ಅನಧಿಕೃತ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ|ಕಾನೂನು ಸಾಧ್ಯತೆ ಪರಿಶೀಲಿಸಲು ಸಿಎಂ ಸೂಚನೆ; ಅ.8ರಂದು ಮತ್ತೆ ಸಭೆ
ನಕ್ಷೆ ಅನುಮೋದನೆ ಪಡೆಯದೆ, ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿ ಚರ್ಚೆ ನಡೆಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನಕ್ಷೆ ಅನುಮೋದನೆ (ಸಿಸಿ) ಪಡೆಯದೇ ನಿರ್ಮಿಸಿರುವ ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸುವಲ್ಲಿ ಆಗಿರುವ ತೊಡಕುಗಳ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ಸೋಮವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ ವಿಫಲವಾಯಿತು. ಸುಪ್ರೀಂಕೋರ್ಟ್ ಆದೇಶ ದೃಷ್ಟಿಯಲ್ಲಿಟ್ಟುಕೊಂಡು ಕಾನೂನು ಸಾಧ್ಯತೆಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲು ಅ.8 ರಂದು ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಲಾಯಿತು.
2024ರ ಡಿ.17ರಂದು ಸುಪ್ರೀಂಕೋರ್ಟ್ ಸಿಸಿ ಮತ್ತು ಒಸಿ ಕಡ್ಡಾಯಗೊಳಿಸಿ ಆದೇಶ ನೀಡಿತ್ತು. ನ್ಯಾಯಾಲಯದ ಆದೇಶದ ಬಳಿಕ ಗ್ರೇಟರ್ ಬೆಂಗಳೂರು ಸೇರಿದಂತೆ ರಾಜ್ಯ ವ್ಯಾಪಿ ಸಿಸಿ ಮತ್ತು ಒಸಿ ಇಲ್ಲದೇ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸಮಸ್ಯೆ ಉಂಟಾಗಿರುವ ಕುರಿತು ಚರ್ಚಿಸಲಾಯಿತು. ಇಂಧನ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಸಿಎಂ ನೀಡಿದ ಸೂಚನೆಗಳೇನು?
ಸುಪ್ರೀಂಕೋರ್ಟ್ ಆದೇಶವು ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ. ಯಾವ್ಯಾವ ರಾಜ್ಯಗಳು ಆದೇಶ ಅನುಷ್ಠಾನಗೊಳಿಸಿವೆ ಎಂಬುದನ್ನು ಪರಿಶೀಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು. ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಅನುಮತಿ ನೀಡಲು ಇರುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಯಿತು. ಈಗಾಗಲೇ ನಿರ್ಮಾಣವಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಸಾಧ್ಯವಿಲ್ಲ. ಸರ್ಕಾರದ ನಿರ್ಧಾರದಿಂದ ಜನರಿಗೆ ಅನುಕೂಲವಾಗಬೇಕು. ಹಾಗಾಗಿ ಸರ್ಕಾರ ಮುಂದಿರುವ ಆಯ್ಕೆಗಳೇನು ಎಂಬುದನ್ನು ಪರ್ಯಾಲೋಚಿಸಬೇಕು ಎಂದು ಸಿಎಂ ಮನವಿ ಮಾಡಿದರು.
ಸೂಕ್ತ ಅನುಮತಿ ಪಡೆಯದೇ ಈಗಾಗಲೇ ಮನೆ ನಿರ್ಮಿಸಿ ವಾಸವಿದ್ದಾರೆ. ಅಂತಹವರಿಗೆ ಒಂದು ಬಾರಿಗೆ ಅನ್ವಯವಾಗುವಂತೆ ನಿಯಮಿತಗೊಳಿಸಲು ಕಾನೂನಿನಲ್ಲಿ ಏನೆಲ್ಲಾ ಅವಕಾಶ ಇದೆ ಎಂಬುದರ ಕುರಿತು ಚರ್ಚಿಸಲಾಯಿತು. ಸುಪ್ರೀಂಕೋರ್ಟ್ ಆದೇಶ ಅನುಷ್ಠಾನಗೊಳ್ಳುವ ಮುಂಚೆ ಸಲ್ಲಿಕೆಯಾಗಿರುವ ಮಾರ್ಚ್ 2025ರವರೆಗಿನ ಅರ್ಜಿಗಳನ್ನು ಪರಿಗಣಿಸಿ ಒಸಿ ಮತ್ತು ಸಿಸಿಯಿಂದ ವಿನಾಯ್ತಿಗೊಳಿಸಿ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡುವ ಬಗ್ಗೆ ಕಾನೂನಿನ ಸಾಧ್ಯತೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಬೇಕು. ಈ ಹಿನ್ನೆಲೆಯಲ್ಲಿ ಅ.8 ರಂದು ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಸಂಬಂಧಪಟ್ಟ ಇಲಾಖಾ ಸಚಿವರು, ಸರ್ಕಾರದ ಅಡ್ವೋಕೇಟ್ ಜನರಲ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
ದೊಡ್ಡ ನಿವೇಶನಗಳಿಗೆ ರಿಯಾಯಿತಿ?
