ತಮಿಳುನಾಡು ಮಾದರಿಯಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗೆ ನಿಯಂತ್ರಣ; ಸಿಎಂ

ಸರ್ಕಾರಿ ಸ್ಥಳಗಳಲ್ಲಿ ಸಂಘಟನೆಯ ಕಾರ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆರ್‌ಎಸ್‌ಎಸ್‌ ಶಾಖೆ, ಬೈಠಕ್‌ ಗಳಿಗೆ ಅನುಮತಿ ನಿರಾಕರಿಸಲಾಗಿದೆ. ಆರಂಭದಲ್ಲಿ ಪಥ ಸಂಚಲನಗಳಿಗೂ ಅವಕಾಶ ನಿರಾಕರಿಸಲಾಗಿತ್ತು.

Update: 2025-10-13 12:04 GMT

ಸಿದ್ದರಾಮಯ್ಯ 

ಆರ್‌ಎಸ್‌ಎಸ್‌ ವಿರುದ್ಧ ತಮಿಳುನಾಡು ಮಾದರಿಯಲ್ಲಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಶಾಖೆ, ಬೈಠಕ್, ಶಿಬಿರಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬರೆದಿದ್ದ ಪತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಸೋಮವಾರ ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ತಮಿಳುನಾಡು ಮಾದರಿಯಲ್ಲಿ ಆರ್‌ಎಸ್‌ಎಸ್‌ ನಿಯಂತ್ರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ತಮಿಳುನಾಡು ಮಾದರಿ ಏನು?

ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಚಟುವಟಿಕೆಗಳಿಗೆ ನಿಯಂತ್ರಣ ಹೇರುವ ಸಲುವಾಗಿ ಅಲ್ಲಿನ ಸರ್ಕಾರ ಕ್ರಮ ಕೈಗೊಂಡಿತ್ತು. ಇದನ್ನು ರಾಜಕೀಯ ವಲಯದಲ್ಲಿ ʼತಮಿಳುನಾಡು ಮಾದರಿʼ ಎಂದೇ ಕರೆಯಲಾಗುತ್ತದೆ.

ಸರ್ಕಾರಿ ಸ್ಥಳಗಳಲ್ಲಿ ಸಂಘಟನೆಯ ಕಾರ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆರ್‌ಎಸ್‌ಎಸ್‌ ಶಾಖೆ, ಬೈಠಕ್‌ ಗಳಿಗೆ ಅನುಮತಿ ನಿರಾಕರಿಸಲಾಗಿದೆ. ಆರಂಭದಲ್ಲಿ ಪಥ ಸಂಚಲನಗಳಿಗೂ ಅವಕಾಶ ನಿರಾಕರಿಸಲಾಗಿತ್ತು. ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಆರ್‌ಎಸ್‌ಎಸ್ ನಾಯಕರು ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ಸುಪ್ರೀಂಕೋರ್ಟ್‌ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಅನುಮತಿ ನೀಡಿತ್ತು. ತಮಿಳುನಾಡಿನ ದ್ರಾವಿಡ ಚಳವಳಿ, ಪೆರಿಯಾರ್ ಪರಂಪರೆ ಮತ್ತು ಎಡಪಂಥಿಯ ಸಂಘಟನೆಗಳು ಆರ್‌ಎಸ್‌ಎಸ್ ಚಟುವಟಿಕೆಗಳನ್ನು ತೀವ್ರವಾಗಿ ವಿರೋಧಿಸಿದ್ದವು.

ಸರ್ಕಾರ ವರ್ಸಸ್‌ ಆರ್‌ಎಸ್‌ಎಸ್‌ ಫೈಟ್

ತಮಿಳುನಾಡಿನಲ್ಲಿ ಕಳೆದ ಮೂರು ವರ್ಷಗಳಿಂದ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಆರ್‌ಎಸ್‌ಎಸ್ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತ್ತು. ಪಥ ಸಂಚಲನ ಹಾಗೂ ಸಂಘದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿತ್ತು.

ಕಾನೂನು ಸುವ್ಯವಸ್ಥೆಯ ಹಾಳಾಗುವ ಹಾಗೂ ಕೋಮು ಸೌಹಾರ್ದತೆಗೆ ಭಂಗ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿತ್ತು. ಆರಂಭದಲ್ಲಿ ಸರ್ಕಾರದ ಕ್ರಮದ ವಿರುದ್ಧ ಮದ್ರಾಸ್ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಕೆಲ ಷರತ್ತುಗಳೊಂದಿಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅಂತಿಮವಾಗಿ ವಿಜಯದಶಮಿಯ ಸಂದರ್ಭದಲ್ಲಿ 58 ಮಾರ್ಗಗಳಲ್ಲಿ ಪಥ ಸಂಚಲನಕ್ಕೆ ಅನುಮತಿ ನೀಡಲಾಗಿತ್ತು.

2022ರಲ್ಲಿ ತಮಿಳುನಾಡು ಸರ್ಕಾರವು ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿತ್ತು. 2025ರಲ್ಲಿ ಚೆನ್ನೈಯಲ್ಲಿ ನಡೆದ ಗುರುಪೂಜೆ ಹಾಗೂ ಶಾಖಾ ತರಬೇತಿ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಪಡೆಯದ ಕಾರಣ 39 ಆರ್‌ಎಸ್‌ಎಸ್ ಸದಸ್ಯರನ್ನು ಪೊಲೀಸರು ಬಂಧಿಸಿದ್ದರು.

ಪ್ರಿಯಾಂಕ್‌ ಖರ್ಗೆ ಒತ್ತಾಯವೇನು?

ಶಾಲೆ, ಮೈದಾನ, ಮುಜರಾಯಿ ಇಲಾಖೆ ದೇವಸ್ಥಾನ ಅಥವಾ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಶಾಖೆ, ಸಾಂಘಿಕ್ ಅಥವಾ ಬೈಠಕ್ಗಳ ಹೆಸರಿನ ಚಟುವಟಿಕೆ ನಡೆಸುವುದನ್ನು ನಿರ್ಬಂಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಡಾವಳಿ ಕಳುಹಿಸಿದ್ದರು.ಈ ಬಗ್ಗೆ ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ಜರುಗಿಸಲು ಸಿದ್ದರಾಮಯ್ಯ ಅವರು ತಮ್ಮ ಕಾರ್ಯದರ್ಶಿಗೆ ಮುಚ್ಚಳಿಕೆ ಬರೆದು ಸೂಚಿಸಿದ್ದರು.

"ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುದಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನ ನಮಗೆ ಅಧಿಕಾರ ನೀಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು, ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ, ಘೋಷಣೆ ಕೂಗುತ್ತಾ ಯುವ ಸಮುದಾಯದ ಮನಸ್ಸಿನಲ್ಲಿ ಭಾರತದ ಏಕತೆಯ ವಿರುದ್ಧವಾಗಿ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಕಾರಾತ್ಮಕ ಆಲೋಚನೆ ತುಂಬಲಾಗುತ್ತಿದೆ," ಎಂದು ಪತ್ರದಲ್ಲಿ ವಿವರಿಸಿದ್ದರು.

Tags:    

Similar News