ವಿಜಯಪುರದಲ್ಲಿ ಭೀಕರ ಜೋಡಿ ಕೊಲೆ: ಹಳೆ ದ್ವೇಷಕ್ಕೆ ಕಲ್ಲಿನಿಂದ ಜಜ್ಜಿ ಇಬ್ಬರು ಯುವಕರ ಬರ್ಬರ ಹತ್ಯೆ
ಕನ್ನೂರು ಗ್ರಾಮದ ಹೊರವಲಯದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ದುಷ್ಕರ್ಮಿಗಳು ಇವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ವಿಜಯಪುರದಲ್ಲಿ ಭೀಕರ ಜೋಡಿ ಕೊಲೆ
ಹಳೇ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯು ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಸಾಗರ್ ಬೆಳುಂಡಗಿ (25) ಮತ್ತು ಇಸಾಕ್ ಖುರೇಶಿ (24) ಎಂದು ಗುರುತಿಸಲಾಗಿದೆ. ಕನ್ನೂರು ಗ್ರಾಮದ ಹೊರವಲಯದಲ್ಲಿ ಈ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ದುಷ್ಕರ್ಮಿಗಳು ಇವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು ಎರಡು ವರ್ಷಗಳ ಹಿಂದೆ, ಇದೇ ಗ್ರಾಮದ ಈರಣ್ಣಗೌಡ ಎಂಬುವವರ ಮೇಲೆ ಕೊಲೆಯಾದ ಸಾಗರ್ ಮತ್ತು ಇಸಾಕ್ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಈರಣ್ಣಗೌಡ, ಕೆಲವು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು, ಈರಣ್ಣಗೌಡರ ಕಡೆಯವರು ಈ ಜೋಡಿ ಕೊಲೆಯನ್ನು ಮಾಡಿದ್ದಾರೆ ಎಂದು ಪೊಲೀಸರು ಬಲವಾಗಿ ಸಂಶಯ ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ. ವಿಜಯಪುರ ಗ್ರಾಮೀDಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆಯು ಕನ್ನೂರು ಗ್ರಾಮದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.