ನಮ್ಮ ಮೆಟ್ರೊಗೆ 14 ವರ್ಷ; ಕೋಟಿ ಜನರ ವಿಶ್ವಾಸದ ಗೆದ್ದ ನಗರ ಸಂಪರ್ಕ ಸಾರಿಗೆ
ಈ ಮಹತ್ವದ ಮೈಲಿಗಲ್ಲನ್ನು ಸ್ಮರಿಸಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಮೆಟ್ರೊವನ್ನು 'ಬೆಂಗಳೂರಿನ ಅಭಿವೃದ್ಧಿಯ 'ಗೇಮ್ ಚೇಂಜರ್' ಎಂದು ಬಣ್ಣಿಸಿ, ಅದರ 14 ವರ್ಷಗಳ ಕ್ರಾಂತಿಕಾರಿ ಯಾನವನ್ನು ಕೊಂಡಾಡಿದ್ದಾರೆ.
ನಮ್ಮ ಮೆಟ್ರೋ
ಒಂದು ಕಾಲದಲ್ಲಿ ಕೇವಲ 'ಉದ್ಯಾನ ನಗರಿ'ಯಾಗಿದ್ದ ಬೆಂಗಳೂರು, ಇಂದು 'ಸಿಲಿಕಾನ್ ಸಿಟಿ'ಯಾಗಿ ಬೆಳೆದಂತೆ, ಅದರ ಹೆಗಲಿಗೆ ಸಂಚಾರ ದಟ್ಟಣೆಯ ಹೊರೆ ಹೆಚ್ಚಾಗುತ್ತಲೇ ಹೋಯಿತು. ಈ ಸಮಸ್ಯೆಗೆ ಪರಿಹಾರ ತಂದ 'ನಮ್ಮ ಮೆಟ್ರೊ' ರೈಲು ಸೇವೆ ಆರಂಭವಾಗಿ ಅಕ್ಟೋಬರ್ 20ಕ್ಕೆ ಸರಿಯಾಗಿ 14 ವರ್ಷಗಳು ಪೂರ್ಣಗೊಂಡಿವೆ. ಕೇವಲ 6.7 ಕಿಲೋಮೀಟರ್‌ನ ಒಂದು ಸಣ್ಣ ಮಾರ್ಗದಿಂದ ಆರಂಭವಾದ ಈ ಪಯಣ, ಇಂದು 96 ಕಿಲೋಮೀಟರ್‌ಗಳ ಬೃಹತ್ ಜಾಲವಾಗಿ ಬೆಳೆದು ನಿಂತು, ದಿನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ.
ಈ ಮಹತ್ವದ ಮೈಲಿಗಲ್ಲನ್ನು ಸ್ಮರಿಸಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಮೆಟ್ರೊವನ್ನು 'ಬೆಂಗಳೂರಿನ ಅಭಿವೃದ್ಧಿಯ 'ಗೇಮ್ ಚೇಂಜರ್' ಎಂದು ಬಣ್ಣಿಸಿ, ಅದರ 14 ವರ್ಷಗಳ ಕ್ರಾಂತಿಕಾರಿ ಯಾನವನ್ನು ಕೊಂಡಾಡಿದ್ದಾರೆ.
ಐತಿಹಾಸಿಕ ಪಯಣದ ಆರಂಭ
ನಮ್ಮ ಮೆಟ್ರೊದ ಕಥೆ ಆರಂಭವಾಗಿದ್ದು ಎರಡು ದಶಕಗಳ ಹಿಂದೆ. 2003ರಲ್ಲಿ ಈ ಮಹತ್ವಾಕಾಂಕ್ಷೆಯ ಯೋಜನೆಗೆ ವಿಸ್ತೃತ ಯೋಜನಾ ವರದಿ (DPR) ಸಿದ್ಧಗೊಂಡಿತ್ತು. ಹಲವು ಚರ್ಚೆ, ಸವಾಲುಗಳ ನಂತರ 2006ರಲ್ಲಿ ಕೇಂದ್ರ ಸರ್ಕಾರದಿಂದ ಯೋಜನೆಗೆ ಹಸಿರು ನಿಶಾನೆ ದೊರೆಯಿತು. 2007ರಲ್ಲಿ ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ 'ರೀಚ್-1' ಕಾಮಗಾರಿ ಆರಂಭವಾದಾಗ, ಬೆಂಗಳೂರಿಗರ ಕಣ್ಣಲ್ಲಿ ಹೊಸ ಕನಸು ಚಿಗುರೊಡೆದಿತ್ತು.
ನಾಲ್ಕು ವರ್ಷಗಳ ಸತತ ಪರಿಶ್ರಮದ ನಂತರ, 2011ರ ಅಕ್ಟೋಬರ್ 20, ಬೆಂಗಳೂರಿನ ಪಾಲಿಗೆ ಒಂದು ಐತಿಹಾಸಿಕ ದಿನ. ಅಂದು, ನೇರಳೆ ಮಾರ್ಗದ (Purple Line) ಮೊದಲ ಹಂತವು ಸಾರ್ವಜನಿಕರ ಸೇವೆಗೆ ಮುಕ್ತವಾಯಿತು. ನಗರದ ಪೂರ್ವ ತುದಿಯ ಬೈಯಪ್ಪನಹಳ್ಳಿಯಿಂದ ಹೃದಯ ಭಾಗದ ಎಂ.ಜಿ. ರಸ್ತೆಯವರೆಗೆ ಚಲಿಸಿದ ಮೊದಲ ಮೆಟ್ರೊ ರೈಲು ಭರವಸೆ ಮೂಡಿಸಿತ್ತು.
ಜಾಲದ ವಿಸ್ತರಣೆ: ಮೈಲಿಗಲ್ಲುಗಳ ಹಾದಿ
ಮೊದಲ 6.7 ಕಿ.ಮೀ ಪಯಣದ ನಂತರ, ನಮ್ಮಮೆಟ್ರೊ ನಿಧಾನವಾಗಿ ಆದರೆ ದೃಢವಾಗಿ ತನ್ನ ಜಾಲವನ್ನು ವಿಸ್ತರಿಸುತ್ತಾ ಸಾಗಿತು. ನಂತರದಲ್ಲಿ, ನಗರದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಹಸಿರು ಮಾರ್ಗದ ಕಾಮಗಾರಿ ಆರಂಭವಾಗಿ, ಹಂತ ಹಂತವಾಗಿ ಸಂಪೂರ್ಣ ಮಾರ್ಗವು (ನಾಗಸಂದ್ರದಿಂದ ರೇಷ್ಮೆ ಸಂಸ್ಥೆಯವರೆಗೆ) ಸಾರ್ವಜನಿಕರ ಬಳಕೆಗೆ ಲಭ್ಯವಾಯಿತು.
ನೇರಳೆ ಮತ್ತು ಹಸಿರು ಮಾರ್ಗಗಳು ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದಾಗ, ಬೆಂಗಳೂರಿನ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ಗಳು ಸಂಪರ್ಕಗೊಂಡವು. ಇದು ಮೆಜೆಸ್ಟಿಕ್‌ನ ಕೆಂಪೇಗೌಡ ಇಂಟರ್‌ಚೇಂಜ್ ನಿಲ್ದಾಣವನ್ನು ನಗರದ ಪ್ರಮುಖ ಸಾರಿಗೆ ಕೇಂದ್ರವನ್ನಾಗಿ ಪರಿವರ್ತಿಸಿತು.
ಪ್ರಸ್ತುತ, ಎರಡನೇ ಹಂತದ ರೈಲುಗಳು ಓಡಾಟ ಶುರುವಾಗಿದೆ. ಇದರಲ್ಲಿ ಮೈಸೂರು ರಸ್ತೆಯಿಂದ ಚಲ್ಲಘಟ್ಟದವರೆಗೆ, ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ಸಾಗಿದೆ. ಹೊಸ ಮಾರ್ಗಗಳಾದ ಹಳದಿ ಮಾರ್ಗ (ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೂ ರೈಲುಗಳು ಸಂಚರಿಸುತ್ತಿವೆ. ಗುಲಾಬಿ ಮಾರ್ಗ (ಕಾಳೇನ ಅಗ್ರಹಾರದಿಂದ ನಾಗವಾರ), ಮತ್ತು ಬಹುನಿರೀಕ್ಷಿತ ನೀಲಿ ಮಾರ್ಗ (ಕೆ.ಆರ್. ಪುರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ) ಮಾರ್ಗಗಳ ಕಾಮಗಾರಿಗಳು ನಡೆಯುತ್ತಿವೆ.
ಈ ಎಲ್ಲಾ ವಿಸ್ತರಣೆಗಳ ಪರಿಣಾಮವಾಗಿ, ಆರಂಭದ 6.7 ಕಿ.ಮೀ ನಿಂದ ಇಂದು 96 ಕಿ.ಮೀ ಗಡಿ ದಾಟಿ, ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯಕ್ಕೆ ನಮ್ಮ ಮೆಟ್ರೊ ಬೆಳೆದಿದೆ.
ಬೆಂಗಳೂರಿನ ಮೇಲಾದ ಪರಿಣಾಮ
ನಮ್ಮ ಮೆಟ್ರೊ ಬೆಂಗಳೂರಿನ ಜನರ ಜೀವನಶೈಲಿಯನ್ನೇ ಬದಲಿಸಿದೆ. ಎಂ.ಜಿ. ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆಯಂತಹ ಪ್ರಮುಖ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮೆಟ್ರೊ ಪ್ರಮುಖ ಪಾತ್ರ ವಹಿಸಿದೆ. ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿ ಹಾಕಿಕೊಳ್ಳುತ್ತಿದ್ದ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾಮಾನ್ಯ ಜನರಿಗೆ ಮೆಟ್ರೊ ಒಂದು ವರದಾನವಾಗಿದೆ. ಇದು ಸಮಯ ಮತ್ತು ಇಂಧನ ವೆಚ್ಚ ಎರಡನ್ನೂ ಉಳಿಸಿದೆ. ಕಡಿಮೆ ಮಾಲಿನ್ಯವನ್ನು ಉಂಟುಮಾಡುವ ಮೂಲಕ, ನಮ್ಮ ಮೆಟ್ರೊ ಬೆಂಗಳೂರಿನ ಪರಿಸರ ಸಂರಕ್ಷಣೆಗೂ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL), ಈ 14 ವರ್ಷಗಳ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬ ಪ್ರಯಾಣಿಕರಿಗೂ ಧನ್ಯವಾದ ಸಲ್ಲಿಸಿದೆ. ಜನರ ಸಹಕಾರವಿಲ್ಲದೆ ಈ ಯಶಸ್ಸು ಸಾಧ್ಯವಿರಲಿಲ್ಲ ಎಂಬುದನ್ನು ಅದು ಟ್ವೀಟ್ ಮೂಲಕ ಸ್ಮರಿಸಿದೆ