Dengue Outbreak | ಅಪಾಯಕಾರಿ ವೈರಸ್ ವಿರುದ್ಧ ಆರೋಗ್ಯ ಇಲಾಖೆಯ ಬರಿಗೈ ಸಮರ

ಡೆಂಗ್ಯೂ ಸೋಂಕು ರಾಜ್ಯಾದ್ಯಂತ ವ್ಯಾಪಕವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ವರಾಂಡ, ನೆಲದ ಮೇಲೂ ಹಾಸಿಗೆ ಹಾಕಿ ಚಿಕಿತ್ಸೆ ಕೊಡುವ ಸ್ಥಿತಿ ನಿರ್ಮಾಣವಾಗಿದೆ. ಆದರೂ ಆರೋಗ್ಯ ಇಲಾಖೆ ಮಾತ್ರ ಈಗಲೂ ಸೋಂಕಿತರ ಅಧಿಕೃತ ಸಂಖ್ಯೆಯನ್ನು ಹತ್ತಕ್ಕೂ ಕಡಿಮೆ ತೋರಿಸುತ್ತಾ ನೆಮ್ಮದಿಯ ನಿದ್ರೆಗೆ ಜಾರಿದೆ!

Update: 2024-06-30 10:52 GMT

ಡೆಂಗ್ಯೂ ಜ್ವರ ಸದ್ಯ ರಾಜ್ಯದಾದ್ಯಂತ ಉಲ್ಬಣಗೊಂಡಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಸೋಂಕಿತರು ತುಂಬಿತುಳುಕುತ್ತಿದ್ದಾರೆ.

ತಾಲೂಕು, ಜಿಲ್ಲಾ ಆಸ್ಪತ್ರೆಗಳಿಂದ ಹಿಡಿದು ಹೈಟೆಕ್ ಆಸ್ಪತ್ರೆಗಳವರೆಗೆ, ಖಾಸಗಿ ಕ್ಲಿನಿಕ್ನಿಂದ ಹಿಡಿದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳವರೆಗೆ ಎಲ್ಲೆಡೆ ಡೆಂಗಿ ಸೋಂಕಿತರಿಂದಲೇ ಆಸ್ಪತ್ರೆಗಳು ತುಂಬಿಹೋಗಿವೆ. ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ಗಳಷ್ಟೇ ಅಲ್ಲದೆ, ವರಾಂಡ, ವಾರ್ಡಿನ ನೆಲದ ಮೇಲೂ ಹಾಸಿಗೆ ಹಾಕಿ ರೋಗಿಗಳನ್ನು ಮಲಗಿಸುವ ಮಟ್ಟಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ರಾಜಧಾನಿ ಬೆಂಗಳೂರಿನಿಂದ ಯಾವುದೋ ಮೂಲೆಯ ತಾಲೂಕು ಆಸ್ಪತ್ರೆಯವರೆಗೆ ಡೆಂಗ್ಯೂ ಜನರ ಆತಂಕಕ್ಕೆ ಕಾರಣವಾಗಿದೆ. ಮಕ್ಕಳು ಮತ್ತು ವಯೋವೃದ್ಧರ ಆರೋಗ್ಯ ಅಪಾಯಕ್ಕೆ ಸಿಲುಕಿದೆ. ಆರೋಗ್ಯ ಇಲಾಖೆ ಆರಂಭದಲ್ಲಿ ಸೋಂಕಿನ ವಿಷಯದಲ್ಲಿ ವಹಿಸಿದ ನಿರ್ಲಕ್ಷ್ಯ ಮತ್ತು ಉದಾಸೀನ ಧೋರಣೆಗಳು ಇದೀಗ ನಾಗರಿಕ ಜೀವಕ್ಕೆ ಕಂಟಕವಾಗಿ ಪರಿಣಮಿಸಿವೆ.

ವಾಸ್ತವ ಪ್ರಕರಣಗಳು ಹತ್ತು ಪಟ್ಟು ಹೆಚ್ಚು!

