ದೀಪಾವಳಿ ದಿನವೇ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ದುರಂತ: ಮೂರನೇ ಮಹಡಿಯಿಂದ ಬಿದ್ದು ಯುವಕ ಸಾವು
ಮೃತನನ್ನು ಸಾಗರ್ ಎಂದು ಗುರುತಿಸಲಾಗಿದೆ. ಆತ ಎಂಜಿನಿಯರಿಂಗ್ ಓದನ್ನು ಮಧ್ಯದಲ್ಲೇ ನಿಲ್ಲಿಸಿದ್ದು, ನಿರುದ್ಯೋಗಿಯಾಗಿದ್ದನು ಹಾಗೂ ಕೆಲವು ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಿಟಿ ಮಾಲ್
ದೀಪಾವಳಿ ಹಬ್ಬದ ಸಂಭ್ರಮದ ದಿನದಂದೇ ರಾಜಧಾನಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಗರದ ಮಾಗಡಿ ರಸ್ತೆಯಲ್ಲಿರುವ ಜಿಟಿ (GT) ಮಾಲ್‌ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದು 34 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯು ಸೋಮವಾರ, ಅಕ್ಟೋಬರ್ 20 ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಸಂಭವಿಸಿದೆ.
ಮೃತನನ್ನು ಸಾಗರ್ ಎಂದು ಗುರುತಿಸಲಾಗಿದೆ. ಆತ ಎಂಜಿನಿಯರಿಂಗ್ ಓದನ್ನು ಮಧ್ಯದಲ್ಲೇ ನಿಲ್ಲಿಸಿದ್ದು, ನಿರುದ್ಯೋಗಿಯಾಗಿದ್ದನು ಹಾಗೂ ಕೆಲವು ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ವಿವರ
ಮಾಲ್ ತೆರೆದ ಸ್ವಲ್ಪ ಸಮಯದಲ್ಲೇ ಸಾಗರ್ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ತಲೆಗೆ ತೀವ್ರವಾದ ಪೆಟ್ಟು ಬಿದ್ದ ಕಾರಣ, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಮಾಲ್‌ನ ಮಧ್ಯಭಾಗದಲ್ಲಿ ಮೃತದೇಹ ಬಿದ್ದಿದ್ದನ್ನು ಕಂಡ ಸಾರ್ವಜನಿಕರು ಮತ್ತು ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ಈ ದುರಂತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಷಯ ತಿಳಿಯುತ್ತಿದ್ದಂತೆ ಮಾಗಡಿ ರಸ್ತೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನ ದಳ ಮತ್ತು ವಿಧಿವಿಜ್ಞಾನ ತಜ್ಞರ (SOCO) ತಂಡ ಭೇಟಿ ನೀಡಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಇದು ಆಕಸ್ಮಿಕವಾಗಿ ಬಿದ್ದದ್ದಕ್ಕಿಂತ ಹೆಚ್ಚಾಗಿ, ಆತ್ಮಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆಯ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಸುರಕ್ಷತೆಯ ಕಾರಣಕ್ಕಾಗಿ, ಪೊಲೀಸರು ತಕ್ಷಣವೇ ಜಿಟಿ ಮಾಲ್‌ಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ, ಮಾಲ್‌ನ ಗೇಟ್‌ಗಳನ್ನು ಮುಚ್ಚಿಸಿದ್ದಾರೆ.