ರಂಗಭೂಮಿ ಕಲಾವಿದ ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ನಿಧನ
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದವರಾದ ರಾಜು ತಾಳಿಕೋಟೆ ಅವರ ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟೆ. ನಟನೆಯಲ್ಲಿ ಪ್ರಸಿದ್ಧರಾದ ನಂತರ ಅವರು ತಾಳಿಕೋಟೆಯಲ್ಲಿ ವಾಸವಾಗಿದ್ದರು
ಉತ್ತರ ಕರ್ನಾಟಕದ ವಿಶಿಷ್ಟ ಸೊಗಡಿನ ಮಾತು, ತಮ್ಮದೇ ಆದ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಕನ್ನಡಿಗರ ಮನಗೆದ್ದಿದ್ದ ಹಿರಿಯ ರಂಗಭೂಮಿ ಕಲಾವಿದ, ಚಲನಚಿತ್ರ ನಟ ಹಾಗೂ ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟೆ (64) ಅವರು ಇಂದು (ಸೋಮವಾರ) ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗ, ರಂಗಭೂಮಿ ಮತ್ತು ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.
'ಬಿಗ್ ಬಾಸ್' ಖ್ಯಾತಿಯ ಶೈನ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ರಾಜು ತಾಳಿಕೋಟೆ ಅವರು ಉಡುಪಿಗೆ ಆಗಮಿಸಿದ್ದರು. ಭಾನುವಾರ ರಾತ್ರಿ ಚಿತ್ರೀಕರಣ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ, ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಈ ಹಿಂದೆಯೂ ಅವರಿಗೆ ಹೃದಯಾಘಾತವಾಗಿ, ಸ್ಟಂಟ್ ಅಳವಡಿಸಲಾಗಿತ್ತು.
'ಖಾಸ್ಗತೇಶ್ವರ'ನಿಂದ 'ಮನಸಾರೆ'ಯವರೆಗೆ
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದವರಾದ ರಾಜು ತಾಳಿಕೋಟೆ ಅವರ ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟೆ. ನಟನೆಯಲ್ಲಿ ಪ್ರಸಿದ್ಧರಾದ ನಂತರ ಅವರು ತಾಳಿಕೋಟೆಯಲ್ಲಿ ವಾಸವಾಗಿದ್ದರು. ತಮ್ಮದೇ ಆದ 'ಖಾಸ್ಗತೇಶ್ವರ ನಾಟಕ ಮಂಡಳಿ'ಯನ್ನು ಕಟ್ಟಿ, ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ನಾಟಕಗಳ ಮೂಲಕ ಜನರನ್ನು ರಂಜಿಸಿದ್ದರು. ಅದರಲ್ಲೂ, 'ಕಲಿಯುಗದ ಕುಡುಕ', 'ಕುಡುಕರ ಸಾಮ್ರಾಜ್ಯ'ದಂತಹ ನಾಟಕಗಳಲ್ಲಿನ ಅವರ 'ಕುಡುಕ'ನ ಪಾತ್ರಗಳು ಅವರನ್ನು ಮನೆಮಾತಾಗಿಸಿದ್ದವು.
ರಂಗಭೂಮಿಯಲ್ಲಿ ಅಪಾರ ಯಶಸ್ಸು ಗಳಿಸಿದ ನಂತರ, ಅವರು 'ಹೆಂಡ್ತಿ ಅಂದ್ರೆ ಹೆಂಡ್ತಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ, ಯೋಗರಾಜ್ ಭಟ್ ನಿರ್ದೇಶನದ 'ಮನಸಾರೆ' (2009) ಚಿತ್ರವು ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿತು. ನಂತರ 'ಪಂಚರಂಗಿ', 'ಮತ್ತೊಂದ್ ಮದುವೇನಾ..!', 'ಮೈನಾ' ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸಿದ್ದರು. ಅವರು 'ಬಿಗ್ ಬಾಸ್ ಕನ್ನಡ ಸೀಸನ್ 7'ರ ಸ್ಪರ್ಧಿಯಾಗಿಯೂ ಗಮನ ಸೆಳೆದಿದ್ದರು.
ವಿಜಯಪುರದಲ್ಲಿ ಅಂತ್ಯಸಂಸ್ಕಾರ
ಮೃತರ ಪಾರ್ಥಿವ ಶರೀರವನ್ನು ಉಡುಪಿಯಿಂದ ಅವರ ಸ್ವಂತ ಊರಾದ ವಿಜಯಪುರ ಜಿಲ್ಲೆಯ ತಾಳಿಕೋಟೆಗೆ ಕೊಂಡೊಯ್ಯಲಾಗುತ್ತಿದ್ದು, ನಾಳೆ (ಮಂಗಳವಾರ) ಅಲ್ಲಿಯೇ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಪುತ್ರ ತಿಳಿಸಿದ್ದಾರೆ. ರಾಜು ತಾಳಿಕೋಟೆ ಅವರ ನಿಧನದಿಂದ ಕನ್ನಡ ಕಲಾ ಲೋಕವು ಒಬ್ಬ ಅಪರೂಪದ ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ.