ಸಂಸದ ಬಿ.ವೈ. ರಾಘವೇಂದ್ರ ʼಹಿಟ್ ಅಂಡ್ ರನ್ʼ ನಾಯಕರಂತಾಗದಿರಲಿ: ಡಿಸಿಎಂ ಡಿಕೆಶಿ
ರಾಜ್ಯದಲ್ಲಿ ಹಲವು ನಾಯಕರು ಆರೋಪಗಳನ್ನು ಮಾಡುತ್ತಾರೆ. ಆದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡುವುದಿಲ್ಲ. ಅಂತಹ ನಾಯಕರಂತೆ ಸಂಸದರು ಸುಳ್ಳಿಗೆ ಮತ್ತೊಂದು ಉದಾಹರಣೆಯಂತಾಗುವುದು ಬೇಡ ಎಂದು ತಿರುಗೇಟು ನೀಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಬಿ.ವೈ. ವಿಜಯೇಂದ್ರ
ಆರೋಪಗಳನ್ನು ಮಾಡಿ ದಾಖಲೆ ನೀಡದೆ ಹೋಡಿಹೋಗುವ ಹಿಟ್ ಅಂಡ್ ರನ್ ನಾಯಕರಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಆಗದಿರಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸೋಮವಾರ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಹಾರ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗುತ್ತಿದ್ದು, ಇದಕ್ಕಾಗಿ ಅಧಿಕಾರಿಗಳಿಗೆ ಕಿರುಕುಳ ಹೆಚ್ಚಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕೇವಲ ಆರೋಪ ಮಾಡದೇ ಅವರ ಬಳಿ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡಿ ಆರೋಪ ಮಾಡಲಿ ಎಂದರು.
ರಾಜ್ಯದಲ್ಲಿ ಹಲವು ನಾಯಕರು ಆರೋಪಗಳನ್ನು ಮಾಡುತ್ತಾರೆ. ಆದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡುವುದಿಲ್ಲ. ಅಂತಹ ನಾಯಕರಂತೆ ಸಂಸದರು ಸುಳ್ಳಿಗೆ ಮತ್ತೊಂದು ಉದಾಹರಣೆಯಂತಾಗುವುದು ಬೇಡ ಎಂದು ತಿರುಗೇಟು ನೀಡಿದರು.
ಸಚಿವ ಖರ್ಗೆಯಿಂದಲೂ ವಿರೋಧ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಣ್ಣೀರು ಹಾಕಿ ಸಿಎಂ ಆಗಲು ಕಪ್ಪ ಕೊಡಬೇಕು ಎಂದು ಹೇಳಿದ್ದರು. ಆಗ ಹೈಕಮಾಂಡ್‌ಗೆ ಹಣ ತಲುಪಿಸಿರಲಿಲ್ಲ ಎಂಬ ಕಾರಣಕ್ಕೆ ಬೇರೊಬ್ಬರನ್ನು ಸಿಎಂ ಮಾಡಲಾಯಿತು. ಆದರೆ ಇದೀಗ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಬಿಹಾರ ಚುನಾವಣೆಗೆ ಕಪ್ಪ ನೀಡಿದ್ದಾರೆ ಎಂದು ನಮ್ಮ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಇವರಿಗೆ ಆಪರೇಷನ್ ಕಮಲಕ್ಕೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದರು.
ಪ್ರತಿಪಕ್ಷಗಳಿಂದ ಹಲವು ಬಾರಿ ಆರೋಪ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಹಾರ ಚುನಾವಣೆಗೆ ಹಣ ಕಳುಹಿಸಲು ಮಂತ್ರಿಗಳಿಗೆ ಟಾರ್ಗೆಟ್ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ ಸಹ ಸಿಎಂ ಸಚಿವರೊಂದಿಗೆ ಇತ್ತೀಚೆಗೆ ಭೋಜನಕೂಟ ಕರೆದು ಬಿಹಾರ ಚುನಾವಣೆಗೆ ನೀಡಲು ದೇಣಿಗೆ ಕುರಿತು ಚರ್ಚಿಸಿದ್ದಾರೆ ಎಂದು ಆರೋಪಿಸಿದ್ದರು.
ಜಾಗರೂಕತೆಯಿಂದ ಪಟಾಕಿ ಸಿಡಿಸಿ
"ಈಗಾಗಲೇ ಸಣ್ಣಪುಟ್ಟ ಅವಘಡಗಳ ಸುದ್ದಿ ಕೇಳಿಬರುತ್ತಿವೆ. ಹಬ್ಬದ ಸಂಭ್ರಮದಲ್ಲಿರುವ ಜನತೆ ಆದಷ್ಟು ಜಾಗರೂಕತೆಯಿಂದ ಪಟಾಕಿ ಸಿಡಿಸಬೇಕು. ಹಸಿರ ಪಟಾಕಿಯನ್ನು ಮಾತ್ರ ಬಳಸಬೇಕು. ಯಾವುದೇ ಸಿಡಿಮದ್ದುಗಳನ್ನು ಸಿಡಿಸುವ ಸಂದರ್ಭದಲ್ಲಿಯೂ ಎಚ್ಚರವಿರಲಿ. ಈ ವರ್ಷ ರಾಜ್ಯದಲ್ಲಿ ಉತ್ತಮವಾಗಿ ಮಳೆ ಬಂದಿದ್ದು, ಸಮೃದ್ಧಿಯಾಗಿ ಬೆಳೆಯಾಗಿದೆ. ಪ್ರತಿವರ್ಷವೂ ಸಮೃದ್ಧಿಯಾಗಿರಲಿ" ಎಂದು ರಾಜ್ಯದ ಜನತೆಗೆ ಶುಭ ಕೋರಿದರು.