ಇದೀಗ ರೋಗ ರಾಜ್ಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿದ್ದು, ಸರ್ಕಾರದ ಅಂಕಿಅಂಶಗಳ ಪ್ರಕಾರವೇ ಶಂಕಿತ ಪ್ರಕರಣಗಳು ಒಂದು ಲಕ್ಷಕ್ಕೂ ಹೆಚ್ಚಿವೆ. ದೃಢಪಟ್ಟ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ, ಪರೀಕ್ಷೆಗಳನ್ನು ಸರಿಯಾಗಿ ಮಾಡದೇ ಇರುವುದು ಮತ್ತು ಶಂಕಿತ ಎಲ್ಲಾ ಪ್ರಕರಣಗಳ ರಕ್ತ ಪರೀಕ್ಷೆಯ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಕಟಿಸದೇ ಇರುವುದರಿಂದಾಗಿ ಆರೋಗ್ಯ ಇಲಾಖೆಯ ಅಂಕಿಅಂಶಗಳು ನಂಬಲಾರ್ಹವಲ್ಲ ಎಂಬ ಮಾತುಗಳು ವೈದ್ಯಕೀಯ ವಲಯದಿಂದ ಕೇಳಿಬರುತ್ತಿವೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಸಾಂಕ್ರಾಮಿಕ ರೋಗಗಳ ತಜ್ಞ ವೈದ್ಯರೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ನೀಡಿದ ಮಾಹಿತಿ ಪ್ರಕಾರ, “ಸರ್ಕಾರ ಹೇಳುವ ಸೋಂಕು ಶಂಕಿತರ ಸಂಖ್ಯೆಗಿಂತ ವಾಸ್ತವದಲ್ಲಿ ಹತ್ತು ಪಟ್ಟು ಸೋಂಕಿತರು ರಾಜ್ಯದಲ್ಲಿ ಇದ್ದಾರೆ. ಸರ್ಕಾರ ಖಾಸಗಿ ಕ್ಲಿನಿಕ್, ಆಸ್ಪತ್ರೆಗಳೂ ಸೇರಿದಂತೆ ಎಲ್ಲಾ ಆಸ್ಪತ್ರೆ ಮತ್ತು ಕ್ಲಿನಿಕ್ಗಳಿಂದ ಕೋವಿಡ್ ಸಮಯದಲ್ಲಿ ಪಡೆಯುತ್ತಿದ್ದ ರೀತಿಯಲ್ಲಿ ಎಲ್ಲಾ ಮಾಹಿತಿಯನ್ನು ಪಡೆದುಕೊಂಡರೆ ಡೆಂಗ್ಯೂ ಸೋಂಕಿತರ ಸಂಖ್ಯೆ ಹತ್ತಾರು ಲಕ್ಷಕ್ಕೆ ಏರಿಕೆಯಾಗಲಿದೆ. ಆದರೆ, ಸರ್ಕಾರ ಸೋಂಕನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಮತ್ತೊಂದು ಕಡೆ ಆರೋಗ್ಯ ಇಲಾಖೆ ಕೂಡ ಸೋಂಕಿತರು ಮತ್ತು ಮೃತರ ನಿಜವಾದ ಅಂಕಿಅಂಶಗಳು ಹೊರಬಿದ್ದರೆ ತನ್ನ ವೈಫಲ್ಯ ಬಯಲಾಗಲಿದೆ ಎಂಬ ಆತಂಕದಲ್ಲಿ ಅಂಕಿಅಂಶಗಳನ್ನು ಮುಚ್ಚಿಡುತ್ತಿದೆ”.

