ನಿಷೇಧಿತ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದ ಡಿಸಿಎಂ; ಸಂಚಾರ ನಿಯಮ ಉಲ್ಲಂಘನೆ ಅಲ್ಲವೇ?
ಗಣ್ಯ ವ್ಯಕ್ತಿಗಳು ಮಾಧ್ಯಮಗಳಲ್ಲಿ ವಿಜೃಂಬಿಸಲು ಈ ರೀತಿಯ ನಿಯಮ ಉಲ್ಲಂಘನೆ ಮಾಡಿದರೆ ಪ್ರಶ್ನಿಸಬಾರದೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.;
ರಾಜ್ಯಾದ್ಯಂತ ದ್ವಿಚಕ್ರ ವಾಹನ ಸವಾರರಿಗೆ ರಾಜ್ಯ ಸರ್ಕಾರ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಅದರಲ್ಲೂ ಐಎಸ್‌ಐ ಗುರುತಿನ ಹೆಲ್ಮೆಟ್ ಧರಿಸಬೇಕೆಂಬ ನಿಯಮವೂ ಇದೆ. ಆದರೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಈ ನಿಯಮ ಅನ್ವಯಿಸುವಂತೆ ಕಾಣುತ್ತಿಲ್ಲ.
ಮಂಗಳವಾರ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ವೀಕ್ಷಣೆಗಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಐಎಸ್‌ಐ ಮಾರ್ಕ್ ಹೊಂದಿರದ ಹಾಫ್ ಹೆಲ್ಮೆಟ್ ಧರಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಸಣ್ಣ ಪುಟ್ಟ ವಾಹನ ಸವಾರರು ಹಾಫ್ ಹೆಲ್ಮೆಟ್ ಧರಿಸಿದರೆ ಅವರನ್ನು ಸಂಚಾರ ಪೊಲೀಸರು ತಡೆದು ದಂಡ ಹಾಕುತ್ತಾರೆ. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬೈರತಿ ಸುರೇಶ್ ಅನಧಿಕೃತ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಉಪ ಮುಖ್ಯಮಂತ್ರಿಗೆ ಸಂಚಾರ ಪೊಲೀಸರು ದಂಡ ಹಾಕುವರೇ, ಡಿ.ಕೆ. ಶಿವಕುಮಾರ್ ಅವರು ವಾಹನ ಸವಾರರಿಗೆ ಸುರಕ್ಷತೆಯ ಬಗ್ಗೆ ನೀಡುವ ಸಂದೇಶವೇನು ಎಂದು ಜನರು ಪ್ರಶ್ನಿಸಿದ್ದಾರೆ.
ಗಣ್ಯ ವ್ಯಕ್ತಿಗಳು ಮಾಧ್ಯಮಗಳಲ್ಲಿ ವಿಜೃಂಬಿಸಲು ಈ ರೀತಿಯ ನಿಯಮ ಉಲ್ಲಂಘನೆ ಮಾಡಿದರೆ ಪ್ರಶ್ನಿಸಬಾರದೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಚಾರಿ ನಿಯಮ ಹೇಳುವುದೇನು?
ಕಾನೂನು ಪ್ರಕಾರ ಹಾಫ್ ಹೆಲ್ಮೇಟ್ ಧರಿಸಲು ನಿಷೇಧವಿದೆ. ಐಎಸ್‌ಐ ಪ್ರಮಾಣೀತವಲ್ಲದ, ಒಡೆದ ಹೆಲ್ಮೆಟ್ ಬಳಸುವುದು ಕೂಡ ನಿಷಿದ್ಧ. ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಐಎಸ್‌ಐ ಪ್ರಮಾಣೀಕರಿಸದ ಹೆಲ್ಮೆಟ್ ಬಳಸಬೇಕು.
ತಲೆಯ ಮೇಲ್ಭಾಗ ಮತ್ತು ಬದಿಗಳನ್ನು ಮಾತ್ರ ಆವರಿಸುವ ಹಾಫ್ ಹೆಲ್ಮೆಟ್‌ಗಳು ಸುರಕ್ಷತವಲ್ಲ. ಹಾಗಾಗಿ ಅವುಗಳನ್ನು ಬಳಸಬಾರದು ಎಂದು ರಸ್ತೆಗೆ ಸುರಕ್ಷತಾ ನಿಯಮಗಳಲ್ಲಿ ತಿಳಿಸಲಾಗಿದೆ.