ಡೆಂಗ್ಯೂ ಭೀತಿ | ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 2,877 ಪ್ರಕರಣ ವರದಿ!

ಕಳೆದ ವರ್ಷ ಇದೇ ಅವಧಿಯಲ್ಲಿ 1,725 ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.;

Update: 2024-05-17 14:20 GMT

ರಾಜ್ಯದಲ್ಲಿ ವರುಣರಾಯನ ಆಗಮನವಾಗಿದ್ದು, ಇದರ ಬೆನ್ನಲ್ಲೇ ಇದೀಗ ಡೆಂಗ್ಯೂ ಭೀತಿ ಶುರುವಾಗಿದೆ.

ರಾಜ್ಯದಲ್ಲಿ ಮೇ 13ರವರೆಗೆ ಒಟ್ಟು 2,877 ಪ್ರಕರಣ ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,725 ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಮೇ 1 ರಿಂದ 13ನೇ ವರೆಗಿನ ಒಟ್ಟು 172 ಡೆಂಗ್ಯೂ ಜ್ವರದ ವರದಿಯಾಗಿದ್ದು, ಇನ್ನಷ್ಟು ಉಲ್ಬಣವಾಗುವ ಲಕ್ಷಣಗಳು ಕಾಣುತ್ತಿವೆ. ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳು ಹೆಚ್ಚಾಗುತ್ತಿವೆ. ಇದರಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಡೆಂಗ್ಯೂ ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಮೇ 1 ರಿಂದ 13ನೇ ವರೆಗಿನ ಡೆಂಗ್ಯೂ ವರದಿ

ಬೊಮ್ಮನಹಳ್ಳಿಯಲ್ಲಿ 23, ಪೂರ್ವ ವಲಯದಲ್ಲಿ 41, ಮಹದೇವಪುರದಲ್ಲಿ 44, ಆರ್.ಆರ್ ನಗರದಲ್ಲಿ 08, ದಕ್ಷಿಣ ವಲಯದಲ್ಲಿ 34, ಪಶ್ಚಿಮ ವಲಯದಲ್ಲಿ 16, ಯಲಹಂಕದಲ್ಲಿ 06 ಸೇರಿದಂತೆ ಒಟ್ಟು 172 ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್, ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಲ್ಲಿ ಸೊಳ್ಳೆ ನಿಯಂತ್ರಣ ಕುರಿತು ಅರಿವು ಮೂಡಿಸುವ ಹಾಗೂ ಔಷಧಿ ಸಿಂಪಡಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಮಳೆ ಬಂದಾಗ ನೀರು ಸಂಗ್ರಹವಾಗಿ ಸೊಳ್ಳೆಗಳ ಸಂತತಿ ಹೆಚ್ವಾಗಲಿದ್ದು, ಅದನ್ನು ಫಾಗಿಂಗ್ ಮತ್ತು ಔಷಧಿ ಸಿಂಪಡಿಸುವ ಮೂಲಕ ತಡೆಯಬೇಕು. ಹೂವಿನ ಕುಂಡ, ಬೀಸಾಕಿದ ಟೈರ್, ನೀರು ಸಂಗ್ರಹಿಸುವ ತೊಟ್ಟಿ, ನೀರಿನ ಬಾಟಲ್ ಸೇರಿದಂತೆ ಇನ್ನಿತರೆಡೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಸಂಬಂಧ ಅಂತಹ ಜಾಗದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆಯಾ ವಲಯದ ವಾರ್ಡ್ ಮಟ್ಟದಲ್ಲಿ ಒಂದು ವಾರ್ಡ್ ಗೆ ಔಷಧಿ ಸಿಂಪಡಣೆ ಮಾಡುವ 4 ತಂಡಗಳನ್ನು ನಿಯೋಜನೆ ಮಾಡಿದ್ದು, ತಾತ್ಕಾಲಿಕವಾಗಿ ನೀರು ನಿಲ್ಲುವ ಸ್ಥಳ ಹಾಗೂ ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಫಾಗಿಂಗ್ ಮತ್ತು ಔಷಧಿ ಸಿಂಪಡಣೆ ಮಾಡಲಾಗುತ್ತದೆ ಎಂದು ಹೇಳಿದರು.

Tags:    

Similar News