ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ: ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ದೂರು

ಡಿಜಿ- ಐಜಿಪಿ ಅಲೋಕ್‌ ಮೋಹನ್‌ ಅವರಿಗೆ ಬಿಜೆಪಿ ದೂರು ನೀಡಿದ್ದು, ಕಾಂಗ್ರೆಸ್‌ ನಡೆಸಿದ ಪ್ರತಿಭಟನೆ ವೇಳೆ ರಾಜ್ಯಪಾಲರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮುಖಂಡರ ಮೇಲೆ ಜಾತಿ ನಿಂದನೆ ಕಾಯ್ದೆ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕೋರಿದೆ.;

Update: 2024-08-20 13:39 GMT

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್‌ ನಾಯಕರು ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಪೊಲೀಸ್‌ ದೂರು ದಾಖಲಿಸಿದೆ.

ರಾಜ್ಯಪಾಲ ತಾವರ್‌ ಚಂದ್‌ ಗೆಹ್ಲೋಟ್‌ ವಿರುದ್ದ ಕಾಂಗ್ರೆಸ್‌ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರಾದ ಸಚಿವರಾದ ಜಮೀರ್ ಅಹ್ಮದ್ ಖಾನ್, ಸಚಿವ ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಶಾಸಕ ನಂಜೇಗೌಡ ಹಾಗೂ ರಕ್ಷಿತ್ ಶಿವರಾಮ್ ವಿರುದ್ಧ ದೂರು ನೀಡಲಾಗಿದೆ.

ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಚಲವಾದಿ ನಾರಾಯಣಸ್ವಾಮಿ, ಸಿಮೆಂಟ್‌ ಮಂಜು, ಅವಿನಾಶ್‌ ಜಾಧವ್‌, ಮುನಿಸ್ವಾಮಿ ಮತ್ತಿತರ ಪ್ರಮುಖರು ಡಿಜಿ- ಐಜಿಪಿ ಅಲೋಕ್‌ ಮೋಹನ್‌ ಅವರಿಗೆ ದೂರು ನೀಡಿದ್ದು, ಕಾಂಗ್ರೆಸ್‌ ನಡೆಸಿದ ಪ್ರತಿಭಟನೆ ವೇಳೆ ರಾಜ್ಯಪಾಲರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮುಖಂಡರ ಮೇಲೆ ಜಾತಿ ನಿಂದನೆ ಕಾಯ್ದೆ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕೋರಿದ್ದಾರೆ. 

ಬಿಜೆಪಿ ಮುಖಂಡರಾದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ನೇತೃತ್ವದಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠಕದ ಪ್ರಮುಖರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರತ್ಯೇಕ ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ. ದೂರಿನಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ನೀಡಿದ್ದಾರೆ ಎನ್ನಲಾಗಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. 

ನಾಲಾಯಕ್‌ ಎಂದಿದ್ದ ಕೃಷ್ಣಬೈರೇಗೌಡ

ಮುಡಾ ಪ್ರಕರಣದಲ್ಲಿ ಯಾವುದೇ ಕಾನೂನು ನೆಲೆ ಇಲ್ಲದೇ ಇದ್ದರೂ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರು ನಾಲಾಯಕ್‌ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದರು. ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್‌ ಪ್ರತಿಭಟನಾ ಸಮಾವೇಶದಲ್ಲಿ ಅವರು ಈ ಹೇಳಿಕೆ ನೀಡಿದ್ದರು.

ಬಾಂಗ್ಲಾ ಘಟನೆ ನೆನಪಿಸಿದ್ದ ಐವನ್ ಡಿಸೋಜಾ

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ರಾಜ್ಯಪಾಲರು ಕೂಡಲೇ ಹಿಂದಕ್ಕೆ ಹೋಗಬೇಕು. ಇಲ್ಲದೆ ಇದ್ದಲ್ಲಿ ಬಾಂಗ್ಲಾ ದೇಶದಲ್ಲಿ ಏನು ಆಯ್ತೋ ಅದೇ ರೀತಿಯಲ್ಲಿ ರಾಜ್ಯಪಾಲರ ಕಚೇರಿ ಹಾಗೂ ಮನೆಗೆ ನುಗ್ಗುವಂತಹ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಾಗುತ್ತದೆ ಎಂದು ಐವನ್ ಡಿಸೋಜಾ ಎಚ್ಚರಿಕೆ ನೀಡಿದ್ದರು.

ಗಲಾಟೆಯಾದರೆ ನೀವೇ ಹೊಣೆ ಎಂದಿದ್ದ ಜಮೀರ್

ಇನ್ನು ಸಚಿವ ಜಮೀರ್ ಅಹ್ಮದ್ ಖಾನ್ ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ, ಶಾಸಕರು, ಸಚಿವರು ಹಾಗೂ ಎಲ್ಲಾ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಪರವಾಗಿ ಇದ್ದಾರೆ. ಇವತ್ತು ಯಾರದೋ ಮಾತನ್ನು ಕೇಳಿ ಈ ತರಹ ತೀರ್ಮಾನ ತೆಗೆದುಕೊಂಡಿದ್ದೀರಿ. ಏನಾದರೂ ಗಲಾಟೆ ಆಗಿ ಹಲ್ಲೆ ಏನಾದರೂ ಆದರೆ, ರಾಜ್ಯಪಾಲರು ಜವಾಬ್ದಾರಿ ಆಗುತ್ತಾರೆ. ಜನ ಸುಮ್ಮನೆ ಕೂರಲ್ಲ ಎಂದಿದ್ದರು.‌

ಬಾಂಗ್ಲಾ ಪರಿಸ್ಥಿತಿ ಮೋದಿಗೂ ಬರಲಿದೆ ಎಂದ ರಕ್ಷಿತ್

ಇನ್ನು ಕಾಂಗ್ರೆಸ್‌ ಯುವ ನಾಯಕ ರಕ್ಷಿತ್ ಶಿವರಾಮ್ ಅವರು, ಪ್ರಧಾನಿ ಮೋದಿ ಅವರೇ ಒಂದು ವಿಚಾರ ತಿಳಿದುಕೊಳ್ಳಿ. ಬಾಂಗ್ಲಾ ದೇಶದಲ್ಲಿ ಹಾಸಿಗೆ ದಿಂಬು ಹಿಡಿದುಕೊಂಡು ಹೋದ್ರಲ್ಲ, ಆ ಪ್ರಸಂಗ ನಿಮಗೂ ಅತಿ ಶೀಘ್ರದಲ್ಲಿ ಬರಲಿದೆ. ಎಚ್ಚರವಾಗಿರಿ ಎಂದು ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡಿದ್ದರು.

Tags:    

Similar News