ಶಾಸಕರ ಬಲ ಇಲ್ಲದೇ ಸಿಎಂ ಆಗುವುದಿಲ್ಲ; ಹೈಕಮಾಂಡ್​, ಡಿಕೆಶಿಗೆ ಒಂದೇ ಮಾತಲ್ಲಿ ಸಿಎಂ ಸಂದೇಶ

ಜಲಸಂಪನ್ಮೂಲ ಇಲಾಖೆಗೆ ಪ್ರತಿ ವರ್ಷ 18 ಸಾವಿರ ಕೋಟಿ ರೂ. ಅನುದಾನ ನೀಡಿ ಮುಂದಿನ ನಾಲ್ಕು ವರ್ಷದೊಳಗೆ ಯುಕೆಪಿ-3 ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Update: 2025-10-13 12:09 GMT

ಸಿಎಂ ಸಿದ್ದರಾಮಯ್ಯ

Click the Play button to listen to article

ಭೋಜನಕೂಟಕ್ಕೂ, ಸಚಿವ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ. ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆಯಾಗಬೇಕಾದರೂ ಪಕ್ಷದ ವರಿಷ್ಠರು ಹಾಗೂ ಶಾಸಕರ ಒಮ್ಮತವೂ ಬಹಳ ಮುಖ್ಯ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ಅವರು,  ಡಿಸಿಎಂ ಡಿ.ಕೆ ಶಿವಕುಮಾರ್‌ ಸಿಎಂ ಆಸೆಗೆ ಎಂಎಲ್‌ಎಗಳ ಬೆಂಬಲವಿಲ್ಲ ಎಂಬುದಾಗಿ ಪರೋಕ್ಷವಾಗಿ ಹೇಳಿದ್ದಾರೆ. . 

ಸೋಮವಾರ ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ನವೆಂಬರ್‌ ತಿಂಗಳಲ್ಲಿ ಕ್ರಾಂತಿಯಾಗಲಿದೆ ಎಂಬ ಊಹಾಪೋಹಗಳ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಕ್ರಾಂತಿ ನಡೆಯುವುದಿಲ್ಲ ಎಂದು ತಿಳಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಸುಧಾರಣೆ

ಕಳೆದ ಐದು ದಿನಗಳಿಂದ ಆಸ್ಪ್ರತ್ರೆಯಲ್ಲಿದ ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಸುಧಾರಣೆಯಾಗಿದ್ದು, ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ವೈದ್ಯರ ಸಲಹೆ ಮೇರೆಗೆ ಅವರಿಗೆ ವಿಶ್ರಾಂತಿ ಅಗತ್ಯವಿದ್ದು, ಶೀಘ್ರ ಗುಣಮುಖರಾಗಲಿ ಎಂದರು.

ಮಾಟ ಮಂತ್ರಗಳಲ್ಲಿ ನಂಬಿಕೆಯಿಲ್ಲ

ಡಿಸಿಎಂ ಡಿ.ಕೆ ಶಿವಕುಮಾರ್ ಭಾನುವಾರ (ಅ.12) ಬೆಂಗಳೂರು ನಡಿಗೆ ಎಂಬ ಕಾರ್ಯಕ್ರಮ ಮಾಡಿದ್ದರು. ಮತ್ತಿಕರೆಯ ಜೆ.ಪಿ ಪಾರ್ಕ್ ನಲ್ಲಿಯೂ ಕಾರ್ಯಕ್ರಮವಿತ್ತು. ಶಾಸಕ ಮುನಿರತ್ನ ವೇದಿಕೆಗೆ ಆಗಮಿಸಿ, ತಮ್ಮ ಅಭಿಪ್ರಾಯವನ್ನು ನೀಡಬಹುದಾಗಿತ್ತು. ಆದರೆ ಶಾಸಕರು ತಮ್ಮ ಅಭಿಪ್ರಾಯವನ್ನು ತಿಳಿಸಲಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನವಿತ್ತೇ ಇಲ್ಲವೇ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಯಾವುದೇ ಮಾಟ ಮಂತ್ರಗಳಲ್ಲಿ ನಂಬಿಕೆಯಿರಿಸಿಲ್ಲ ಎಂದರು.

ನಾಲ್ಕು ವರ್ಷಗಳಲ್ಲಿ ಯುಕೆಪಿ -3 ಪೂರ್ಣ 

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡಲು ಈಗಾಗಲೇ ಆದೇಶಿಸಲಾಗಿದೆ. ಜಲಸಂಪನ್ಮೂಲ ಇಲಾಖೆಗೆ ಪ್ರತಿ ವರ್ಷ 18 ಸಾವಿರ ಕೋಟಿ ರೂ. ಅನುದಾನ ನೀಡಿ ಮುಂದಿನ ನಾಲ್ಕು ವರ್ಷದೊಳಗೆ ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವಾಲ್ಮೀಕಿ ನಾಯಕರಿಗೆ ಅವಕಾಶ

ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಹಾಗೂ ಮಧುಗಿರಿ ಶಾಸಕ ಕೆ.ಎನ್‌ ರಾಜಣ್ಣ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಸಂಪುಟ ಪುನರ್‌ ರಚನೆಯ  ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದವರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎನ್ನುವ ಮೂಲಕ ತನ್ನ ಆಪ್ತರನ್ನು ಸಂಪುಟಕ್ಕೆ ಕರೆತರುವ ಸೂಚನೆ ನೀಡಿದರು.

Tags:    

Similar News