ಜಿಬಿಎ ಆಯುಕ್ತರಿಂದ ನಗರ ಪ್ರದಕ್ಷಿಣೆ; ಹೊರ ವರ್ತುಲ ರಸ್ತೆ ಸುಸ್ಥಿತಿಯಲ್ಲಿಡಲು ಸೂಚನೆ

ಬಿಇಎಲ್ ಜಂಕ್ಷನ್‌ನಲ್ಲಿ ರಸ್ತೆ ಮೇಲ್ಮೈ ಹಾಳಾಗಿರುವುದನ್ನು ವೈಟ್ ಟಾಪಿಂಗ್ ಗುತ್ತಿಗೆದಾರರಿಂದಲೇ ಗುಂಡಿ ಮುಚ್ಚಿಸಬೇಕು. ಮತ್ತಿಕೆರೆ ಕಡೆಗೆ ಹೋಗುವ ಭಾಗದಲ್ಲಿ ಪಾದಚಾರಿ ಮಾರ್ಗವನ್ನು ಅಗಲೀಕರಣ ಮಾಡುವಂತೆ ಜಿಬಿಎ ಆಯಕ್ತ ಮಹೇಶ್ವರ್‌ ರಾವ್‌ ತಿಳಿಸಿದರು.

Update: 2025-10-13 11:35 GMT

ಜಿಬಿಎ ಆಯುಕ್ತ ಮಹೇಶ್ವರ್‌ ರಾವ್‌ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

Click the Play button to listen to article

ಬೆಂಗಳೂರಿನ ರಸ್ತೆ ಗುಂಡಿಗಳ ಕುರಿತು ಐಟಿಬಿಟಿ ಉದ್ಯಮಿಗಳು ಹಾಗೂ ಪ್ರತಿಪಕ್ಷಗಳ ಆಕ್ರೋಶದ ಬೆನ್ನಲ್ಲೇ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವತಿಯಿಂದ ರಸ್ತೆ ಗುಂಡಿ ದುರಸ್ತಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ಸೋಮವಾರ ಜಿಬಿಎ ಆಯುಕ್ತ ಮಹೇಶ್ವರರಾವ್‌ ಅವರು ಅಧಿಕಾರಿಗಳೊಂದಿಗೆ ತೆರಳಿ ರಸ್ತೆಗುಂಡಿಗಳ ದುರಸ್ತಿ ಪರಿಶೀಲಿಸಿದರು.

ಈ ವೇಳೆ ಆಯುಕ್ತ ಮಹೇಶ್ವರ್‌ ರಾವ್‌ ಮಾತನಾಡಿ, ಹೆಬ್ಬಾಳ ಜಂಕ್ಷನ್‌ನಿಂದ ನಾಯಂಡಹಳ್ಳಿ ಜಂಕ್ಷನ್‌ವರೆಗಿನ ಹೊರ ವರ್ತುಲ ರಸ್ತೆಯನ್ನು ಸುಸ್ಥಿತಿಯಲ್ಲಿಡುವಂತೆ ಸೂಚನೆ ನೀಡಿದರು. ಹೆಬ್ಬಾಳ ಜಂಕ್ಷನ್ ಕೆಳಭಾಗದಲ್ಲಿ ವೆಟ್ ಮಿಕ್ಸ್ ಹಾಕಲಾಗಿದ್ದು, ತಕ್ಷಣ ಡಾಂಬರೀಕರಣ ಮಾಡಬೇಕು. ಜೊತೆಗೆ, ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಹೈ ರೈಸ್ ಪಾದಚಾರಿ ಕ್ರಾಸಿಂಗ್ ನಿರ್ಮಿಸಲು ತಿಳಿಸಿದರು. 

ಸರ್ವಿಸ್ ರಸ್ತೆ ದುರಸ್ತಿ ಶೀಘ್ರ ಪೂರ್ಣಗೊಳಿಸಿ

ಭದ್ರಪ್ಪ ಲೇಔಟ್ ಮೇಲ್ಸೇತುವೆ ಬಳಿಯ ಸರ್ವಿಸ್ ರಸ್ತೆ ಹಾಳಾಗಿದ್ದು, ಹೈ ಡೆನ್ಸಿಟಿ ಕಾರಿಡಾರ್ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಇದೇ ಸ್ಥಳದಲ್ಲಿ ಕೆ-ರೈಡ್ ವತಿಯಿಂದ ಕಾಮಗಾರಿ ನಡೆಯುತ್ತಿದ್ದು, ಆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಸರ್ವಿಸ್ ರಸ್ತೆಯ ದುರಸ್ಥಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿಡಲು ಹಾಗೂ ನಿರಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಇಎಲ್ ಜಂಕ್ಷನ್ ಅಭಿವೃದ್ಧಿ

ಬಿಇಎಲ್ ಜಂಕ್ಷನ್‌ನಲ್ಲಿ ರಸ್ತೆ ಮೇಲ್ಮೈ ಹಾಳಾಗಿರುವುದನ್ನು ವೈಟ್ ಟಾಪಿಂಗ್ ಗುತ್ತಿಗೆದಾರರಿಂದಲೇ ಗುಂಡಿ ಮುಚ್ಚಿಸಬೇಕು. ಮತ್ತಿಕೆರೆ ಕಡೆಗೆ ಹೋಗುವ ಭಾಗದಲ್ಲಿ ಪಾದಚಾರಿ ಮಾರ್ಗವನ್ನು ಅಗಲೀಕರಣ ಮಾಡುವಂತೆ ತಿಳಿಸಿದರು.