“ಬಿಬಿಎಂಪಿ ಆಯುಕ್ತರೂ ಸೇರಿದಂತೆ ಹಲವು ಉನ್ನತ ಅಧಿಕಾರಿಗಳೇ ಈ ಬಾರಿ ಡೆಂಗ್ಯೂ ಸೋಂಕಿಗೆ ಒಳಗಾಗಿದ್ದಾರೆ ಎಂದರೆ ರಾಜ್ಯದಲ್ಲಿ ಸೋಂಕು ಪ್ರಮಾಣ ಯಾವ ಮಟ್ಟಿಗೆ ವ್ಯಾಪಿಸಿದೆ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು” ಎನ್ನುವ ಅವರು, “ಇದೀಗ ರೋಗ ನಿಯಂತ್ರಣದ ಮುಂಜಾಗ್ರತಾ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡರೂ ಸೋಂಕು ಹತೋಟಿಗೆ ತರುವುದು ಸಾಧ್ಯವಿದೆ. ಆದರೆ, ಆ ಕೆಲಸವನ್ನಾದರೂ ಆರೋಗ್ಯ ಇಲಾಖೆ ಪ್ರಾಮಾಣಿಕವಾಗಿ ಮಾಡಬೇಕಿದೆ. ಅದರೊಂದಿಗೆ ನಗರಪಾಲಿಕೆ, ನಗರಸಭೆ, ಪುರಸಭೆ, ಪಂಚಾಯ್ತಿಗಳಂತಹ ಸ್ಥಳೀಯ ಸಂಸ್ಥೆಗಳೂ ಕೈಜೋಡಿಸಬೇಕಿದೆ. ಆದರೆ, ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸಮರೋಪಾದಿಯಲ್ಲಿ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲು ಸಿಬ್ಬಂದಿ ಕೊರತೆ, ಅನುದಾನ ಕೊರತೆಯಂತಹ ಸಾಕಷ್ಟು ಸಮಸ್ಯೆಗಳಿವೆ.. ಹಾಗಾಗಿ ಅಂತಿಮವಾಗಿ ಈಗ ಜನರೇ ಮುನ್ನೆಚ್ಚರಿಕೆ ಮತ್ತು ಜಾಗೃತೆ ವಹಿಸುವುದು ಜೀವ ಉಳಿಸಿಕೊಳ್ಳಲು ಇರುವ ಮಾರ್ಗ “ ಎಂದೂ ಅಭಿಪ್ರಾಯಪಟ್ಟರು.

ಹದಿನಾಲ್ಕು ದಿನಗಳವರೆಗೆ ಸೋಂಕು ಹರಡುತ್ತೆ ಸೊಳ್ಳೆ!

ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆಯ ಮೂಲಕ ಹರಡುವ ಡೆಂಗ್ಯೂ ವೈರಸ್, ಒಮ್ಮೆ ಒಂದು ಸೊಳ್ಳೆ ದೇಹ ಪ್ರವೇಶಿಸಿದರೆ ಆ ಸೊಳ್ಳೆ ಹದಿನಾಲ್ಕು ದಿನಗಳವರೆಗೆ ಜೀವಂತವಿರುತ್ತದೆ. ಆ ಹದಿನಾಲ್ಕು ದಿನಗಳ ಅವಧಿಯಲ್ಲಿ ಆ ಸೊಳ್ಳೆ ಕಚ್ಚುವ ಎಲ್ಲರಿಗೂ ಸೋಂಕು ಹರಡಲಿದೆ. ಹಾಗೇ ಒಬ್ಬ ಮನುಷ್ಯನ ದೇಹದಲ್ಲಿ ವೈರಸ್ ಏಳು ದಿನಗಳ ಕಾಲ ಇರುತ್ತದೆ. ಆ ಅವಧಿಯಲ್ಲಿ ಆ ವ್ಯಕ್ತಿಗೆ ಯಾವುದೇ ಸೊಳ್ಳೆ ಕಚ್ಚಿದರೂ ವೈರಸ್ ಆ ಸೊಳ್ಳೆಯ ದೇಹ ಸೇರುತ್ತದೆ ಮತ್ತು ಆ ಸೊಳ್ಳೆ ಯಾರಿಗೆಲ್ಲಾ ಕಚ್ಚುತ್ತದೆಯೋ ಅವರಿಗೆಲ್ಲಾ ಸೋಂಕು ಹರಡುತ್ತದೆ.


