ಪುತ್ತೂರಿನಲ್ಲಿ ಸಿಎಂ ಕಾರ್ಯಕ್ರಮದಲ್ಲಿ ನೂಕುನುಗ್ಗಲು: 11ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಸಿಎಂ ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯಿಂದ ನಿರ್ಗಮಿಸುತ್ತಿದ್ದಂತೆಯೇ ಉಡುಗೊರೆಗಳನ್ನು ಪಡೆಯಲು ಜನರು ವೇದಿಕೆಯತ್ತ ಮುಗಿಬಿದ್ದಾಗ ಘಟನೆ ನಡೆದಿದೆ.
ಪುತ್ತೂರಿನಲ್ಲಿ ಸಿಎಂ ಕಾರ್ಯಕ್ರಮದಲ್ಲಿ ನೂಕುನುಗ್ಗಲು
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ತೀವ್ರ ನೂಕುನುಗ್ಗಲು ಉಂಟಾಗಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ತಕ್ಷಣವೇ ಪುತ್ತೂರಿನ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದೀಪಾವಳಿ ಹಬ್ಬದ ಪ್ರಯುಕ್ತ, ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ ಅವರ ರೈ ಎಸ್ಟೇಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ 'ಅಶೋಕ ಜನಮನ 2025' ಹೆಸರಿನಲ್ಲಿ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು.
ಕ್ರೀಡಾಂಗಣದ ಸಾಮರ್ಥ್ಯಕ್ಕಿಂತಲೂ ಸಾವಿರಾರು ಅಧಿಕ ಜನರು ಸೇರಿದ್ದೇ ಈ ಅವಘಡಕ್ಕೆ ಮುಖ್ಯ ಕಾರಣವೆಂದು ತಿಳಿದುಬಂದಿದೆ. ಮುಖ್ಯಮಂತ್ರಿಗಳ ಆಗಮನಕ್ಕಾಗಿ ಜನರು ಗಂಟೆಗಟ್ಟಲೆ ಕಾದಿದ್ದರು. ಭದ್ರತಾ ಕಾರಣಗಳಿಂದಾಗಿ ಪೊಲೀಸರು ನೀರಿನ ಬಾಟಲಿಗಳನ್ನು ಕ್ರೀಡಾಂಗಣದೊಳಗೆ ಕೊಂಡೊಯ್ಯಲು ಅವಕಾಶ ನೀಡದ ಕಾರಣ, ಹಲವರು ಬಿಸಿಲಿನಲ್ಲಿ ನೀರಿಲ್ಲದೆ ಬಳಲಿದ್ದರು. ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯಿಂದ ನಿರ್ಗಮಿಸುತ್ತಿದ್ದಂತೆಯೇ, ಉಡುಗೊರೆಗಳನ್ನು ಪಡೆಯಲು ಜನರು ವೇದಿಕೆಯತ್ತ ಮುಗಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲು ಹಾಗೂ ತಳ್ಳಾಟದಲ್ಲಿ ಸಿಲುಕಿದ ಹಲವರು ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಬಿದ್ದರು.
ಅಸ್ವಸ್ಥಗೊಂಡವರಲ್ಲಿ ಯೋಗಿತಾ (20), ಸಭಾ ಮಾಡಾವು (20), ಆಮೀನಾ (56), ನೇತ್ರಾವತಿ (37), ಲೀಲಾವತಿ (50) ಮತ್ತು ವಸಂತಿ (53) ಸೇರಿದಂತೆ ಇತರರನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಗಿದೆ.