ರಾಜ್ಯದಲ್ಲಿ 5,374 ಡೆಂಗ್ಯೂ ಪ್ರಕರಣ ದೃಢ| ಸಿಎಂ ಸಿದ್ದರಾಮಯ್ಯ ತುರ್ತು ಸಭೆ, ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಮವಾರದ ವರೆಗೆ ರಾಜ್ಯದಲ್ಲಿ 5,374 ಡೆಂಗ್ಯೂ ಪ್ರಕರಣ ದೃಢಪಟ್ಟಿದ್ದು, 5 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ, ಡೆಂಗ್ಯೂ ಸೋಂಕು ಹರಡುವುದನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Update: 2024-06-25 13:14 GMT
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ತುರ್ತು ಸಭೆ ನಡೆಸಲಾಯಿತು. ರಾಜ್ಯದಲ್ಲಿ ಸೋಮವಾರದ (ಜೂನ್ 25) ವರೆಗೆ ಒಟ್ಟು 5,374 ಡೆಂಗ್ಯೂ ಪ್ರಕರಣ ದೃಢಪಟ್ಟಿದ್ದು, ಡೆಂಗ್ಯೂ ಸೋಂಕಿನಿಂದ ಇಲ್ಲಿಯವರೆಗೆ 5 ಜನ ಸಾವನ್ನಪ್ಪಿದ್ದಾರೆ.

ಮರಣ ಪ್ರಮಾಣ ಹೆಚ್ಚಳ: ಎಚ್ಚರಿಕೆ 

ಕೇಂದ್ರ ಸರ್ಕಾರವು ಡೆಂಗ್ಯೂ ಪ್ರಕರಣಗಳಲ್ಲಿ (Case fatality rate) ಸಾವಿನ ಪ್ರಮಾಣ ಶೇ. 0.5ರಷ್ಟು ಮೀರಿವಂತಿಲ್ಲ ಎಂದು ನಿಗದಿ ಮಾಡಿದೆ. ಆದರೆ, ಕರ್ನಾಟಕದಲ್ಲಿ ಡೆಂಗ್ಯೂ ಸಾವಿನ ಪ್ರಮಾಣವು 0.09% ತಲುಪಿದ್ದು, ಅಗತ್ಯ ಮುಂಜಾಗ್ರತಾ ಕ್ರಮವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದಾರೆ.

ಡೆಂಗ್ಯೂ ಸೋಂಕು ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ಸೋಂಕು ಚಿಕಿತ್ಸೆಗೆ ಅವಶ್ಯವಿರುವ ಔಷಧಿ, ಚುಚ್ವುಮದ್ದು, ಪ್ಲೇಟ್‌ಲೆಟ್ಸ್‌ಗಳ ಸಂಗ್ರಹ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಯಾವ ಭಾಗದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ

ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಜಿಲ್ಲೆಗಳಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ಬೆಂಗಳೂರಿನ ನಂತರ ಚಿಕ್ಕಮಗಳೂರು, ಮೈಸೂರು, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಬೆಂಗಳೂರಿನಲ್ಲೇ (ಬಿಬಿಎಂಪಿ ವ್ಯಾಪ್ತಿಯಲ್ಲಿ) 1,230 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಹಾಗೂ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಲ್ಲದೇ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯಗಳು, ಔಷಧಿಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು, ಎನ್.ಎಸ್.ಎಸ್. ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವಿಭಾಗದ ಸ್ವಯಂ ಸೇವಕರ ನೆರವಿನೊಂದಿಗೆ ಮನೆ - ಮನೆ ಸಮೀಕ್ಷೆ ನಡೆಸಿ, ಡೆಂಗ್ಯೂ ಕುರಿತು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ್ದಾರೆ.

ಪ್ರತಿ ವಾರ ಸಭೆ ನಡೆಸಲು ಸೂಚನೆ

ವಾರದ ಪ್ರತಿ ಶುಕ್ರವಾರ ಡೆಂಗ್ಯೂ ರೋಗ ಹರಡುವ ಮೂಲವನ್ನು ಪತ್ತೆ ಮಾಡಿ, ಅದನ್ನು ನಾಶಪಡಿಸಬೇಕು ಎಂದು ಸೂಚಿಸಲಾಗಿದೆ. ಪ್ರತಿ ವಾರ ಬಿಬಿಎಂಪಿ, ನಗರಾಭಿವೃದ್ಧಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಡೆಂಗ್ಯೂ ನಿಯಂತ್ರಣ ಕುರಿತು ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಇನ್ನು ಸ್ವಚ್ಛತೆ ಹಾಗೂ ನೀರು ನಿಲ್ಲದಂತೆ ನಗರ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಬಿಬಿಎಂಪಿ ಆಡಳಿತಾಧಿಕಾರಿ ಎಸ್. ಉಮಾಶಂಕರ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮುಖ್ಯಮಂತ್ರಿ ಕಾರ್ಯದರ್ಶಿ ಡಾ. ಕೆ.ವಿ.ತ್ರಿಲೋಕಚಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತಾ ಹಾಗೂ ಆಯುಕ್ತ ಡಿ.ರಂದೀಪ್ ಇದ್ದರು. 

Tags:    

Similar News