ಹಾಗಾಗಿ, ಸರ್ಕಾರ ಹೇಳುವ ಲಾರ್ವಾ ಸಮೀಕ್ಷೆ, ಫಾಗಿಂಗ್ ಮತ್ತಿತರ ಕ್ರಮಗಳ ಜೊತೆಗೆ ಮನೆಯೊಳಗಿನ ಮುಂಜಾಗ್ರತಾ ಕ್ರಮಗಳೂ ಮುಖ್ಯ. ಸೋಂಕಿತರು ಸೊಳ್ಳೆ ಪರದೆ, ಸೊಳ್ಳೆನಾಶಕ ಓಡೊಮಸ್ನಂತಹ ಕ್ರೀಮ್ ಬಳಸಿ ತಮಗೆ ಸೊಳ್ಳೆ ಕಚ್ಚದಂತೆ ಜಾಗ್ರತೆ ವಹಿಸುವುದು ಕೂಡ ಅಗತ್ಯ. ಆದರೆ, ಸರ್ಕಾರದ ಜೊತೆಗೆ ಈ ಜಾಗೃತಿ ಮೂಡಿಸಲು ಸ್ವಯಂಸೇವಾ ಸಂಸ್ಥೆಗಳೂ, ಸ್ಥಳೀಯ ಸಂಸ್ಥೆಗಳೂ ಕೈಜೋಡಿಸಬೇಕಿದೆ. ಸದ್ಯದ ಸ್ಥಿತಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಬೇಕಾದ ಪ್ರಮಾಣದ ಫಾಗಿಂಗ್ ಯಂತ್ರಗಳೂ ಇಲ್ಲ, ಅವುಗಳಿಗೆ ಬಳಸಲು ಬೇಕಾದ ಸಾಮಗ್ರಿಗಳೂ ಇಲ್ಲ ಎಂಬುದು ಸ್ಥಳೀಯ ಸಂಸ್ಥೆಗಳ ವಾದ.

ಆಸ್ಪತ್ರೆಗಳಲ್ಲಿ ಸೊಳ್ಳೆಪರದೆ ಇಲ್ಲ!

ಇನ್ನು ಡೆಂಗ್ಯೂ ಸೋಂಕಿತರನ್ನು ಸಂಪೂರ್ಣವಾಗಿ ಸೊಳ್ಳೆಪರದೆಯಿಂದ ಸಂರಕ್ಷಿಸುವ ಸುರಕ್ಷಿತ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡುವುದರಿಂದ ಸೋಂಕು ಹರಡುವುದನ್ನು ತಡೆಯಲು ಸಾಧ್ಯ. ಆದರೆ, ಸದ್ಯ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಸೋಂಕಿತರನ್ನು ಇತರೆ ರೋಗಿಗಳ ನಡುವೆಯೇ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಬೆಡ್ಡಿಗೂ ಸೊಳ್ಳೆಪರದೆ ವ್ಯವಸ್ಥೆಯೇ ಇಲ್ಲ. ಹಾಗಾಗಿ ಆಸ್ಪತ್ರೆಗಳೇ ಸೋಂಕು ಹರಡುವ ಕೇಂದ್ರಗಳಾಗಿ, ಡೆಂಗ್ಯೂ ವೈರಸ್ ವಾಹಕಗಳಾಗಿರುವ ದುರಂತ ಪರಿಸ್ಥಿತಿ ಇದೆ.

