
ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ | ರೈತರಲ್ಲಿ ಬಿರುಕು ಮೂಡಿಸಲು ಸರ್ಕಾರವೇ ರೂಪಿಸಿದ ಷಡ್ಯಂತ್ರ: ಹೋರಾಟಗಾರರ ಆರೋಪ
ರೈತ ಸಂಘಟನೆ ಪ್ರತಿನಿಧಿಗಳು ಎಂದು ಹೇಳಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿರುವವರು ನಿಜವಾದ ಭೂಮಿ ಮಾಲೀಕ ರೈತರಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ 1,777 ಎಕರೆ ಭೂಸ್ವಾಧೀನ ವಿರೋಧಿಸಿ ರೈತರು 1200 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಿಂದ ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಸರ್ಕಾರ, ಅಂತಿಮ ಅಸ್ತ್ರವನ್ನಾಗಿ ಒಡೆದಾಳುವ ನೀತಿ ಬಳಕೆಗೆ ಮುಂದಾಗಿದೆ. ಆ ಮೂಲಕ ರೈತರಲ್ಲೇ ಬಿರುಕು ಮೂಡಿಸುವ ಯತ್ನಕ್ಕೆ ಕೈ ಹಾಕಿದೆ ಎಂದು ಹೋರಾಟದ ಮುಂಚೂಣಿಯಲ್ಲಿರುವ ರೈತ ಮುಖಂಡರೇ ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು 449 ಎಕರೆ ಭೂಮಿ ನೀಡಲು ಸಿದ್ಧ ಎಂದು ಹೇಳಿರುವುದು ಭೂಸ್ವಾಧೀನ ವಿರೋಧಿ ಹೋರಾಟ ವೇದಿಕೆಯ ಮುಖಂಡರ ಆಕ್ರೋಶಕ್ಕೆ ಗುರಿಯಾಗಿದೆ.
ರೈತ ಸಂಘಟನೆ ಪ್ರತಿನಿಧಿಗಳು ಎಂದು ಹೇಳಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿರುವವರು ನಿಜವಾದ ಭೂಮಿ ಮಾಲೀಕ ರೈತರಲ್ಲ, ಬದಲಿಗೆ ದಲ್ಲಾಳಿಗಳು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರ ಬೆಂಬಲಿಗರು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರೇ ಇಂದು ರೈತರ ನಿಯೋಗ ಎಂದು ಹೇಳಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಚನ್ನರಾಯಪಟ್ಟಣ ಹೋಬಳಿಯ ರೈತರ ಒಗ್ಗಟ್ಟು ಮುರಿಯಲು ಸರ್ಕಾರವೇ ಷಡ್ಯಂತ್ರ್ಯ ರೂಪಿಸಿದೆ. ತಮ್ಮ ಬೆಂಬಲಿಗರನ್ನೇ ರೈತರ ನಿಯೋಗವನ್ನಾಗಿ ಸೃಷ್ಟಿಸಿ ಭೂ ಸ್ವಾಧೀನಕ್ಕೆ ತಕರಾರು ಇಲ್ಲ ಎಂದು ಹೇಳಿಸುವ ಪ್ರಯತ್ನ ಮಾಡುತ್ತಿದೆ. ರೈತರು ಕಳೆದ 1200 ದಿನಗಳಿಂದ ಧರಣಿ ನಡೆಸುತ್ತಿದ್ದರೂ ತಮ್ಮ ಭೇಟಿಗೆ ಅವಕಾಶ ನೀಡದ ಮುಖ್ಯಮಂತ್ರಿಗಳು ಈಗ ಒಂದೇ ದಿನದಲ್ಲಿ ಹುಟ್ಟಿಕೊಂಡ ನಕಲಿ ರೈತರ ಭೇಟಿಗೆ ಅವಕಾಶ ನೀಡಿರುವುದರಲ್ಲೇ ಸರ್ಕಾರದ ಷಡ್ಯಂತ್ರ್ಯ ಕಾಣುತ್ತಿದೆ. ಸರ್ಕಾರ ಏನೇ ವಾಮಮಾರ್ಗ ಅನುಸರಿಸಿದರೂ ಒಂದಿಂಚೂ ಭೂಮಿ ಬಿಡುವುದಿಲ್ಲ ಎಂದು ಹೋರಾಟಗಾರರಾದ ಕಾರಹಳ್ಳಿ ಶ್ರೀನಿವಾಸ್, ಪ್ರಮೋದ್, ನಂಜಪ್ಪ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.
ಕಾನೂನು ತಜ್ಞರ ಜತೆ ಸಮಾಲೋಚನೆ
ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ರೈತರ ಒತ್ತಾಯದ ಹಿನ್ನೆಲೆಯಲ್ಲಿ ಶನಿವಾರ (ಜು.12) ಸಂಜೆ ಸಿಎಂ ಸಿದ್ದರಾಮಯ್ಯ ಅವರು ಕಾನೂನು ತಜ್ಞರ ಜತೆ ಸಭೆ ನಡೆಸಲಿದ್ದಾರೆ.
ಏರೋಸ್ಪೇಸ್ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರ ಭೂಸ್ವಾಧೀನಕ್ಕೆ ಮುಂದಾದ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ರೈತರು ಸಾವಿರಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಇತ್ತೀಚೆಗೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಹಿನ್ನಲೆಯಲ್ಲಿ ಕಳೆದ ವಾರ ಪ್ರತಿಭಟನಾಕಾರರು ಮತ್ತು ರೈತ ಮುಖಂಡರ ಜತೆ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ 10 ದಿನಗಳ ಕಾಲ ಸಮಯಾವಕಾಶ ಕೇಳಿದ್ದರು.
ಈಗಾಗಲೇ ಭೂಸ್ವಾಧೀನದ ಬಗ್ಗೆ ಅಂತಿಮ ಅಧಿಸೂಚನೆ ಆಗಿರುವುದರಿಂದ ಭೂಸ್ವಾಧೀನ ಕೈಬಿಟ್ಟರೆ ಏನಾಗಲಿದೆ ಎಂಬುದರ ಬಗ್ಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆಯಲಿದ್ದಾರೆ.
ಇಕ್ಕಟ್ಟಿನಲ್ಲಿ ಸಿಲುಕಿದ ಸಿಎಂ
ಭೂ ಸ್ವಾಧೀನದ ಬಗ್ಗೆ ರೈತರಿಂದ ಈಗಾಗಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅದರ ಜತೆಗೆ ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷದಲ್ಲಿದ್ದಾಗ ಭೂಸ್ವಾಧೀನ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಅವರೇ ಮುಖ್ಯಮಂತ್ರಿಯಾಗಿದ್ದು ಇಕ್ಕಟ್ಟಿನಲ್ಲಿ ಸಿಲುಕಿದ್ದು ರೈತರ ಪರ ತಿರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.