ರಸ್ತೆ ಗುಂಡಿಗಳನ್ನು ಮುಚ್ಚಿ

ಹೊರ ವರ್ತುಲ ರಸ್ತೆಯಲ್ಲಿರುವ ಎಲ್ಲ ಗುಂಡಿಗಳನ್ನು ತಕ್ಷಣ ಮುಚ್ಚಬೇಕು. ರಾಜ್ ಕುಮಾರ್ ಸಮಾಧಿಯಿಂದ ನಾಗರಭಾವಿ ಜಂಕ್ಷನ್‌ವರೆಗಿನ ಸರ್ವಿಸ್ ರಸ್ತೆಗಳಲ್ಲಿರುವ ಗುಂಡಿಗಳನ್ನು ಮತ್ತು ಹಾಳಾದ ಮೇಲ್ಮೈಯನ್ನು ಸರಿಪಡಿಸಲು ಸೂಚಿಸಿದರು. ಗೊರಗುಂಟೆ ಪಾಳ್ಯ ಕೈಗಾರಿಕಾ ಪ್ರದೇಶದ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಅದನ್ನೂ ಶೀಘ್ರ ದುರಸ್ಥಿಪಡಿಸುವಂತೆ ನಿರ್ದೇಶಿಸಿದರು.

ಕಂಠೀರವ ಸ್ಟುಡಿಯೋ ಜಂಕ್ಷನ್‌ನಲ್ಲಿ ಸ್ವಚ್ಛತೆ ಕಾಪಾಡಿ

ಕಂಠೀರವ ಸ್ಟುಡಿಯೋ ಜಂಕ್ಷನ್ ಬಳಿ ಜಲಮಂಡಳಿಯ ಕಾಮಗಾರಿ ನಡೆಯುತ್ತಿದ್ದು ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದನ್ನು ಗಮನಿಸಿ, ಜಲಮಂಡಳಿ ಅಧ್ಯಕ್ಷರಿಗೆ ಸ್ಥಳದಲ್ಲಿಯೇ ಕರೆ ಮಾಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು. ಜಂಕ್ಷನ್‌ನಲ್ಲಿ ತಕ್ಷಣ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಬೇಕು. ಪಾದಚಾರಿ ಮಾರ್ಗ ಸಂಪೂರ್ಣ ಒತ್ತುವರಿಯಾಗಿದ್ದು ಶೀಘ್ರವೇ ಅದನ್ನು ತೆರವುಗೊಳಿಸಬೇಕು. ಟ್ರಾನ್ಸ್ ಫರ್ಮರ್ ಸ್ಥಳಾಂತರಗೊಳ್ಳಬೇಕು. ಪಾದಚಾರಿ ಮಾರ್ಗದಲ್ಲಿ ಕಟ್ಟಡ ಭಗ್ನಾವಶೇಷ ಹಾಕಿರುವುದರಿಂದ, ಮಾಲೀಕರಿಗೆ ನೋಟೀಸ್ ನೀಡಿ ದಂಡ ವಿಧಿಸಲು ಸೂಚಿಸಿದರು.

ಕಸ ವರ್ಗಾವಣೆ ಘಟಕ ಸ್ಥಳಾಂತರಕ್ಕೆ ಸೂಚನೆ

ಸುಮನಹಳ್ಳಿ ಜಂಕ್ಷನ್ ಮೇಲ್ಸೇತುವೆ ಕೆಳಭಾಗದಲ್ಲಿ ಇರುವ ಕಸ ವರ್ಗಾವಣೆ ಘಟಕದಲ್ಲಿ ಸ್ವಚ್ಛತೆ ಕಾಪಾಡಲಾಗುತ್ತಿಲ್ಲ. ಜೊತೆಗೆ ಲೀಚೇಟ್‌ನಿಂದ ದುರ್ವಾಸನೆ ಉಂಟಾಗಿದೆ. ಜೆಟ್ ಸ್ಪ್ರೇಯರ್ ಮೂಲಕ ಸ್ವಚ್ಛಗೊಳಿಸಬೇಕು. ರಾಜಕಾಲುವೆ ಪಕ್ಕದ ಖಾಲಿ ಜಾಗದಲ್ಲಿ ಕಸ ವರ್ಗಾವಣೆಯ ಪರ್ಯಾಯ ವ್ಯವಸ್ಥೆ ಮಾಡಬೇಕು. ಹೊರ ವರ್ತುಲ ರಸ್ತೆಯ ಶ್ರೀನಿವಾಸನಗರ (80 ಅಡಿ ರಸ್ತೆ) ಮುತ್ತುರಾಜ್ ರಸ್ತೆಯಿಂದ ವಿದ್ಯಾಪೀಠ ವೃತ್ತದವರೆಗೆ 1.8 ಕಿ.ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 1 ಕಿ.ಮೀ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಉಳಿದ ಭಾಗವನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು.

Tags:    

Similar News