"ನಮ್ಮ ತಾಲೂಕು ಆಸ್ಪತ್ರೆಯಲ್ಲಿ ಕಳೆದ ಇಪ್ಪತ್ತು ದಿನಗಳಿಂದ ನೂರಕ್ಕೂ ಹೆಚ್ಚು ಮಂದಿ ಡೆಂಗ್ಯೂ ಸೋಂಕಿತರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಆ ಪೈಕಿ ಮೂರ್ನಾಲ್ಕು ದಿನ ಚಿಕಿತ್ಸೆ ಪಡೆದು ಕೆಲವರು ವಾಸಿಯಾಗಿ ಮನೆಗೆ ತೆರಳಿದ್ದರೆ, ಮತ್ತೆ ಕೆಲವರನ್ನು ಪ್ಲೇಟ್‌ಲೆಟ್ಸ್‌ ಪ್ರಮಾಣ ಕನಿಷ್ಟ ಮಟ್ಟಕ್ಕೆ ಏರುತ್ತಲೇ ನಾವೇ ಒತ್ತಾಯಪೂರ್ವಕವಾಗಿ ಡಿಸ್ಚಾರ್ಜ್‌ ಮಾಡಿ ಕಳಿಸಿದ್ದೇವೆ. ಏಕೆಂದರೆ, ದಿನವೂ 25-30 ಮಂದಿ ರೋಗ ಲಕ್ಷಣಗಳೊಂದಿಗೆ ಉಲ್ಬಣ ಸ್ಥಿತಿಯಲ್ಲಿ ಅಡ್ಮಿಟ್‌ ಆಗುತ್ತಿದ್ದಾರೆ. ಹಾಗಾಗಿ ಅವರಿಗಾಗಿ ಬೆಡ್‌ ಖಾಲಿ ಮಾಡಿಸುವುದು ನಮಗೂ ಅನಿವಾರ್ಯ. ಈ ನಡುವೆ, ಸೊಳ್ಳೆಪರದೆ, ಅಗತ್ಯ ಔಷಧಿ, ವೈದ್ಯಕೀಯ ಸಾಮಗ್ರಿ, ಸಿಬ್ಬಂದಿಯ ಕೊರತೆಯ ನಡುವೆ ಅತ್ತ ಜನರಿಂದಲೂ, ಇತ್ತ ಮೇಲಾಧಿಕಾರಿಗಳಿಂದಲೂ ನಿಂದಿಸಿಕೊಳ್ಳುವ ಸ್ಥಿತಿ ನಮ್ಮದು" ಎಂದು ʼದ ಫೆಡರಲ್‌ ಕರ್ನಾಟಕʼದೊಂದಿಗೆ ತಾಲೂಕು ವೈದ್ಯಾಧಿಕಾರಿಯೊಬ್ಬರು(ಹೆಸರು ಬಹಿರಂಗಪಡಿಸಲು ಇಚ್ಛಿಸಿಲ್ಲ) ತಮ್ಮ ಅಸಹಾಯಕತೆ ತೋಡಿಕೊಂಡರು.

ಟೆಸ್ಟಿಂಗ್‌ ಕಿಟ್‌ ಇಲ್ಲ, ಲ್ಯಾಬ್‌ ಇಲ್ಲ!

ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಶಂಕಿತರ ರಕ್ತ ಪರೀಕ್ಷೆಗೆ ನಡೆಸುವ ಆರ್‌ಟಿಪಿಸಿಆರ್‌ ಪರೀಕ್ಷೆಯ ಕಿಟ್‌ಗಳೇ ಇಲ್ಲ. ಖಾಸಗಿ ಲ್ಯಾಬ್‌ ಅಥವಾ ಜಿಲ್ಲಾ ಲ್ಯಾಬ್‌ಗಳಿಗೆ ರೋಗಿಗಳನ್ನು ಕಳಿಸಲಾಗುತ್ತಿದೆ. ಇನ್ನೂ ಕೆಲವು ಕಡೆ ಇಲಾಖೆಯ ಮೇಲಿನ ಒತ್ತಡ ಕಡಿಮೆ ಮಾಡಿಕೊಳ್ಳಲು ವೈದ್ಯರಿಗೆ ರಕ್ತ ಪರೀಕ್ಷೆಗೆ ಶಿಫಾರಸು ಮಾಡದಂತೆ ತಾಲೂಕು ಅಥವಾ ಜಿಲ್ಲಾ ವೈದ್ಯಾಧಿಕಾರಿಗಳೇ ತಾಕೀತು ಮಾಡುತ್ತಿದ್ದಾರೆ. ಹಾಗಾಗಿ ಡೆಂಗ್ಯೂ ಲಕ್ಷಣಗಳಿದ್ದರೂ ಬಹಳಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರಕ್ತ ಪರೀಕ್ಷೆಗೆ ಹೇಳುತ್ತಿಲ್ಲ ಎಂಬ ಗಂಭೀರ ಸಂಗತಿಯನ್ನು ಇಲಾಖೆಯ ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ.

ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಇಲಾಖೆಯ ಜಿಲ್ಲಾ ಮಟ್ಟದ ಸರ್ಕಾರಿ ವೈದ್ಯರೊಬ್ಬರು ಈ ಮಾಹಿತಿಯನ್ನು ನೀಡಿದ್ದು, "ತೀರಾ ಗಂಭೀರ ಪ್ರಕರಣಗಳಿದ್ದಲ್ಲಿ ಮಾತ್ರ ರಕ್ತ ಪರೀಕ್ಷೆಗೆ ಬರೆಯಿರಿ ಎಂದು ನಮಗೆ ಮೇಲಾಧಿಕಾರಿಗಳು ಸೂಚಿಸಿದ್ದಾರೆ. ಆದರೆ, ಬಹುತೇಕ ಸಂದರ್ಭದಲ್ಲಿ ಜನ ವೈದ್ಯರ ಬಳಿ ಬರುವುದೇ ರೋಗ ಉಲ್ಬಣವಾದಾಗ. ಹಾಗಾಗಿ ನಾವು ಯಾರಿಗೆ ರಕ್ತ ಪರೀಕ್ಷೆಗೆ ಶಿಫಾರಸು ಮಾಡುವುದು? ಯಾರಿಗೆ ಬಿಡುವುದು? ಹಾಗೇ ಕೆಲವು ಕಡೆ ಹೆಸರಿಗೆ ಲ್ಯಾಬ್‌ ಇದ್ದರೂ ಅಲ್ಲಿ ಅಗತ್ಯ ಸೌಕರ್ಯ ಮತ್ತು ಸಿಬ್ಬಂದಿಯೂ ಇಲ್ಲ. ಕೋವಿಡ್‌ ವೇಳೆ ಇದ್ದಂತಹ ಸಿದ್ಧತೆಯಾಗಲೀ, ಸೌಕರ್ಯಗಳಾಗಲೀ ಈಗ ಆಸ್ಪತ್ರೆಗಳಲ್ಲಿ ಇಲ್ಲ. ಆದರೆ, ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಪ್ರಮಾಣ ನೋಡಿದರೆ ಭಯವಾಗುತ್ತದೆ" ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಒಟ್ಟಾರೆ, ಡೆಂಗ್ಯೂ ರಾಜ್ಯದ ಮನೆಮನೆಗೂ ಹರಡುತ್ತಿದ್ದರೆ, ಆಸ್ಪತ್ರೆಗಳನ್ನು ಸಜ್ಜುಗೊಳಿಸಿ, ಪ್ರತಿ ಸೋಂಕಿತರಿಗೂ ಸೂಕ್ತ ಚಿಕಿತ್ಸೆ, ತುರ್ತುಬೇಕಾಗುವ ರಕ್ತ, ಔಷಧಿ, ಹೆಚ್ಚುವರಿ ಸಿಬ್ಬಂದಿಯ ವ್ಯವಸ್ಥೆ ಮಾಡಬೇಕಾದ ಆರೋಗ್ಯ ಇಲಾಖೆ, ಈಗಲೂ ಲಾರ್ವಾ ಸಮೀಕ್ಷೆಯ ಹಳಸಲು ಮಾತುಗಳನ್ನು ಆಡುತ್ತಿದೆ. ಅಪಾಯಕಾರಿ ವೈರಸ್ ವಿರುದ್ಧ ಇಲಾಖೆಯ ಈ ಬರಿಗೈ ಸಮರವನ್ನು ನೆಚ್ಚಿಕೊಳ್ಳದೆ ಜನ, ತಮ್ಮ ಜೀವ ಉಳಿಸಿಕೊಳ್ಳುವ ಹೊಣೆಯನ್ನು ತಾವೇ ಹೊರಬೇಕಾದ ದಾರುಣ ಸ್ಥಿತಿ ನಿರ್ಮಾಣವಾಗಿದೆ.

Tags:    

Similar News