'ನವೆಂಬರ್ ಕ್ರಾಂತಿ' ಗುಸುಗುಸು ನಡುವೆ ಸಿಎಂ ಸಿದ್ದರಾಮಯ್ಯರಿಂದ ಡಿನ್ನರ್ ಪಾಲಿಟಿಕ್ಸ್?
ರಾಜ್ಯ ಕಾಂಗ್ರೆಸ್ ಸರ್ಕಾರವು ಎರಡೂವರೆ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ, ಈ ಔತಣಕೂಟವನ್ನು ಕರೆಯಲಾಗಿದೆ. ಇದು ಕೇವಲ ಔಪಚಾರಿಕ ಭೋಜನಕೂಟವೇ ಅಥವಾ ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಅಡಗಿವೆಯೇ ಎಂಬ ಚರ್ಚೆಗಳು ಜೋರಾಗಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯ ರಾಜಕೀಯದಲ್ಲಿ "ನವೆಂಬರ್ ಕ್ರಾಂತಿ", "ನಾಯಕತ್ವ ಬದಲಾವಣೆ" ಮತ್ತು "ಸಂಪುಟ ಪುನಾರಚನೆ"ಯಂತಹ ಮಾತುಗಳು ಬಿರುಗಾಳಿಯಂತೆ ಸುತ್ತುತ್ತಿರುವ ಹೊತ್ತಿನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಸೋಮವಾರ) ರಾತ್ರಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ದಿಢೀರ್ ಔತಣಕೂಟ ಏರ್ಪಡಿಸಿದ್ದಾರೆ. ಈ 'ಡಿನ್ನರ್ ಮೀಟಿಂಗ್' ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮತ್ತು ಸಂಚಲನವನ್ನು ಸೃಷ್ಟಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಎರಡೂವರೆ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ, ಈ ಔತಣಕೂಟವನ್ನು ಕರೆಯಲಾಗಿದೆ. ಇದು ಕೇವಲ ಔಪಚಾರಿಕ ಭೋಜನಕೂಟವೇ ಅಥವಾ ಇದರ ಹಿಂದೆ ರಾಜಕೀಯ ಲೆಕ್ಕಾಚಾರಗಳು ಅಡಗಿವೆಯೇ ಎಂಬ ಚರ್ಚೆಗಳು ಜೋರಾಗಿವೆ. ನಿಷ್ಕ್ರಿಯ ಸಚಿವರು ಮತ್ತು ಭ್ರಷ್ಟಾಚಾರದ ಆರೋಪ ಹೊತ್ತಿರುವ ಸುಮಾರು ಒಂದು ಡಜನ್‌ಗೂ ಹೆಚ್ಚು ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ ಎನ್ನಲಾಗಿದೆ.
ಬದಲಾವಣೆ ಕೂಗು ಜೋರು
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರಿಂದ ನಾಯಕತ್ವ ಬದಲಾವಣೆಯ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, "ತಾವೇ ಪೂರ್ಣಾವಧಿ ಮುಖ್ಯಮಂತ್ರಿ" ಎಂಬ ಸ್ಪಷ್ಟ ಸಂದೇಶವನ್ನು ಸಿಎಂ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ನೀಡುವ ಸಾಧ್ಯತೆಯಿದೆ. ಅಲ್ಲದೆ, ಗುತ್ತಿಗೆದಾರರ ಕಮಿಷನ್ ಆರೋಪ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ, ಮತ್ತು ಪ್ರತಿಪಕ್ಷಗಳ (ವಿಶೇಷವಾಗಿ ಬಿಜೆಪಿ) ಆರೋಪಗಳನ್ನು ಒಗ್ಗಟ್ಟಿನಿಂದ ಎದುರಿಸುವ ಕುರಿತು ಸಮಾಲೋಚನೆ ನಡೆಯುವ ನಿರೀಕ್ಷೆಯಿದೆ.
ಇಂದು ರಾತ್ರಿ 7 ಗಂಟೆಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ನಡೆಯಲಿರುವ ಈ ಔತಣಕೂಟದತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಸಭೆಯ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ರಾಜಕೀಯ ಯಾವ ತಿರುವು ಪಡೆಯಲಿದೆ? ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ನೀಡುವ ಸಂದೇಶವೇನು? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಈ 'ಡಿನ್ನರ್ ಮೀಟಿಂಗ್' ಮುಂದಿನ ದಿನಗಳ ರಾಜಕೀಯ ಬೆಳವಣಿಗೆಗಳಿಗೆ ದಿಕ್ಸೂಚಿಯಾಗಲಿದೆ ಎಂಬುದಂತೂ ಸತ್ಯ.