ಸಾಹಿತಿಗಳಿಂದ ವಿರೋಧ
ದೇವನಹಳ್ಳಿ ಚನ್ನರಾಯಪಟ್ಟಣ ಹೋಬಳಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಹಾಗೂ ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಟರಾದ ಪ್ರಕಾಶ್ ರಾಜ್ ಹಾಗೂ ಕಿಶೋರ್ ರೈತ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತ ಹೋರಾಟಗಾರರ ಸಭೆಯಲ್ಲಿಯೂ ನಟ ಪ್ರಕಾಶ್ ರಾಜ್ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಕೂಡ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದು ಸರ್ಕಾರ ಭೂಸ್ವಾಧೀನ ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ತಿಳಿಸಿದ್ದರು.
ಸಭೆಯ ಸಾಧ್ಯತೆಗಳು
ಸರ್ಕಾರ ಭೂಮಿಗೆ ಹೆಚ್ಚು ಬೆಲೆ ನಿಗದಿ ಮಾಡಿ ರೈತರ ಮನವೊಲಿಕೆಗೆ ಯತ್ನಿಸಲಿದೆ. ಭೂಮಿಗೆ ಪರಿಹಾರದ ಜತೆಗೆ ಕುಟುಂಬದವರಿಗೆ ಉದ್ಯೋಗ ನೀಡುವ ಭರವಸೆ ನೀಡಲಾಗುತ್ತದೆ. ರೈತರು ಸರ್ಕಾರದ ನಿರ್ಧಾರಗಳಿಗೆ ಒಪ್ಪದಿದ್ದರೆ ಭೂಸ್ವಾಧೀನ ರದ್ದುಪಡಿಸಬಹುದು. ಇಲ್ಲವೇ ವಿರೋಧ ವ್ಯಕ್ತಪಡಿಸುವ ರೈತರ ಭೂಮಿಯನ್ನು ಬಿಟ್ಟು ಉಳಿದ ಭೂಮಿಯನ್ನು ವಶಪಡಿಸಿಕೊಳ್ಳುವ ಅವಕಾಶ ಸರ್ಕಾರಕ್ಕಿದೆ.