ನಕ್ಷೆ ಪಡೆಯದೆ ಹಾಗೂ ನಕ್ಷೆ ಉಲ್ಲಂಘಿಸಿ 30x40 ಅಳತೆಯ ನಿವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಒಸಿ, ಸಿಸಿಯಿಂದ ಸರ್ಕಾರ ರಿಯಾಯ್ತಿ ನೀಡಿದೆ. ಆದರೆ, ಅದಕ್ಕಿಂತ ಹೆಚ್ಚಿನ ದೊಡ್ಡ ನಿವೇಶನಗಳಲ್ಲೂ ಲಕ್ಷಾಂತರ ಮಂದಿ ಕಟ್ಟಡಗಳನ್ನು ನಿರ್ಮಿಸಿದ್ದು, ಇವರಿಗೂ ಒಂದು ಬಾರಿ ರಿಯಾಯ್ತಿ ನೀಡಬೇಕು ಎಂಬ ಮನವಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸಭೆ ನಡೆಸಿದರು. 30x40 ನಿವೇಶನ ಅಳತೆಗಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಅನ್ವಯಿಸುವಂತೆ ದಂಡ ವಿಧಿಸಿ ಒಸಿ, ಸಿಸಿಯಿಂದ ವಿನಾಯಿತಿ ನೀಡುವ ಬಗ್ಗೆ ಸಾಧಕ-ಬಾಧಕಗಳ ಕುರಿತು ಮತ್ತೊಮ್ಮೆ ಚರ್ಚಿಸಿ ನಿರ್ಣಯ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಏನಿದು ಸ್ವಾಧೀನಾನುಭವ ಪತ್ರ ?
ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಕಟ್ಟಡಕ್ಕೆ ನೀಡುವ ಕಾನೂನುಬದ್ಧ ದಾಖಲೆಯೇ ಕಟ್ಟಡ ಸ್ವಾಧೀನಾನುಭವ ಪತ್ರ (ಒಸಿ). ಕಟ್ಟಡವು ಅನುಮತಿ ಪಡೆದ ನಕ್ಷೆಯಂತೆ ನಿರ್ಮಾಣವಾಗಿದೆಯೇ, ವಾಸಕ್ಕೆ ಸುರಕ್ಷಿತವಾಗಿದೆ ಎಂಬುದನ್ನು ಈ ಪತ್ರವು ದೃಢಪಡಿಸುತ್ತದೆ. ಅನಧಿಕೃತವಾಗಿ ಕಟ್ಟಡ ಹಾಗೂ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ಈ ಪತ್ರವನ್ನು ನೀಡುವುದಿಲ್ಲ. ಸ್ವಾಧೀನಾನುಭವ ಪತ್ರ ಇಲ್ಲ ಎಂದರೆ ವಿದ್ಯುತ್ ಮತ್ತು ನೀರು, ಒಳಚರಂಡಿ ಸಂಪರ್ಕ ಸ್ಥಗಿತಗೊಳಿಸಲು ಆಯಾ ಇಲಾಖೆಗಳಿಗೆ ನಿರ್ದೇಶನವಿರುತ್ತದೆ.
ಸುಪ್ರೀಂಕೋರ್ಟ್ ಆದೇಶದಲ್ಲಿ ಏನಿದೆ?
ಸ್ಥಳೀಯ ಆಡಳಿತ ಸಂಸ್ಥೆಗಳಿಂದ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರ್ಮಾಣ ಆಗುತ್ತಿರುವ ಕಟ್ಟಡವನ್ನು ನಿರಂತವಾಗಿ ಪರಿಶೀಲನೆ ನಡೆಸಿ, ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಸ್ಥಳ ಪರಿಶೀಲನೆ ನಡೆಸಿದ ಬಳಿಕವಷ್ಟೇ ಸ್ವಾಧೀನಾನುಭವ ಪತ್ರ ವಿತರಿಸಬೇಕು. ಕಟ್ಟಡ ನಿಯಮ ಉಲ್ಲಂಘಿಸಿ ನಿರ್ಮಾಣ ಆಗಿದ್ದರೆ ಒಸಿ ನೀಡದೆ ಕ್ರಮ ಕೈಗೊಳ್ಳಬೇಕು. ಒಸಿ ವಿತರಣೆ ಬಳಿಕವಷ್ಟೇ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ಒಳಚರಂಡಿ ಸಂಪರ್ಕ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.